ಹಳೆಯ ಒಡಂಬಡಿಕೆKNCL

ಕೀರ್ತನೆಗಳು 102

1ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ I ನನ್ನ ಕೂಗು ಸೇರಲಿ ನಿನ್ನ ಬಳಿಗೆ II

2ಕಷ್ಟಕಾಲದೊಳು ವಿಮುಖನಾಗಬೇಡ ನೀನೆನಗೆ I ಕಿವಿಗೊಡು, ಮೊರೆಯಿಡುವಾಗಲೆ, ಸದುತ್ತರಿಸು ಬೇಗನೆ II

3ಮಾಯವಾಗುತ್ತಿದೆ ನನ್ನೀ ಜೀವಮಾನ ಹೊಗೆಯಂತೆ I ಉರಿಯುತ್ತಿವೆ ಎನ್ನೆಲುಬುಗಳು ಒಲೆಯಲ್ಲಿಟ್ಟ ಕೊರಡಿನಂತೆ II

4ಬಿಸಿಲಿಗೆ ಬಾಡಿದ ಹುಲ್ಲಿನಂತಿದೆ ಎನ್ನೆದೆ I ತಿಂಡಿತೀರ್ಥವನುಣ್ಣಲೂ ನಾ ಮರೆತುಹೋದೆ II

5ಕೂಗಿ ನಾ ನಿಟ್ಟುಸಿರಿಟ್ಟೆ I ಎಲುಬು ತೊಗಲು ಆಗಿಬಿಟ್ಟೆ II

6ಅಡವಿಯ ರಣಹದ್ದಿಗೆ ಸಮನಾದೆ I ಹಾಳುರಿನ ಗೂಗೆಯ ಹಾಗಾದೆ II

7ಮನೆಮೇಲಿನ ಒಂಟಿ ಪಕ್ಷಿಯಾದೆ I ಬಳಲುತ್ತಿರುವೆನು ನಿದ್ರೆಯಿಲ್ಲದೆ II

8ವೈರಿಗಳು ದಿನವಿಡೀ ನನ್ನ ನಿಂದಿಸುತ್ತಿಹರು I ದ್ವೇಷಿಗಳು ನನ್ನ ಹೆಸರೆತ್ತಿ ಶಪಿಸುತ್ತಿಹರು II

9ಬೂದಿಯೇ ನನಗೆ ಆಹಾರವಾಯಿತು I ಪಾನದಲಿ ಕಣ್ಣೀರು ಮಿಶ್ರವಾಯಿತು II

10ನಿನ್ನ ಕೋಪತಾಪಗಳೆ ಕಾರಣ ಇದಕ್ಕೆಲ್ಲಾ I ನನ್ನನು ಮೇಲಕ್ಕೆತ್ತಿ ಬಿಸಾಡಿಬಿಟ್ಟಿರುವೆಯಲ್ಲಾ II

11ನನ್ನ ಬಾಳು ಬೈಗಿನ ನೆರಳಂತೆ I ನಾನಿರುವೆ ಬಾಡಿದ ಹುಲ್ಲಿನಂತೆ II

12ನೀನಾದರೋ ಪ್ರಭು, ಸದಾ ಸಿಂಹಾಸನಾರೂಢ I ಮಾಳ್ಪರು ತಲತಲಾಂತರಕು ನಿನ್ನ ನಾಮಸ್ಮರಣ II

13ಎದ್ದು ಸಿಯೋನಿಗೆ ತೋರು ಸೌಜನ್ಯತೆ I ಅದಕ್ಕೆ ದಯೆತೋರಿಸುವ ಸಮಯವಿದೇ I ನಿಯಮಿತ ಕಾಲವಿದೋ ಬಂದುಬಿಟ್ಟಿದೆ II

14ಕಲ್ಲುಕುಪ್ಪೆಯಾಗಿದ್ದರೂ ನಿನ್ನ ಭಕ್ತರಿಗದು ಪ್ರಿಯ I ಅದರ ವಿನಾಶವನು ಕಂಡು ಕರಗಿಹೋಗಿದೆ ಹೃದಯ II

15ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು I ಭಯಪಡುವರು ನಿನ್ನ ಪ್ರತಾಪಕೆ ಭೂರಾಜರುಗಳು II

16ಏಕೆನೆ ಪುನರುದ್ಧರಿಸುವನು ಸಿಯೋನನು I ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು II

17ತಿರಸ್ಕರಿಸನಾತ ನಿರ್ಗತಿಕರ ಮೊರೆಯನು I ನೆರವೇರಿಸದೆ ಬಿಡನು ಅವರ ಕೋರಿಕೆಯನು II

18ಮುಂದಣ ಸಂತತಿಗಿದು ಶಾಸನವಾಗಿರಲಿ I ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ II

19ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ I ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ II

20ಆಲಿಸಿದಾತನು ಬಂಧಿತರ ಗೋಳಾಟವನು I ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು II

21ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು I ಜನಾಂಗಗಳೂ ರಾಜ್ಯಗಳೂ ಕೂಡಿರಲು

22ಹೊಗಳಲಾಗುವುದು ಪ್ರಭುವಿನ ನಾಮ ಸಿಯೋನಿನಲಿ I ಆತನ ಗುಣಗಾನವಿರುವುದು ಆ ಜೆರುಸಲೇಮಿನಲಿ II

23ನಡುಹಾದಿಯಲೆ ಕುಂದಿಸಿಹನು ಪ್ರಭು ನನ್ನ ಬಲವನು I ಕಡಿಮೆಮಾಡಿಬಿಟ್ಟಿಹನು ಆತ ನನ್ನ ಆಯುಷ್ಯವನು II

24ಎಂತಲೆ ನಾನು : “ಅರ್ಧಾಯುಷ್ಯದಲೆ ನನ್ನೊಯ್ಯಬೇಡ ದೇವಾ I ತಲತಲಾಂತರದವರೆಗೂ ನಿನ್ನ ವರುಷಗಳು ಉಳಿದಿವೆಯಲ್ಲಾ II

25ಆದಿಯಲೆ ನೀ ಭುವಿಗೆ ಅಸ್ತಿವಾರ ಹಾಕಿದೆ I ಗಗನಮಂಡಲವು ಸಹ ನಿನ್ನ ಸೃಷ್ಟಿಯಾಗಿದೆ II

26ನೀನಾದರೋ ಉಳಿದಿರುವೆ, ಅವೋ ಅಳಿದುಹೋಗುವುವು I ಹಳೆಯದಾಗುತ್ತವೆ ಬಟ್ಟೆಯಂತೆ ಅವೆಲ್ಲವು I ಉಡುಪಿನಂತೆ ಬದಲಿಸುತ್ತ, ಮಾರ್ಪಡುತ್ತವೆ ಅವು II

27ನೀನಂತೂ ಬದಲಾಗದೆ ಇರುವೆಯಯ್ಯಾ I ನಿನ್ನ ವರುಷಗಳಿಗೆ ಮುಗಿವೇ ಇಲ್ಲವಯ್ಯಾ II

28ಬಾಳುವರು ನಿನ್ನ ದಾಸರ ಮಕ್ಕಳು ಸುರಕ್ಷಿತವಾಗಿ I ಇರುವುದವರ ಸಂತತಿ ನಿನ್ನ ಸಮ್ಮುಖದಲಿ ಸ್ಥಿರವಾಗಿ II 7