ಹಳೆಯ ಒಡಂಬಡಿಕೆKNCL

ಕೀರ್ತನೆಗಳು 107

1ಕೃತಜ್ಞತೆಯಿಂದ ಸಲ್ಲಿಸಿರಿ ಪ್ರಭುವಿಗೆ ಸ್ತುತಿಯನು I ಆತನ ಪ್ರೀತಿ ಶಾಶ್ವತ, ಆತನು ಒಳ್ಳೆಯವನು II

2ಸ್ತುತಿಸಲಿ ಆತನನು ವಿಮುಕ್ತಿ ಪಡೆದವರೆಲ್ಲರು I ಶತ್ರುಗಳಿಂದ ಬಿಡುಗಡೆ ಹೊಂದಿದವರೆಲ್ಲರು II

3ಅಂತೆಯೇ ವಂದಿಸಲಿ ಬಂದವರು ಚತುರ್ದಿಕ್ಕುಗಳಿಂದ I ಒಂದಾಗಿ ಕೂಡಿಸಲ್ಪಟ್ಟವರೆಲ್ಲರು ನಾನಾ ದೇಶಗಳಿಂದ II

4ಅಲೆದರು ಮರುಳುಗಾಡಿನಲಿ ದಾರಿಕಾಣದೆ I ಬಳಲಿದರು ಜನರಿರುವ ಊರು ಸಿಗದೆ II

5ನರಳಿದರು ಹಸಿವೆ ಬಾಯಾರಿಕೆಯಿಂದ I ಸೊರಗಿದರು ಮನೋಯಾತನೆಯಿಂದ II

6ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II

7ಸರಿಯಾದ ದಾರಿಯಲಿ ನಡೆಸಿದನವರನು I ಸೇರಮಾಡಿದನು ಜನವಾಸಿಸುವ ಊರನು II

8ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗೆ ಆತನೆಸಗಿದ ಅತಿಶಯಗಳನು II

9ಬಾಯಾರಿದವರ ಆಸೆಯನ್ನಾತ ಪೂರೈಸಿದನು I ಹಸಿದವರನು ಮೃಷ್ಟಾನ್ನದಿಂದ ತೃಪ್ತಿಪಡಿಸಿದನು II

10ದೇವರಾಜ್ಞೆಯನು ವಿರೋಧಿಸಿದ ಕಾರಣ I ಪರಾತ್ಪರನಾಜ್ಞೆಯನು ಹೀಗಳೆದ ಕಾರಣ II

11ಕುಳಿತಿದ್ದರವರು ಕತ್ತಲಲಿ, ಕಗ್ಗತ್ತಲಲಿ I ನರಳುತ್ತಿದ್ದರು ಬಂಧಿತರಾಗಿ ಬೇಡಿಗಳಲಿ II

12ಕರಗಿತ್ತವರ ಹೃದಯ ಕಡುಕಷ್ಟದಿಂದ I ಎಡವಿ ಬಿದ್ದಿದ್ದರು ಅಸಹಾಯತೆಯಿಂದ II

13ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ II

14ಕತ್ತಲು, ಕಗ್ಗತ್ತಲಿಂದವರನು ಹೊರತಂದನು I ಅವರ ಬೇಡಿಬಂಧನಗಳನು ಮುರಿದುಹಾಕಿದನು II

15ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II

16ಚೂರುಚೂರುಗೈದನು ಕಂಚಿನ ಕದಗಳನು I ಮುರಿದುಹಾಕಿದನು ಕಬ್ಬಿಣದ ಅಗುಳಿಗಳನು II

17ರೋಗಿಗಳಾದರವರು ಅನಾಚಾರದ ನಿಮಿತ್ತ I ಬಾಧೆಗೊಳಗಾದರವರು ಪಾಪಕಾರ್ಯಗಳ ನಿಮಿತ್ತ II

18ಅಸಹ್ಯಪಟ್ಟರು ಅನ್ನ ಆಹಾರಗಳಿಗೆ I ಹತ್ತಿರವಾದರವರು ಮೃತ್ಯುದ್ವಾರಕೆ II

19ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿನಿಂದ ಬಿಡುಗಡೆಯಿತ್ತನು ಅವರಿಗೆ II

20ಗುಣಪಡಿಸಿದನವರನು ತನ್ನ ವಾಣಿಯಿಂದ I ತಪ್ಪಿಸಿದನು ಅವರನು ವಿನಾಶಕೂಪದಿಂದ II

21ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II

22ಸಮರ್ಪಿಸಲಿ ಆತನಿಗೆ ಕೃತಜ್ಞತಾ ಬಲಿಗಳನು I ಹಾಡಿಹೊಗಳಲಿ ಆತನಾ ಮಹತ್ಕಾರ್ಯಗಳನು II

23ಹಡಗನು ಹತ್ತಿ ಕಡಲನು ದಾಟಿದರು I ಸಾಗರ ಹಾಯ್ದು‍ವ್ಯಾಪಾರ ಗೈದರು II

24ಕಂಡರು ಪ್ರಭುವಿನ ಪವಾಡಗಳನು I ಸಮುದ್ರದೊಳಾತನ ಅದ್ಭುತಗಳನು II

25ಬಿರುಗಾಳಿಯೆದ್ದಿತು ಆತನಾಜ್ಞೆಯೊಂದಕ್ಕೆ I ತರಂಗಗಳು ಭೊರ್ಗರೆದವು ಅದರೊಂದಿಗೆ II

26ಗಗನಕ್ಕೇರಿದರು, ಅಗಾಧಕ್ಕಿಳಿದರು I ಗಂಡಾಂತರಕೆ ಸಿಲುಕಿ ಕರಗಿಹೋದರು II

27ಅಡ್ಡಾಡಿದರು, ಹೊಯ್ದಾಡಿದರು ಕುಡುಕರಂತೆ I ದಿಕ್ಕುತೋರದವರಾದರು ದಕ್ಷತೆ ಸಾಲದೆ II

28ಸಂಕಟದಲಿ ಮೊರೆಯಿಟ್ಟರು ಪ್ರಭುವಿಗೆ I ಬಿಕ್ಕಟ್ಟಿಂದ ಬಿಡುಗಡೆಯಿತ್ತನು ಅವರಿಗೆ II

29ಆ ಬಿರುಗಾಳಿಯನಾತ ಶಾಂತಪಡಿಸಿದ I ನಿಂತುಹೋಯಿತಾ ಸಮುದ್ರದಲೆಗಳ ಮೊರೆತ II

30ತಂದಿತು ಪ್ರಶಾಂತತೆ ಸಂತಸವನವರಿಗೆ I ಮುಟ್ಟಿಸಿದನಾತ ಅವರಾಶಿಸಿದ ರೇವಿಗೆ II

31ಹೊಗಳಲಿ ಪ್ರಭುವಿನಚಲ ಪ್ರೀತಿಯನು I ಜನರಿಗಾತ ಎಸಗಿದ ಅತಿಶಯಗಳನು II

32ಕೀರ್ತಿಸಲಿ ಆತನನು ನೆರೆದ ಸಭೆಯಲಿ I ಹಾಡಿಹೊಗಳಲಿ ಹಿರಿಯರಾ ಕೂಟದಲಿ II

33ನೀಚ ನಿವಾಸಿಗಳ ಕಾರಣದಿಂದ I ನದಿಗಳನೂ ಮರುಭೂಮಿಯಾಗಿಸಿದ II

34ಒಣನೆಲವಾಗಿಸಿದನಾತ ಬುಗ್ಗೆಗಳನು I ಉಪ್ಪುನೆಲವಾಗಿಸಿದ ಫಲಭೂಮಿಯನು II

35ಕೆರೆಯಾಗಿಸಿದಾ ಮರುಭೂಮಿಯನು I ಊಟೆಯಾಗಿಸಿದ ಆ ಒಣನೆಲವನು II

36ಹಸಿದವರನು ನೆಲೆಗೊಳಿಸಿದನಲ್ಲಿ I ವಾಸಿಸಲು ನಗರವನು ಕಟ್ಟಿದರಲ್ಲಿ II

37ಉತ್ತು ಬಿತ್ತಿದರು, ನೆಟ್ಟರು ದ್ರಾಕ್ಷಾಲತೆಯನು I ಕೂಡಿಸಿಕೊಂಡರು ಅಧಿಕವಾದ ಆದಾಯವನು II

38ಅಭಿವೃದ್ಧಿಯಾದರು ಆತನಾಶೀರ್ವಾದದಿಂದಲೆ I ಅವರಿಗಿರಲಿಲ್ಲ ದನಕರುಗಳಾವುದರ ಕೊರತೆ II

39ತದನಂತರ ಕುಗ್ಗಿತವರ ಅಂಕೆ ಸಂಖ್ಯೆ I ಕಷ್ಟಸಂಕಟ, ತಾಪತ್ರಯಗಳ ಮಧ್ಯೆ II

40ತೃಣೀಕರಿಸಿದನು ಪ್ರಭು ಅವರಧಿಪತಿಗಳನು I ದಾರಿಯಿಲ್ಲದರಣ್ಯದೊಳು ಅಲೆದಾಡಿಸಿದನು II

41ದೀನರನ್ನೇರಿಸಿದನು ಅವನತಿಯಿಂದ ಉನ್ನತಿಗೆ I ಹೆಚ್ಚಿಸಿದನವರ ಸಂತತಿಯನು ಕುರಿಮಂದೆ ಹಾಗೆ II

42ಇದಕಂಡು ಹಿಗ್ಗುವರು ಸಜ್ಜನರೆಲ್ಲರು I ಬಾಯಿ ಮುಚ್ಚಿಕೊಳ್ಳುವರು ದುರ್ಜನರು II

43ಪರ್ಯಾಲೋಚಿಸಲಿವುಗಳನು ಬುದ್ಧಿವಂತರು I ಗ್ರಹಿಸಲಿ ಪ್ರಭುವಿನಚಲ ಪ್ರೀತಿಯನಾ ಜನರು II