ಹಳೆಯ ಒಡಂಬಡಿಕೆKNCL

ಕೀರ್ತನೆಗಳು 115

1ನಮಗಲ್ಲ ಹೇ ಪ್ರಭು, ನಮಗಲ್ಲ ಮಹಿಮೆ I ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ I ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ II

2ಅನ್ಯಜನರು ನುಡಿಯುವುದೆಂತು : I “ಅವರ ದೇವರೆಲ್ಲಿ?” ಎಂದು II

3ಪರದಲ್ಲಿಹನು ನಮ್ಮ ದೇವನು I ಗೈವನು ತನಗಿಷ್ಟ ಬಂದುದನು II

4ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ I ಅವು ಮಾನವನ ಕೈ ಕೆಲಸಗಳು ಮಾತ್ರ II

5ಬಾಯಿದ್ದರೂ ಅವು ಮಾತಾಡುವುದಿಲ್ಲ I ಕಣ್ಣುಗಳಿದ್ದರೂ ಅವು ಕಾಣುವುದಿಲ್ಲ II

6ಕಿವಿಯಿದ್ದರೂ ಅವು ಕೇಳುವುದಿಲ್ಲ I ಮೂಗಿದ್ದರೂ ಅವು ಮೂಸುವುದಿಲ್ಲ I ಗಂಟಲೊಳು ಅವಕೆ ಶಬ್ದವೇ ಇಲ್ಲ II

7ಕೈಯಿದ್ದರೂ ಅವು ಮುಟ್ಟುವುದಿಲ್ಲ I ಕಾಲಿದ್ದರೂ ಅವು ನಡೆಯುವುದಿಲ್ಲ II

8ಅವುಗಳಂತಾಗುವರು ಅವುಗಳನು ಮಾಡುವವರು I ಅವುಗಳಂತಾಗುವರು ಅವುಗಳನು ನಂಬುವವರು II

9ಪ್ರಭುವಿನಲ್ಲಿದೆ ಭರವಸೆ ಇಸ್ರಯೇಲ್ ಜನರಿಗೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II

10ಪ್ರಭುವಿನಲ್ಲಿದೆ ಭರವಸೆ ಆರೋನನ ಕುಲಕೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II

11ಪ್ರಭುವಿನಲ್ಲಿದೆ ಭರವಸೆ ಆತನ ಭಕ್ತಜನರಿಗೆ I ಆತನೇ ಸಹಾಯಕ, ರಕ್ಷಾಕವಚ ಅವರಿಗೆ II

12ಆಶೀರ್ವದಿಸುವನು ಪ್ರಭು ಮರೆಯದೆ ನಮ್ಮನು I ಇಸ್ರಯೇಲ್ ವಂಶವನು, ಆರೋನನ ಕುಲವನು II

13ಆಶೀರ್ವದಿಸುವನು ಪ್ರಭು ತನ್ನಲಿ ಭಯಭಕ್ತಿಯುಳ್ಳವರನು I ಚಿಕ್ಕವರು ದೊಡ್ಡವರೆನ್ನದೆ ಭಯಭಕ್ತಿಯುಳ್ಳವರನು II

14ವೃದ್ಧಿಗೊಳಿಸಲಿ ಪ್ರಭುವು ನಿಮ್ಮನು I ವೃದ್ಧಿಗೊಳಿಸಲಿ ನಿಮ್ಮ ಮಕ್ಕಳನು II

15ಇಹಪರಗಳನು ಉಂಟುಮಾಡಿದ ಪ್ರಭುವಿಂದ I ಲಭಿಸುವಂತಾಗಲಿ ನಿಮಗೆ ಆಶೀರ್ವಾದ II

16ಪ್ರಭುವಿಗೆ ಸ್ವಂತವಾದುದು ಪರಲೋಕ I ನರರಿಗೆ ಕೊಟ್ಟಿಹನಾತನು ಭೂಲೋಕ II

17ಸ್ತುತಿಸುವುದಿಲ್ಲ ಸತ್ತವರಾರೂ ಪ್ರಭುವನು I ಕೀರ್ತಿಸರು ಪಾತಾಳಕ್ಕಿಳಿವವರು ಆತನನು II

18ನಾವಾದರೋ ಪ್ರಭುವನು ಹೊಗಳಿ ಹಾಡುವೆವು I ಇಂದಿಗೂ ಎಂದೆಂದಿಗೂ ಹೊಗಳಿ ಹಾಡುವೆವು II ಅಲ್ಲೆಲೂಯ.