ಹಳೆಯ ಒಡಂಬಡಿಕೆKNCL

ಕೀರ್ತನೆಗಳು 109

1ಹೇ ದೇವಾ, ನೀ ಸ್ತುತಿಗೆ ಯೋಗ್ಯ I ನೀನು ಸುಮ್ಮನಿರುವುದು ಸರಿಯಾ? II

2ತೆರೆದಿಹರು ಬಾಯಿ ದುರುಳರು, ವಂಚಕರು ನನಗೆದುರಾಗಿ I ಸುಳ್ಳು ನಾಲಿಗೆಗಳು ಆಡುತ್ತಿವೆ ನನಗೆ ವಿರುದ್ಧವಾಗಿ II

3ಹಾಕಿಹರು ದ್ವೇಷತುಂಬಿದ ಮಾತುಗಳ ಮುತ್ತಿಗೆ I ನನ್ನ ಎದುರಿಸುತಿಹರು ನಿಷ್ಕಾರಣವಾಗಿಯೆ II

4ಪ್ರೀತಿಗೆ ಪ್ರತಿಯಾಗಿ ಮಾಡುತಿಹರು ಆಪಾದನೆ I ಆದರೂ ಮಾಡುತ್ತಿರುವೆ ಅವರಿಗಾಗಿ ಪ್ರಾರ್ಥನೆ II

5ಉಪಕಾರಕ್ಕೆ ಅಪಕಾರವನ್ನೆಸಗಿಹರು I ಗೆಳೆತನಕ್ಕೆ ಹಗೆತನವನ್ನೇ ತೋರಿಹರು II

6ತಪ್ಪುಹೊರಿಸುವವನನು ನಿಲ್ಲಿಸು ಆ ಶತ್ರುವಿನ ಬಲಗಡೆಗೆ I ಗುರಿಪಡಿಸು ಅವನನು ಭ್ರಷ್ಟ ನ್ಯಾಯಾಧೀಶನ ತೀರ್ಪಿಗೆ II

7ಅಪರಾಧಿಯಾಗಲಿ ಅವನು ನ್ಯಾಯವಿಚಾರಣೆಯಲಿ I ಅವನ ಪ್ರಾರ್ಥನೆಯೂ ಪಾಪವಾಗಿ ಎಣಿಸಲ್ಪಡಲಿ II

8ಅಲ್ಪವಾಗಿರಲಿ ಅವನ ಜೀವನಾವಧಿ I ಮತ್ತೊಬ್ಬನದಾಗಲಿ ಅವನಾಸ್ತಿಪಾಸ್ತಿ II

9ತಬ್ಬಲಿಗಳಾಗಲಿ ಅವನ ಮಕ್ಕಳುಮರಿ I ವಿಧವೆಯಾಗಲಿ ಅವನ ನಾರಿಮಣಿ II

10ತಿರುಕರಂತೆ ಅಲೆಯಲಿ ಅವನ ಮಕ್ಕಳು ಭಿಕ್ಷೆಬೇಡುತ I ಹೊರದೂಡಲ್ಪಡಲಿ ತಮ್ಮ ಪಾಳುಬಿದ್ದಾಮನೆಗಳಿಂದ II

11ಕಸಿದುಕೊಳ್ಳಲಿ ಅವನದೆಲ್ಲವನು ಸಾಲಿಗನು I ಸುಲಿದುಕೊಳ್ಳಲಿ ಪರರು ಅವನ ಕಷ್ಟಾರ್ಜಿತವನು II

12ಕರುಣೆತೋರುವವನಾರೂ ಅವನಿಗಿಲ್ಲವಾಗಲಿ I ಅವನ ತಬ್ಬಲಿ ಮಕ್ಕಳನಾರೂ ಕನಿಕರಿಸದಿರಲಿ II

13ನಿರ್ಮೂಲವಾಗಲಿ ಅವನಾ ಪೀಳಿಗೆ I ನಿರ್ನಾಮವಾಗಲಿ ಮರುವಂಶದೊಳಗೆ II

14ಮರೆಯದಿರಲಿ ಪ್ರಭು ಅವನಾ ಹಿರಿಯರ ದೋಷವನು I ಪರಿಹರಿಸದಿರಲಿ ಅವನ ತಾಯಿಯು ಗೈದ ಪಾಪವನು II

15ಅವರ ಪಾಪಗಳು ಪ್ರಭುವಿನ ನೆನಪಲ್ಲಿರಲಿ I ಅವನ ಹೆಸರೇ ಇಲ್ಲದಂತಾಗಲಿ ಧರೆಯಲಿ II

16ಯಾರೊಬ್ಬನಿಗು ಮರುಕತೋರೆ ಮರೆತುಬಿಟ್ಟನವನು I ಕೊಲ್ಲಲು ಯತ್ನಿಸಿದನು ದೀನರನು, ಮನಗುಂದಿದವರನು II

17ಅವನಿಗೆ ಪ್ರಿಯ ಶಪಿಸುವುದೆಂದರೆ, ಎರಗಲಿದೀಗ ಅವನ ಮೇಲೇ I ಆಶೀರ್ವದಿಸುವುದು ಅವನಿಗಪ್ರಿಯ, ಇರಲಿ ಅವನಿಗದು ದೂರದಲೇ II

18ಶಪಿಸುವುದೆಂದರೆ ಅವನಿಗೆ ಉಡಿಗೆತೊಡಿಗೆಯಂತೆ I ಇಳಿಯಲಿ ಅದೀಗ ಅವನ ದೇಹಕೆ ನೀರಿನಂತೆ I ಸೇರಲಿ ಅದೀಗ ಅವನ ಕೀಲಿಗೆ ಎಣ್ಣೆಯಂತೆ II

19ಅವನಿಗಿರಲಿ ಶಾಪ ಹೊದಿಕೆಯಂತೆ I ಅದುವೆ ಅನುದಿನದ ನಡುಗಟ್ಟಂತೆ II

20ನನಗೆದುರಾಡಿ ತಪ್ಪು ಹೊರಿಸುವವರಿಗೆ I ಅದುವೇ ಪ್ರಭುವಿನಿಂದ ಗಿಟ್ಟುವ ಕೊಡುಗೆ II

21ಹೇ ಪ್ರಭು, ದೇವಾ, ನನ್ನನಾದರಿಸು ಅಕ್ಕರೆಯಿಂದ I ನನ್ನ ಪಕ್ಷವಹಿಸಿ ರಕ್ಷಿಸು ನಿನ್ನ ನಾಮದ ಪ್ರಯುಕ್ತ II

22ಬಡವ ನಾನು, ನನಗಿದೆ ಕುಂದುಕೊರತೆ I ನನ್ನ ಎದೆಗೆ ಅಲಗೇ ನಾಟಿದಂತಿದೆ II

23ನಾ ಗತಿಸಿಹೋಗುತ್ತಿರುವೆ ಬೈಗಿನ ನೆರಳಂತೆ I ಬಿರುಗಾಳಿ ಕೊಂಡೊಯ್ಯುವ ಮಿಡತೆಯಂತೆ II

24ಬಡಕಲಾಯಿತೆನ್ನ ದೇಹ ಬರಡಿಲ್ಲದೆ I ನಡುಕ ಹುಟ್ಟಿತು ಕಾಲಿಗೆ ತ್ರಾಣವಿಲ್ಲದೆ II

25ಗುರಿಯಾಗಿರುವೆನು ನಾ ಜನರ ಅಪಹಾಸ್ಯಕ್ಕೆ I ನೋಡುವವರು ತಲೆಯಾಡಿಸಿ ಮಾಡುವ ನಿಂದೆಗೆ II

26ಹೇ ಪ್ರಭೂ, ಹೇ ದೇವಾ, ನೆರವಾಗಯ್ಯಾ I ಅಚಲಪ್ರೀತಿಯಿಂದ ನನ್ನ ರಕ್ಷಿಸಯ್ಯಾ II

27ನನ್ನ ರಕ್ಷಣೆ ನಿನ್ನ ಕೈಯಿಂದಾದುದೆಂದು ಅವರರಿಯಲಿ I ಅದು ನಿನ್ನಿಂದಲೇ ಹೇ ಪ್ರಭು, ಆದುದೆಂದು ಖಚಿತವಾಗಲಿ II

28ಅವರೆನ್ನನು ಶಪಿಸಿದರೂ ನೀನೆನ್ನನು ಹರಸು I ನನ್ನೆದುರಾಳಿಗೆ ಅಪಮಾನವನು ಹೊರಿಸು I ನಿನ್ನ ದಾಸನೆನಗೆ ಆನಂದವನು ಪಾಲಿಸು II

29ಮಾನಭಂಗವಾಗಲಿ ನನ್ನಾ ನಿಂದಕರಿಗೆ I ಬಟ್ಟೆಯಂತೆ ಅವರಿಗಂಟಿಕೊಳ್ಳಲಿ ಹೇಸಿಗೆ II

30ಕೊಂಡಾಡುವೆನು ಪ್ರಭುವನು ಬಹಳವಾಗಿ I ಕೀರ್ತಿಸುವೆನು ಆತನನು ಸಾಮೂಹಿಕವಾಗಿ II

31ನಿಂತಿರುವನು ಪ್ರಭು ಬಡವನ ಬಲಗಡೆ I ವಿಧಿಸುವವರಿಂದ ತಪ್ಪಿಸುವನು ಮರಣದಂಡನೆ II