ಹಳೆಯ ಒಡಂಬಡಿಕೆKNCL

ಕೀರ್ತನೆಗಳು 106

1ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ I ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ II

2ವರ್ಣಿಸಬಲ್ಲವನಾರು ಆತನ ಮಹತ್ಕಾರ್ಯಗಳನು? I ಯೋಗ್ಯರೀತಿಯಲಿ ಹೊಗಳಬಲ್ಲವರಾರು ಆತನನು? II

3ನ್ಯಾಯದಂತೆ ನಡೆಯುವವರು ಧನ್ಯರು I ಅವಿರತವಾಗಿ ನೀತಿವಂತರು ಧನ್ಯರು II

4ಮರೆಯಬೇಡೆನ್ನನು ಪ್ರಭು, ನಿನ್ನ ಪ್ರಜೆಗೆ ದಯೆತೋರುವಾಗ I ನೆರವು ನೀಡೆನಗೆ ಸ್ವಾಮಿ, ನೀನಾ ಜನರನು ಉದ್ಧರಿಸುವಾಗ II

5ನೀನಾರಿಸಿಕೊಂಡಿರುವ ಪ್ರಗತಿಯನು ನಾ ಕಾಣಮಾಡು I ನಿನ್ನ ಜನಾಂಗದವರ ಸಂತಸವನು ನಾ ಸವಿಯಮಾಡು I ನಿನ್ನ ಸ್ವಕೀಯರ ಮಹಿಮೆಯಲ್ಲೆನಗೆ ಪಾಲನ್ನು ನೀಡು II

6ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು I ಅಕ್ರಮಗೈದೆವು, ಅಪರಾಧಿಗಳಾದೆವು II

7ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು ಈಜಿಪ್ಟಿನಲಿ I ಸ್ಮರಿಸಲಿಲ್ಲವರು ನಿನ್ನಚಲ ಪ್ರೇಮಾತಿಶಯಗಳನು ಅಲ್ಲಿ I ಬದಲಿಗೆ ಮಹೋನ್ನತನನೆ ಪ್ರತಿಭಟಿಸಿದರು ಕೆಂಗಡಲಬಳಿ II

8ಆದರೂ ತನ್ನ ನಾಮಪ್ರಯುಕ್ತ ರಕ್ಷಿಸಿದನವರನು I ಪ್ರಕಟಿಸಿದನಾತ ಹೀಗೆ ತನ್ನ ಶಕ್ತಿಸಾಮರ್ಥ್ಯವನು II

9ಒಣಗಿಹೋಯಿತಾ ಕೆಂಗಡಲು ಆತನ ಗದರಿಕೆಗೆ I ದಾಟಿಸಿದನಾ ಸಾಗರವನು ಅಡವಿಯೋ ಎಂಬ ಹಾಗೆ II

10ತಪ್ಪಿಸಿದನವರನು ವೈರಿಗಳ ಕೈಯಿಂದ I ರಕ್ಷಿಸಿದನು ಆ ಶತ್ರುಗಳ ಹಿಡಿತದಿಂದ II

11ಮುಳುಗಿಸಿತು ಜಲರಾಶಿ ಆ ಶತ್ರುಗಳನು I ಉಳಿಯಗೊಡಿಸಲಿಲ್ಲ ಅವರಲ್ಲೊಬ್ಬನನು II

12ಆಗ ನಂಬಿದರು ಪ್ರಭುವಿನಾ ಮಾತನು I ಮಾಡಿದರಾಗ ಆತನ ಗುಣಗಾನವನು II

13ಆದರೆ ಮರೆತರು ಬೇಗನೆ ಆತನ ಸತ್ಕಾರ್ಯಗಳನು I ಕಾಯದೆ ಹೋದರು ಆತನಾ ಸಂಕಲ್ಪ ಸಾದನೆಯನು II

14ಆಶಾಪಾಶಗಳಿಗೆ ಈಡಾದರು ಅಡವಿಯೊಳು I ದೇವನನೇ ಪರಿಶೋಧಿಸಿದರು ಅರಣ್ಯದೊಳು II

15ಪೂರೈಸಿದನಾತ ಅವರ ಕೋರಿಕೆಯನು I ಕಳುಹಿಸಿದನಾದರೆ ಭೀಕರ ರೋಗವನು II

16ಅಸೂಯೆಗೊಂಡರು ಪಾಳೆಯದೊಳು ಮೋಶೆಯ ಮೇಲೆ I ಪ್ರಭುವಿಗೆ ಪ್ರತಿಷ್ಠಿತನಾದ ಆ ಆರೋನನ ಮೇಲೆ II

17ಭೂಮಿ ಬಾಯ್ದೆರೆದು ನುಂಗಿತು ದಾತಾನನನು I ಮುಚ್ಚಿಬಿಟ್ಟಿತು ಅಭಿರಾಮನ ಕಡೆಯವರನು II

18ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು I ಅಗ್ನಿಜ್ವಾಲೆ ದಹಿಸಿಬಿಟ್ಟಿತು ಆ ದುಷ್ಟರನು II

19ಹೋರೇಬಿನಲಿ ಮಾಡಿದರು ಬಸವನನು I ಆರಾಧಿಸಿದರು ಆ ಎರಕದ ಶಿಲೆಯನು II

20ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು I ಆರಿಸಕೊಂಡರು ಹುಲ್ಲು ತಿನ್ನುವ ಬಸವನ ವಿಗ್ರಹವನು II

21ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು I ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು II

22ಹಾಮನಾಡಿನಲಿ ಮಾಡಿದ ಅದ್ಭುತಗಳನು I ಕೆಂಗಡಲಬಳಿ ನಡೆದ ಘೋರ ಕೃತ್ಯಗಳನು II

23ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು I ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು I ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು II

24ಅವರೊ ಬೇಡವೆಂದರು ಆ ಚೆಲುವಿನ ನಾಡನು I ನಂಬದೆ ಹೋದರು ಅವನಿತ್ತಾ ವಾಗ್ದಾನವನು II

25ಗೊಣಗುಟ್ಟಿದರು ತಮ್ಮ ಗುಡಾರಗಳಲಿ I ನಂಬಿಕೆಯಿಡಲಿಲ್ಲ ಆತನ ಮಾತಿನಲಿ II

26ಈ ಕಾರಣ ಆಣೆಯಿಟ್ಟನು ಕೈಯೆತ್ತಿ : I “ಬೀಳಮಾಡುವೆನು ನಿಮ್ಮನು ಅಡವಿಯಲಿ, II

27ಚದರಿಸುವೆನು ನಿಮ್ಮ ಸಂತಾನವನು ಹೊರನಾಡುಗಳಲಿ I ಅಳಿದು ಹೋಗುವರವರು ಅನ್ಯಜನಾಂಗಗಳ ಮಧ್ಯೆಯಲಿ” I

28ಬಾಳ್‍ಪೆಗೋರ ದೇವತೆಯ ಊಳಿಗದವರಾದರು I ಸತ್ತವರಿಗರ್ಪಿಸಿದ ಬಲಿಯನು ಉಣ್ಣುವವರಾದರು II

29ಅವರಕ್ರಮ ನಡತೆ ಪ್ರಭುವನು ಕೆಣಕಿತು I ಭೀಕರ ವ್ಯಾಧಿ ಅವರ ಮಧ್ಯೆ ಹಬ್ಬಿತು II

30ಫಿನೆಹಾಸನೆದ್ದು ದಂಡಿಸಿದೊಡನೆ I ನಿಂತುಹೋಯಿತು ಆ ಘೋರ ಬೇನೆ II

31ಆತ ಮಾಡಿದಾ ನೈಪುಣ್ಯ I ಆಯಿತು ತಲಾಂತರಕು ಗಣ್ಯ II

32ಮೆರಿಬಾ ನದಿಯ ಬಳಿ ರೇಗಿಸಿದರಾತನನು I ಹೀಗೆ ಬರಮಾಡಿದರು ಮೋಶೆಗೂ ಹಾನಿಯನು II

33ನಿಂತರಾಗ ದೇವರಾತ್ಮನಿಗೆ ವಿರೋಧವಾಗಿ I ನುಡಿಯಬೇಕಾಯಿತು ಮೋಶೆಯು ಅವಿವೇಕವಾಗಿ II

34ಅನುಸರಿಸಲಿಲ್ಲ ಅವರು ಪ್ರಭುವಿನಾಜ್ಞೆಯನು I ಆತ ಸಂಹರಿಸಲಿಲ್ಲ ಶೋಧಿಸಿದಾ ಜನರನು II

35ಅನ್ಯಜನರೊಡನವರು ಕಲೆತು ಬೆರೆತುಹೋದರು I ಅವರ ದುರಾಚಾರಗಳನ್ನೂ ಕಲಿತುಕೊಂಡರು II

36ಪೂಜೆಮಾಡಿದರು ಆ ಜನರ ವಿಗ್ರಹಗಳಿಗೆ I ಉರುಲಾದವು ಆ ವಿಗ್ರಹಗಳೆ ಅವರಿಗೆ II

37ತಮ್ಮ ಪುತ್ರ ಪುತ್ರಿಯರನೇ ಅರ್ಪಿಸಿದರು I ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು II

38ಸುರಿಸಿದರು ತಮ್ಮ ಮಕ್ಕಳ ನಿರ್ದೋಷ ರಕ್ತವನು I ಬಲಿಕೊಟ್ಟರು ಕಾನಾನ್ಯರ ವಿಗ್ರಹಗಳಿಗೆ ಅವರನು I ಹೊಲೆಮಾಡಿದರಂಥ ಕೊಲೆಗಳಿಂದ ದೇಶವನು II

39ಅಶುದ್ಧರಾದರವರು ತಮ್ಮ ದುಷ್ಕೃತ್ಯಗಳಿಂದ I ದೇವದ್ರೋಹಿಗಳಾದರು ದುರಾಚಾರಗಳಿಂದ II

40ಕೆರಳಿತು ಕೋಪ ಆ ಜನರ ಮೇಲೆ ಪ್ರಭುವಿಗೆ I ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ II

41ಎಂತಲೆ ಒಪ್ಪಿಸಿದನವರನು ಅನ್ಯರಾಷ್ಟ್ರಗಳ ಕೈಗೆ I ಹಗೆಮಾಡುತ್ತಿದ್ದವರೇ ಅಧಿಕಾರಿಗಳಾದರವರಿಗೆ II

42ಗುರಿಯಾದರು ಶತ್ರುಶೋಷಣೆಗೆ I ಕುಗ್ಗಿಹೋದವರು ಅವರ ಕೈಕೆಳಗೆ II

43ಪ್ರಭು ಪದೇಪದೇ ವಿಮುಕ್ತಗೊಳಿಸಿದನಾದರೂ I ಪರ್ಯಾಲೋಚಿಸದೆ ಪ್ರತಿಭಟನೆ ಮಾಡಿದರವರು I ಈ ಪರಿಯ ಅಕ್ರಮದ ನಿಮಿತ್ತ ಅವನತಿಗಿಳಿದರು II

44ನೋಡಿದನಾತ ಅವರ ಕಷ್ಟಕಾರ್ಪಣ್ಯವನು I ಗಮನಿಸಿದನು ಅವರ ಆರ್ತನಾದವನು II

45ನೆನಪಿಗೆ ತಂದುಕೊಂಡನು ತನ್ನೊಡಂಬಡಿಕೆಯನು I ದಯಾಳುತನದಿಂದ ತೋರಿದನವರಿಗೆ ಕರುಣೆಯನು I ಬಂಧಿಸಿದವರಿಂದಲೂ ದಯೆಯನು ದೊರಕಿಸಿದನು II

47ಹೇ ಪ್ರಭು, ನಮ್ಮ ದೇವಾ, ನಮ್ಮನ್ನುದ್ಧರಿಸು I ನಾಡುನಾಡುಗಳಿಂದ ನಮ್ಮನೊಂದುಗೂಡಿಸು I ನಿನ್ನ ಪವಿತ್ರ ನಾಮವನು ನಾವು ಭಜಿಸುವೆವು I ನಿನ್ನ ಸ್ತುತಿ ಸ್ತೋತ್ರಗಳಲಿ ಹೆಚ್ಚಳ ಪಡುವೆವು II

48ಇಸ್ರಯೇಲಿನ ದೇವನಾದ ಪ್ರಭುವಿಗೆ ಸ್ತೋತ್ರ I ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ I ಜನರೆಲ್ಲರು ಹೇಳಲಿ ‘ಆಮೆನ್’, ಪ್ರಭುವಿಗೆ ಸ್ತೋತ್ರ II