ಹಳೆಯ ಒಡಂಬಡಿಕೆKNCL

ಕೀರ್ತನೆಗಳು 122

1(ಯಾತ್ರಾಗೀತೆ) ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ I ಆಯಿತೆನಗೆ ಆನಂದ, ಜನರೆನ್ನ ಕರೆದಾಗ II

2ನನ್ನ ಕಾಲುಗಳು ಓ ಜೆರುಸಲೇಮೇ I ತಲುಪಿವೆ ನಿನ್ನ ಪುರದ್ವಾರಗಳನೇ II

3ನೋಡು, ಜೆರುಸಲೇಮ್ ಪಟ್ಟಣವಿದು I ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು II

4ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ I ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ I ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ II

5ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು I ದಾವೀದನ ಮನೆತನದವರ ಸಿಂಹಾಸನಗಳು II

6ಜೆರುಸಲೇಮಿನ ಶುಭಕ್ಕಾಗಿ ಮಾಡಿರಿ ಪ್ರಾರ್ಥನೆ I “ಜೆರುಸಲೇಮ್, ನಿನ್ನಭಿಮಾನಿಗಳಿಗೆ ಪ್ರವರ್ಧನೆ II

7ಶುಭವಿರಲೀ ನಿನ್ನೀ - ಪೌಳಿಗೋಡೆಗಳೊಳಗೆ” II ಸಂರಕ್ಷಣೆ ಇರಲಿ ನಿನ್ನ ಅರಮನೆಗಳೊಳಗೆ” II

8ನನ್ನ ಬಂಧುಬಳಗದವರ ನಿಮಿತ್ತ I “ನಿನಗೆ ಶುಭವಿರಲಿ” ಎಂಬುದು ನನ್ನ ಮತ II

9ನಮ್ಮ ಸ್ವಾಮಿದೇವರ ಮಂದಿರದ ನಿಮಿತ್ತ I ಹರಸುವೆ ನಿನ್ನ ಸುಕ್ಷೇಮವನು ಹಾರೈಸುತ II