ಹಳೆಯ ಒಡಂಬಡಿಕೆKNCL

ಕೀರ್ತನೆಗಳು 112

1ಅಲ್ಲೆಲೂಯ I ಪ್ರಭುವಿನಲಿ ಭಯಭಕ್ತಿ ಉಳ್ಳವನು ಧನ್ಯನು I ಆತನಾಜ್ಞೆಗಳಲಿ ಹಿಗ್ಗುವವನು ಭಾಗ್ಯನು II

2ಬಲಿಷ್ಠವಾಗುವುದು ಜಗದೊಳು ಅವನ ಸಂತಾನ I ಸಜ್ಜನರ ಸಂತತಿ ಪಡೆವುದು ಆಶೀರ್ವಚನ II

3ಸಿರಿಸಂಪತ್ತಿರುವುದವನ ಮನೆಯಲಿ ಸಮೃದ್ಧಿಯಾಗಿ I ನೀತಿ ಫಲಿಸುವುದು ಆತನ ಮನದಲಿ ಶಾಶ್ವತವಾಗಿ II

4ಸಜ್ಜನನಿಗೆ ಮೂಡುವುದು ಜ್ಯೋತಿ ಕತ್ತಲೊಳು I ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು II

5ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ I ನ್ಯಾಯದಿಂದ ವ್ಯವಹರಿಸುವಂಥಾ ಮನುಜನು ಭಾಗ್ಯವಂತ II

6ಅಚಲನಾಗಿರುವನು ನೀತಿವಂತನು I ಮರೆಯಲಾರರು ಎಂದಿಗೂ ಆತನನು II

7ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ I ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ II

8ದೃಢವಿದೆ ಅವನ ಮನ, ಎದೆಗುಂದನವನು I ಕಾಣುವನು ದುರುಳರಿಗಾಗುವ ದಂಡನೆಯನು II

9ಉದಾರತೆಯಿಂದ ಕೊಡುವನು ಬಡವರಿಗೆ I ಫಲಿಸುವುದು ಅವನಾ ನೀತಿ ಸದಾಕಾಲಕೆ I ಮಹಿಮೆತರುವ ಕೋಡುಮೂಡುವುದು ಅವನಿಗೆ II

10ಇದನು ಕಂಡು ಕೆರಳುವನಾ ದುರುಳನು I ಹೊಂದುವನು ಈ ಪರಿ ಆಶಾಭಂಗವನು I ಹಲ್ಲು ಕಡಿಯುತ ಅವನು ಹಾಳಾಗುವನು II