ಹಳೆಯ ಒಡಂಬಡಿಕೆKNCL

ಕೀರ್ತನೆಗಳು 135

1ಅಲ್ಲೆಲೂಯ I ಭಜಿಸಿರಿ, ಪ್ರಭುವಿನ ಶ್ರೀನಾಮವನು I ಭಜಿಸಿರಿ ಪ್ರಭುವಿನ ದಾಸರೆ, ಆತನನು II

2ಕೀರ್ತಿಸಿರಿ ಪ್ರಭುವನು ಆತನ ಮಂದಿರದಲ್ಲಿರುವವರೇ I ನಮ್ಮ ದೇವಾಲಯದ ಪ್ರಾಕಾರದಲ್ಲಿಹ ಸೇವಕರೇ II

3ಪ್ರಭು ಒಳ್ಳೆಯವನು, ಆತನಿಗೆ ಸ್ತುತಿಸ್ತೋತ್ರ I ಆತನ ನಾಮವನು ಸ್ತುತಿಸಿರಿ, ಅದು ಮನೋಹರ II

4ಆಯ್ದುಕೊಂಡನಾತ ಯಕೋಬ್ಯ ವಂಶವನು I ಸ್ವಕೀಯ ಜನರನ್ನಾಗಿ ಇಸ್ರಯೇಲರನು II

5ಗೊತ್ತೆನಗೆ ನಮ್ಮ ಪ್ರಭು ಘನವಂತನೆಂದು I ಸಕಲ ದೇವರುಗಳಿಗಿಂತಲು ಉನ್ನತನೆಂದು I

6ಮಾಡುವನು ಪ್ರಭು ತನಗಿಷ್ಟ ಬಂದುದನು I ಭೂಮ್ಯಾಕಾಶ, ಸಮುದ್ರ ಸಾಗರದೊಳು II

7ಏಳಮಾಡುವನು ದಿಗಂತದೊಳು ಮೋಡವನು I ಹೊಳೆಯಮಾಡುವನು ಮಳೆಗೋಸ್ಕರ ಮಿಂಚನು I ಬೀಸಮಾಡುವನು ಉಗ್ರಾಣದಿಂದ ಗಾಳಿಯನು II

8ಕೊಂದನು ಚೊಚ್ಚಲುಗಳನು ಈಜಿಪ್ಟಿನೊಳು I ಮನುಷ್ಯರೊಳು, ಪಶುಪ್ರಾಣಿಗಳೊಳು II

9ಓ ಈಜಿಪ್ಟೆ, ನಿನ್ನೊಳು ಮಾಡಿದನು ಅದ್ಭುತ ಪವಾಡಗಳನು I ಫರೋಹನ ಮೇಣ್ ಅವನ ಸೇವಕರ ವಿರುದ್ಧ ಗೈದನವುಗಳನು II

10ಕೆಡವಿಬಿಟ್ಟನಾತ ದೊಡ್ಡ ರಾಷ್ಟ್ರಗಳನು I ಕೊಂದುಹಾಕಿದನಾತ ಬಲಿಷ್ಠರಾಜರನು II

11ನಿರ್ಮೂಲ ಮಾಡಿದನಾತ ಅಮೋರ್ಯರ ಸೀಹೋನ್ ರಾಜನನು I ಬಾಷಾನಿನ ಅರಸ ಓಗನನು, ಕಾನಾನಿನ ರಾಜ್ಯಗಳೆಲ್ಲವನು II

12ಕೊಟ್ಟನು ಅವರ ನಾಡನು ಇಸ್ರಯೇಲರಿಗೆ I ಅದು ಸ್ವಂತ ಸೊತ್ತಾಯಿತು ಆತನಾ ಪ್ರಜೆಗೆ II

13ನಿನ್ನ ನಾಮ ಪ್ರಭು ಶಾಶ್ವತ I ನಿನ್ನ ಸ್ಮರಣೆಯೂ ಅನವರತ II

14ದೊರಕಿಸುವನು ಪ್ರಭು ನ್ಯಾಯವನು ತನ್ನ ಪ್ರಜೆಗೆ I ತೋರುವನು ಅನುಕಂಪವನು ತನ್ನ ಭಕ್ತಾದಿಗಳಿಗೆ II

15ರಾಷ್ಟ್ರಗಳ ವಿಗ್ರಹಗಳು ಬರೀ ಬೆಳ್ಳಿಬಂಗಾರ I ಅವುಗಳೆಲ್ಲ ಮಾನವನ ಕೈಕೆಲಸಗಳು ಮಾತ್ರ II

16ಬಾಯಿದ್ದರೂ ಅವು ಮಾತನಾಡುವುದಿಲ್ಲ I ಕಣ್ಣುಗಳಿದ್ದರೂ ಅವು ನೋಡುವುದಿಲ್ಲ II

17ಕಿವಿಯಿದ್ದರೂ ಅವು ಕೇಳುವುದಿಲ್ಲ I ಅವುಗಳ ಬಾಯಲ್ಲಿ ಉಸಿರೇ ಇಲ್ಲ II

18ಅವುಗಳಂತಾಗುವರು ಅವುಗಳನ್ನು ಮಾಡುವವರು I ಅವುಗಳಂತಾಗುವರು ಅವುಗಳನ್ನು ನಂಬುವವರು II

19ಇಸ್ರಯೇಲಿನ ಗೋತ್ರವೇ, ಭಜಿಸು ಪ್ರಭುವನು I ಆರೋನನ ವಂಶವೇ, ಭಜಿಸು ಆ ವಿಭುವನು II

20ಲೇವಿಯರ ಮನೆತನವೇ, ಭಜಿಸು ಪ್ರಭುವನು I ಪ್ರಭುವಿನ ಭಕ್ತರೇ, ಭಜಿಸಿ ಆ ವಿಭುವನು II

21ಜೆರುಸಲೇಮಿನಲ್ಲಿ ವಾಸಿಸುವ ಪ್ರಭು ಘನಹೊಂದಲಿ I ಆತನ ಕೀರ್ತಿ ಸಿಯೋನಿನಿಂದ ಹಬ್ಬಿಹರಡಲಿ I ಅಲ್ಲೆಲೂಯ! II