ಹಳೆಯ ಒಡಂಬಡಿಕೆKNCL

ಕೀರ್ತನೆಗಳು 114

1ಇಸ್ರಯೇಲ್ ಜನರು ಈಜಿಪ್ಟನು ಬಿಟ್ಟು ಹೊರಟಾಗ I ಯಕೋಬ್ಯರು ಪರ ನುಡಿಯಾಡುವರನು ಬಿಟ್ಟಗಲಿದಾಗ, II

2ಜುದೇಯ ಆಯಿತಾತನಿಗೆ ದೇವಾಲಯ I ಇಸ್ರಯೇಲ್ ಆಯಿತಾತನಿಗೆ ಸ್ವರಾಜ್ಯ II

3ಇದ ಕಂಡು ಓಡಿಹೋಯಿತು ಕಡಲು I ಮರಳಿ ಬಂದಿತು ಜೋರ್ಡಾನ್ ಹೊನಲು II

4ಕುಪ್ಪಳಿಸಿದವು ಪರ್ವತಗಳು ಟಗರುಗಳಂತೆ I ಕುಣಿದವು ಬೆಟ್ಟಗುಡ್ಡಗಳು ಕುರಿಮರಿಗಳಂತೆ II

5ಕಡಲೇ, ಓಡುತ್ತಿರುವೆ ಏಕೆ? I ಜೋರ್ಡನ್, ಮರಳುತಿರುವೆ ಏಕೆ? II

6ಪರ್ವತಗಳೇ, ಕುಪ್ಪಳಿಸಿದಿರೇಕೆ ಟಗರುಗಳಂತೆ? I ಬೆಟ್ಟಗುಡ್ಡಗಳೇ, ಕುಣಿದಿರೇಕೆ ಕುರಿಮರಿಗಳಂತೆ? II

7ನಡುಗು ಭೂಲೋಕವೇ, ಪ್ರಭುವಿನ ಮುಂದೆ I ನಡುನಡುಗು ಯಕೋಬ ದೇವರ ಮುಂದೆ II

8ಮಾರ್ಪಡಿಸಿಹನು ಗೋರ್ಕಲ್ಲನು ಕೊಳವಾಗಿ I ಕಲ್ಲು ಬಂಡೆಯನು ನೀರಿನ ಬುಗ್ಗೆಯಾಗಿ II