ಹಳೆಯ ಒಡಂಬಡಿಕೆKNCL

ಕೀರ್ತನೆಗಳು 105

1ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I ಮಾಡಿರಿ ಆತನ ನಾಮಸ್ಮರಣೆಯನು I ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II

2ಹಾಡಿ ಪಾಡಿ ಹೊಗಳಿರಿ ಪ್ರಭುವನು I ಧ್ಯಾನಿಸಿ ನೀವು ಆತನ ಪವಾಡಗಳನು II

3ಹೆಮ್ಮೆಪಡಿ, ನೆನೆದಾತನ ಶ್ರೀನಾಮ I ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II

4ಅರಸಿರಿ ಪ್ರಭುವನೂ ಆತನ ಶಕ್ತಿಯನೂ I ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II

5ಆತನ ದಾಸ ಅಬ್ರಹಾಮನ ಸಂತತಿಯವರೇ I ಆತನಾರಿಸಿಕೊಂಡ ಯಕೋಬನ ವಂಶದವರೇ II

6ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು I ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು II

7ಪ್ರಭು ನಮ್ಮ ದೇವನೆಂಬುದು ಶ್ರುತ I ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II

8ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II

9ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು II

10ಯಕೋಬನಿಗೆ ರಾಜಶಾಸನವಾಗಿ ಕೊಟ್ಟುದನು I ಇಸ್ರಯೇಲಿಗೆ ಶಾಶ್ವತವಾಗಿತ್ತ ಈ ಮಾತನು II

11“ನಾ ಕೊಡುವೆನು ಕಾನಾನ್ ನಾಡನು ನಿಮಗೆ I ಸ್ವಾಸ್ತ್ಯವಾಗುವುದು ಅದು ನಿಮ್ಮ ಸಂತತಿಗೆ” II

12ಅಲ್ಪಸಂಖ್ಯಾತರೂ ಆಗಂತುಕರೂ ಅವರಾಗಿರಲು I ನಾಡಿಂದ ನಾಡಿಗೆ ರಾಜ್ಯದಿಂದ ರಾಜ್ಯಕೆ ಅಲೆಯುತ್ತಿರಲು II

14ಅವರಿಗಾರಿಂದಲೂ ಅನ್ಯಾಯವಾಗಗೊಡಿಸಲಿಲ್ಲ I ಅವರಿಗಾಗಿ ಅರಸರನೂ ಗದರಿಸದೆ ಬಿಡಲಿಲ್ಲ : II

15“ನಾನಭಿಷೇಕಿಸಿದವರನಿದೋ ಮುಟ್ಟಬೇಡಿ I ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿ” II

16ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು I ಮುರಿದುಬಿಟ್ಟನು ಆಹಾರವೆಂಬಾ ಊರುಗೋಲನು II

17ಕಳಿಸಿದ ಅವರಿಗೆ ಮುಂದಾಗಿ ಒಬ್ಬಾತನನು I ದಾಸತ್ವಕೆ ಮಾರಲಾದ ಆ ಜೋಸೆಫನನು II

18ಅವನ ಕಾಲು ನೊಂದವು ಸಂಕೋಲೆಗಳಿಂದ I ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ II

19ಕ್ರಮೇಣ ಕೈಗೂಡಿತು ಜೋಸೆಫನು ನುಡಿದದ್ದು I ಪ್ರಭುವಿನ ವಾಣಿ ಕಂಡುಬಂದಿತು ಸತ್ಯವೆಂದು II

20ಬಿಡಿಸಲವನನು ಅರಸ ಕಳಿಸಿದ ಆಳನು I ಬಿಡುಗಡೆಮಾಡಿದ ಜನಾಧಿಪತಿ ಅವನನು II

21ನೇಮಿಸಿದವನನು ತನ್ನ ಮನೆಗೆ ಯಜಮಾನನ್ನಾಗಿ I ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ II

22ಪದಾಧಿಕಾರಿಗಳಿಗೆ ಶಿಕ್ಷಕನನ್ನಾಗಿಸಿದ I ಮಂತ್ರಿಗಳಿಗೆಲ್ಲ ಉಪದೇಶಕನನ್ನಾಗಿಸಿದ II

23ಬಂದನು ಆಗ ಇಸ್ರಯೇಲನು ಈಜಿಪ್ಟಿಗೆ I ಪ್ರವಾಸಿಯಾದ ಯಕೋಬನು ಹಾಮ ನಾಡಿಗೆ II

24ತನ್ನ ಜನರ ಸಂತಾನವನು ಪ್ರಭು ಅಭಿವೃದ್ಧಿಗೊಳಿಸಿದ I ಶತ್ರುಗಳಿಗಿಂತಲೂ ಅವರನು ಬಲಿಷ್ಠರನ್ನಾಗಿಸಿದ II

25ಮಾರ್ಪಡಿಸಿದ ಈಜಿಪ್ಟರನು ತನ್ನ ಜನರನು ದ್ವೇಷಿಸುವಂತೆ I ತನ್ನ ದಾಸರೊಡನವರು ಕುಯುಕ್ತಿಯಿಂದ ನಡೆದುಕೊಳ್ಳುವಂತೆ II

26ಕಳಿಸಿದ ತನ್ನ ದಾಸ ಮೋಶೆಯನು I ತಾನು ಆರಿಸಿಕೊಂಡ ಆರೋನನನು II

27ನೋಡಿದರಿವರು ಆತನ ಸೂಚಕಕಾರ್ಯಗಳನು I ಹಾಮ ನಾಡಿನಲಿ ನಾನಾ ಅದ್ಭುತಕಾರ್ಯಗಳನು II

28ಕಾಳ ರಾತ್ರಿಯಾಯಿತು ಪ್ರಭು ಕಳಿಸಲು ಕತ್ತಲನು I ಈಜಿಪ್ಟರಾದರೊ ಇದಿರಿಸಿದರು ಆತನ ಮಾತನು II

29ರಕ್ತವಾಗಿಸಿದನಾತ ಅವರ ನದಿಗಳನು I ಸಾಯಿಸಿದನು ಅವುಗಳಲಿದ್ದ ಮೀನುಗಳನು II

30ತುಂಬಿಕೊಂಡವು ಕಪ್ಪೆಗಳು ನಾಡಿನೊಳೆಲ್ಲ I ಹರಡಿಕೊಂಡವು ಅರಸನ ಕೊಠಡಿಗಳಲೆಲ್ಲ II

31ಕಾಣಿಸಿಕೊಂಡವು ಆತನಾಜ್ಞಾಪಿಸಲು I ಹುಳುಹುಪ್ಪಟೆಗಳು ಪ್ರಾಂತ್ಯದೆಲ್ಲೆಡೆಯೊಳು II

32ಮಳೆಗೆ ಬದಲು ಕಳಿಸಿದ ಕಲ್ಮಳೆಯನು I ನಾಡಿನೆಲ್ಲೆಡೆಯೊಳು ಸಿಡಿಲುಮಿಂಚನು II

33ನಾಶಮಾಡಿದ ನಾಡಿನ ಎಲ್ಲಾ ಮರವೃಕ್ಷಗಳನು I ದ್ರಾಕ್ಷಾಲತೆಗಳನ್ನು ಮೇಣ್ ಅಂಜೂರಗಿಡಗಳನು II

34ಆತ ನುಡಿದದ್ದೇ, ಬಂದವು ಮಿಡತೆಗಳು I ಅಗಣಿತವಾದ ಸಂಖ್ಯೆಯಲಿ ಚಿಟ್ಟೆಹುಳುಗಳು II

35ತಿಂದುಬಿಟ್ಟವವು ನಾಡಿನ ಬೆಳೆಯನು I ಹೊಲಗದ್ದೆಗಳು ಇತ್ತ ಫಲವೆಲ್ಲವನು II

36ಕೊಂದನು ನಾಡಿನ ಜ್ಯೇಷ್ಠರೆಲ್ಲರನು I ಗಂಡಸುತನದಾ ಪ್ರಥಮ ಫಲಗಳನು II

37ಹೊರತಂದನು ಇಸ್ರಯೇಲರನು ಬೆಳ್ಳಿಬಂಗಾರ ಸಹಿತ I ಅವರಾ ಗೋತ್ರದೊಳಿರಲಿಲ್ಲ ಯಾರೊಬ್ಬನೂ ನಿಶ್ಯಕ್ತ II

38ಭೀತಿಯಿತ್ತಾ ಈಜಿಪ್ಟರಿಗೆ ಇಸ್ರಯೇಲರ ಬಗ್ಗೆ I ಈ ಕಾರಣ ಆನಂದಿಸಿದರು ಅವರು ಹೋದುದಕ್ಕೆ II

39ಹಗಲೊಳು ಮೋಡವಿತ್ತನವರಿಗೆ ನೆರಳಿಗೋಸ್ಕರ I ಇರುಳೊಳು ಬೆಂಕಿಯಿತ್ತನವರಿಗೆ ಬೆಳಕಿಗೋಸ್ಕರ II

40ಕೂಳನು ಕೇಳಿದಾಗ ಬರಮಾಡಿದನು ಲಾವಕ್ಕಿಗಳನು I ತೃಪ್ತಿಪಡಿಸಿದನು ಆಗಸದ ಆಹಾರಗಳಿಂದವರನು II

41ಬಂಡೆಯನಾತ ಸೀಳಲು ನೀರು ಹರಿದು ಬಂದಿತು I ನಿರ್ಜಲ ಪ್ರದೇಶದಲದು ನದಿಯಾಗಿ ಹರಿಯಿತು II

42ಸ್ಮರಿಸಿಕೊಂಡನು ಪ್ರಭು ತನ್ನ ವಾಗ್ದಾನವನು I ತನ್ನ ದಾಸ ಅಬ್ರಹಾಮನಿಗೆ ಕೊಟ್ಟಾ ಮಾತನು II

43ಹೊರತಂದನು ತನ್ನ ಪ್ರಜೆಯನು ಉಲ್ಲಾಸದಿಂದ I ತಾನಾರಿಸಿಕೊಂಡವರನು ಹರ್ಷೋದ್ಗಾರದಿಂದ II

44ಕೊಟ್ಟನವರಿಗೆ ಅನ್ಯರಾಷ್ಟ್ರಗಳ ನಾಡುಬೀಡನು I ಅವರ ಕೈವಶಮಾಡಿದನು ಅನ್ಯರ ಕಷ್ಟಾರ್ಜಿತವನು II

45ತನ್ನ ವಿಧಿಗಳಂತೆ ನಡೆಯಲೆಂದೇ I ತನ್ನ ಶಾಸ್ತ್ರವನು ಅನುಸರಿಸಲೆಂದೇ I ಈ ಪರಿ ಮಾಡಿದಾ ಸ್ವಾಮಿಗೆ ವಂದನೆ II