ಹಳೆಯ ಒಡಂಬಡಿಕೆKNCL

ಕೀರ್ತನೆಗಳು 118

1ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II

2ಸಾರಲಿ ಇಸ್ರಯೇಲಿನ ಜನತೆ I ‘ಆತನ ಪ್ರೀತಿ ಶಾಶ್ವತ’ ಎಂದೆ II

3ಸಾರಲಿ ಆರೋನನ ವಂಶಲತೆ: I ‘ಆತನ ಪ್ರೀತಿ ಶಾಶ್ವತ’ ಎಂದೆ II

4ಸಾರಲಿ ಆತನ ಭಕ್ತರ ಪಂಥ I ಆತನ ಪ್ರೀತಿ ಶಾಶ್ವತ ಅಂಥ II

5ಇಕ್ಕಟ್ಟಿನಲ್ಲಿ ಮೊರೆಯಿಟ್ಟೆನು ಪ್ರಭುವಿಗೆ I ಕಿವಿಗೊಟ್ಟು ಬಿಡುಗಡೆಯಿತ್ತನು ಆತನೆನಗೆ II

6ಪ್ರಭು ನನ್ನ ಕಡೆ ಇರಲು ಭಯಪಡೆನು I ನನಗೇನು ಮಾಡಿಯಾನು ಮನುಜನು? II

7ನೆರವು ನೀಡಲು ಪ್ರಭು ಎನ್ನಕಡೆ ಇಹನು I ಶತ್ರುಗಳತ್ತ ಜೇತಾರನಾಗಿ ನೋಡುವೆನು II

8ಮನುಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II

9ರಾಜರಲಿ ಭರವಸೆಯಿಡುವುದಕ್ಕಿಂತ I ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ II

10ಶತ್ರುರಾಷ್ಟ್ರಗಳೆಲ್ಲಾ ಸುತ್ತುವರಿದಿದ್ದವು ಎನ್ನನು I ಪ್ರಭುವಿನ ನಾಮಬಲದಲಿ ಧ್ವಂಸಮಾಡಿದೆನವುಗಳನು II

11ಸುತ್ತಮುತ್ತಲು ಮುತ್ತಿಕೊಂಡಿದ್ದರು ಎನ್ನನು I ಪ್ರಭುವಿನ ನಾಮಬಲದಲಿ ಸಂಹರಿಸಿದೆನವರನು II

12ಕವಿದಿದ್ದರು ಎನ್ನನು ಜೇನುನೊಣಗಳಂತೆ I ಪ್ರಭುವಿನ ನಾಮಬಲದಲಿ ಅವರನು ಸಂಹರಿಸಿದೆ I ಮುಳ್ಳುಗಿಡವನು ಬೆಂಕಿ ಸುಟ್ಟುಹಾಕುವಂತೆ II

13ನನ್ನನು ತಳ್ಳಿ ಬೀಳಿಸ ನೋಡಿದರು ನೆಲಕೆ I ಆದರೆ ಪ್ರಭು ನೆರವು ನೀಡಿದನು ಎನಗೆ II

14ಪ್ರಭುವೇ ನನಗೆ ಬಲವು, ಧೈರ್ಯವು I ಆತನಿಂದಲೇ ನನಗೆ ಉದ್ಧಾರವು II

15ಜಯಘೋಷ, ಹರ್ಷಸುನಾದ ಸಜ್ಜನರ ಬಿಡಾರದಿಂದ I “ಪರಾಕ್ರಮ, ಪ್ರದರ್ಶನ ಪ್ರಭುವಿನ ಬಲಗೈಯಿಂದ II

16ವಿಜಯಸಾಧನ ಪ್ರಭುವಿನಾ ಬಲಗೈಯಿಂದ I ಪರಾಕ್ರಮ, ಪ್ರದರ್ಶನವೂ ಅದರಿಂದ” II

17ಸಾಯೆನು, ಜೀವದಿಂದಿರುವೆನು ನಾನು I ಪ್ರಭುವಿನ ಕಾರ್ಯಗಳನು ಸಾರುವೆನು II

18ಗುರಿಪಡಿಸಿಹನು ಎನ್ನನು ಪ್ರಭು ಕಠಿಣ ಶಿಕ್ಷೆಗೆ I ಆದರೂ ಗುರಿಮಾಡಲಿಲ್ಲ ಎನ್ನನು ಮರಣಕೆ II

19ತೆರೆಯಿರಿ ಎನಗೆ ನೀತಿದ್ವಾರಗಳನು I ಒಳನುಗ್ಗಿ ಹೊಗಳುವೆನು ಪ್ರಭುವನು II

20ಇದುವೇ ದ್ವಾರ ಪ್ರಭುವಿನ ಮಂದಿರಕೆ I ಇದುವೇ ಪ್ರವೇಶಮಾರ್ಗ ಸಜ್ಜನರಿಗೆ II

21ಸದುತ್ತರ ಪಾಲಿಸಿದ ಪ್ರಭೂ, ನಿನಗೆ ವಂದನೆ I ಉದ್ಧಾರ ಮಾಡಿದೆ, ನಿನಗೆ ಕೃತಜ್ಞತಾವಂದನೆ II

22ಮನೆಕಟ್ಟುವವರು ಮೂಲೆಗೆಸೆದ ಕಲ್ಲು I ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು II

23ಪ್ರಭುವಿನಿಂದಲೆ ಆದ ಈ ಕಾರ್ಯ I ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ! II

24ಪ್ರಭುವೇ ನಿಯೋಜಿಸಿದ ದಿನವಿದು I ಹರ್ಷಿಸಿ ಆನಂದಿಸೋಣ ಇಂದು II

25ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು I ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು II

26ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ I ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ II

27ಪ್ರಭುವೆ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು I ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ, ಹಿಡಿದು ರೆಂಬೆಗಳನು II

28ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ I ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ II