ಹಳೆಯ ಒಡಂಬಡಿಕೆKNCL

ಕೀರ್ತನೆಗಳು 104

1ಭಜಿಸು ನನ್ನ ಮನವೇ, ಭಜಿಸು, ಪ್ರಭುವನು I ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು I ಮಹಿಮೆ ಪ್ರತಾಪಗಳಿಂದ ಭೂಷಿತನು II

2ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ I ಹರಡಿಸಿರುವೆ ಆಗಸವನು ಗುಡಾರದಂತೆ II

3ನಿರ್ಮಿಸಿರುವೆ ನಿನ್ನ ಭವನವನು ಜಲದ ಮೇಲೆ I ಮಾಡುವೆ ಸಂಚಾರ ಮಾರುತನ ರೆಕ್ಕೆಗಳ ಮೇಲೆ I ನಿನಗೆ ರಥವಾಹನಗಳು ಆ ಮುಗಿಲು ಮೋಡಗಳೇ II

4ಗಾಳಿಗಳೇ ನಿನಗೆ ದೂತರುಗಳು I ಅಗ್ನಿಜ್ಞಾಲೆಗಳೇ ಆಳುಗಳು II

5ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ I ಅದೆಂದಿಗೂ ಕದಲದಂತೆ ಮಾಡಿರುವೆ II

6ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು I ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು II

7ತಲೆದೋರಿತು ಜಲ ನಿನ್ನ ಗದರಿಕೆಗೆ I ಹೆದರಿ ಹಿಂಜರಿಯಿತು ನಿನ್ನ ಗರ್ಜನೆಗೆ II

8ತಲೆದೋರಿದವು ಬೆಟ್ಟಗುಡ್ಡಗಳು I ತುಂಬಿಕೊಂಡವು ಹಳ್ಳಕೊಳ್ಳಗಳು I ಅವೇ ನೀ ನೇಮಿಸಿದ ಸ್ಥಳಗಳು II

9ಗೊತ್ತುಮಾಡಿರುವೆ ಆ ಜಲರಾಶಿಗೆ ಮೇರೆಯನು I ಅವು ಮತ್ತೆ ಮುಚ್ಚದಂತೆ ಮಾಡಿರುವೆ ಭೂಮಿಯನು II

10ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ I ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ II

11ನೀರ ನೀಡುವವು ಕುಡಿಯಲಿಕ್ಕೆ ಕಾಡುಮೃಗಗಳಿಗೆ I ದಾಹ ನೀಗಿಸಿಕೊಳ್ಳಲು ಆ ಕಾಡುಕತ್ತೆಗಳಿಗೆ II

12ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು I ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು II

13ಮಲೆಗಳ ಮೇಲೆ ಮಳೆಗರೆಯುವೆ ಗಗನದಿಂದ I ತೃಪ್ತಿಗೊಂಡಿದೆ ಪೃಥ್ವಿಯು ನಿನ್ನ ಕೃಪೆಗಳಿಂದ II

14ಮೊಳೆಸುವೆ ಹುಲ್ಲನ್ನು ದನಕರುಗಳಿಗೋಸ್ಕರ I ಬೆಳೆಸುವೆ ಪೈರನು ನರಮಾನವರಿಗೋಸ್ಕರ II

15ಒದಗಿಸುವೆ ಬೇಸಾಯದ ಆಹಾರವನು I ಹೃದಯವನು ಮುದಗೊಳಿಸುವ ದ್ರಾಕ್ಷಾರಸವನು I ಮುಖಕೆ ಮೆರಗನ್ನೀಯುವ ತಿಳಿತೈಲಗಳನು I ದೇಹವನು ಗಟ್ಟಿಮುಟ್ಟಾಗಿಸುವ ರೊಟ್ಟಿಯನು II

16ಜಲವಿದೆ ಲೆಬನೋನಿನ ದೇವದಾರು ವೃಕ್ಷಗಳಿಗೆ I ನೀರು ಬೇಕಾದಷ್ಟಿದೆ ಪ್ರಭು ನೆಟ್ಟ ಮರಗಳಿಗೆ II

17ಗೂಡುಕಟ್ಟಿಕೊಳ್ಳುವುವು ಹಕ್ಕಿಗಳಾ ಮರಗಳಲಿ I ವಾಸಮಾಡುವುವು ಕೊಕ್ಕರೆಗಳು ತುರಾಯಿಮರಗಳಲಿ II

18ಬೆಟ್ಟಗುಡ್ಡಗಳಿವೆ ಕಾಡುಕುರಿಗಳಿಗೆ I ಬಂಡೆಬಿರುಕುಗಳಿವೆ ಬೆಟ್ಟದ ಮೊಲಗಳಿಗೆ II

19ಋತು ಸೂಚನೆಗಾಗಿ ನೀ ನಿರ್ಮಿಸಿದೆ ಚಂದ್ರನನು I ಸೂರ್ಯ ಬಲ್ಲನು ತನ್ನಸ್ತಮಾನದ ವೇಳೆಯನು II

20ರಾತ್ರಿಯಾಗುತ್ತದೆ ನೀ ಕತ್ತಲನು ಬರಮಾಡಲು I ತಿರುಗಾಡುತ್ತವೆ ಆಗ ಕಾಡಿನ ಜೀವಜಂತುಗಳು II

21ಗರ್ಜಿಸುತ್ತವೆ ಪ್ರಾಯಸಿಂಹಗಳು ಬೇಟೆಗಾಗಿ I ದೇವರನ್ನು ಎದುರು ನೋಡುತ್ತವೆ ಆಹಾರಕ್ಕಾಗಿ II

22ಮರಳುತ್ತವೆ ಸೂರ್ಯೋದಯವಾಗಲು I ತಂತಮ್ಮ ಗವಿಗುಹೆಗಳಲಿ ಮಲಗಲು II

23ಹೊರಡುತ್ತಾನಾಗ ಮಾನವ ಕೆಲಸಕೆ I ದುಡಿಯುತ್ತಾನೆ ಸಾಯಂಕಾಲದವರೆಗೆ II

24ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ I ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ II

25ಸಮುದ್ರವಿದೊ ಎಷ್ಟು ಅಪಾರ, ಅದೆಷ್ಟು ವಿಶಾಲ I ಅದರಲ್ಲಿರುವ ಸಣ್ಣ-ದೊಡ್ಡ ಜೀವಿಗಳಿಗೆ ಲೆಕ್ಕವಿಲ್ಲ II

26ಓಡಾಡುತ್ತವದರೊಳು ಹಡಗುಗಳು I ನೀನುಂಟುಮಾಡಿದ ತಿಮಿಂಗಿಲಗಳು II

27ಸಕಾಲದಲೊದಗಿಸುವೆ ಆಹಾರವನು I ನಂಬಿಕೊಂಡಿವೆ ಆ ಜೀವಿಗಳು ನಿನ್ನನು II

28ನೀ ನೀಡಲು ಕೂಡಿಸಿಟ್ಟುಕೊಳ್ಳುವುವು I ನೀ ಕೈತೆರೆಯಲು ಸಂತೃಪ್ತಿಪಡುವುವು II

29ತಲ್ಲಣಗೊಳ್ಳುವುವು ನೀ ಮುಖ ಮರೆಮಾಡಿಕೊಳ್ಳಲು I ಮಣ್ಣುಪಾಲಾಗುವುವು ನೀನವುಗಳ ಉಸಿರನಡಗಿಸಲು II

30ನೀ ಉಸಿರನ್ನೂದಲು ಹೊಸದಾಗುವುವು I ಪುನಶ್ಚೇತನಗೊಳ್ಳುವುದು ಜಗವೆಲ್ಲವು II

31ಸ್ವಾಮಿದೇವನ ಮಹಿಮೆಯಿರಲಿ ಶಾಶ್ವತವಾಗಿ I ಆತ ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ II

32ನಡುಗುತ್ತದೆ ಭೂಮಂಡಲ ಆತನ ಕೃತ್ಯಕೆ I ಹೊಗೆಕಾರುತ್ತದೆ ಪರ್ವತ ಆತನ ಸ್ಪರ್ಶಕೆ II

33ಪ್ರಭುವನು ನಾ ಹೊಗಳಿ ಹಾಡುವೆನು ಬಾಳಿನೊಳೆಲ್ಲ I ನನ್ನ ದೇವನನು ಭಜಿಸುವೆನು ನಾ ಜೀವಮಾನವೆಲ್ಲ II

34ಆತನಿಗೊಲಿಯಲಿ ನನ್ನ ಧ್ಯಾನ I ಆತನಲೇ ಹರ್ಷಿಸಲಿ ನನ್ನ ಮನ II

35ದಹಿಸಿಹೋಗಲಿ ಧರೆಯಿಂದ ದುಷ್ಟರು I ನಿರ್ಮೂಲವಾಗಲಿ ಸಕಲ ದುರುಳರು I ಪ್ರಭುವನು ನನ್ನ ಮನ ಸ್ತುತಿಸಲಿ I ಪ್ರಭುವಿಗೆ ಸ್ತುತಿಸ್ತೋತ್ರವಾಗಲಿ II