ಹಳೆಯ ಒಡಂಬಡಿಕೆKNCL
1ಮಸ್ಸಾರಾಜ್ಯದ ಅರಸ ಲೆಮೂವೇಲನ ವಚನಗಳು: ಅವನ ತಾಯಿ ಅವನಿಗೆ ಉಪದೇಶಿಸಿದ ಹಿತೋಕ್ತಿಗಳು:
2ಮಗನೇ, ನನ್ನ ಕರುಳಿನ ಕುಡಿಯೇ, ನನ್ನ ಹರಕೆಯ ಮಗನೇ, ನಾನು ಹೇಳುವುದನ್ನು ಕೇಳು:
3ನಿನ್ನ ಪೌರುಷತ್ವವನ್ನೆಲ್ಲಾ ಸ್ತ್ರೀಯರಿಗೆ ಒಪ್ಪಿಸದಿರು; ಅರಸನನ್ನೆ ನಾಶಮಾಡಬಲ್ಲ ಅವರಿಗಾಗಿ ಹಣವನ್ನೆಲ್ಲ ವ್ಯಯಮಾಡದಿರು.
4ಕುಡುಕತನ ರಾಜನಿಗೆ ತಕ್ಕುದ್ದಲ್ಲ; ಲೆಮೂವೇಲನೇ ಕೇಳು, ಅದು ರಾಜನಿಗೆ ಯೋಗ್ಯವಲ್ಲ; ಮದ್ಯಪಾನಾಸಕ್ತಿ ಅಧಿಕಾರಿಗಳಿಗೆ ಹಿತವಲ್ಲ.
5ಕುಡಿದರೆ ಕರ್ತವ್ಯವನ್ನು ಮರೆಯುತ್ತಾರೆ; ದೀನದಲಿತರಿಗೆ ನ್ಯಾಯ ತೀರಿಸದೆ ತಾರತಮ್ಯ ಮಾಡುತ್ತಾರೆ.
6ಸಾರಾಯಿ ಸಾಯುತ್ತಿರುವವನಿಗಿರಲಿ; ಮದ್ಯ, ಮನೋವ್ಯಥೆಪಡುವವನಿಗಿರಲಿ.
7ಅವರು ಕುಡಿದು ಬಡತನ ಮರೆಯಲಿ, ತಮ್ಮ ಯಾತನೆಯನ್ನು ನೆನೆಯದಿರಲಿ.
8ಬಾಯಿಲ್ಲದವರ ಹಾಗೂ ದೀನದಲಿತರ ಪರವಾಗಿ ನ್ಯಾಯ ದೊರಕುವಂತೆ ಬಾಯಿಬಿಚ್ಚಿ ಮಾತಾಡು.
9ಅವರ ಪರವಾಗಿ ಮಾತಾಡಿ ನ್ಯಾಯವಾದ ತೀರ್ಪುಕೊಡು; ದೀನದರಿದ್ರರ ಹಕ್ಕು ಬಾಧ್ಯತೆಯನ್ನು ಕಾಪಾಡು.
10ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಆಕೆ ಹವಳಕ್ಕಿಂತಲೂ ಬಹು ಮೌಲ್ಯಳು.
11ಗಂಡನು ಆಕೆಯಲ್ಲಿ ಹೃತ್ಪೂರ್ವಕ ನಂಬಿಕೆಯಿಡುವನು; ಅವನಿಗೆ ಆದಾಯದ ಕೊರತೆ ಇರದು.
12ಜೀವಮಾನವಿಡೀ ಆಕೆ ಅವನಿಗೆ ಒಳ್ಳೆಯದನ್ನೆ ಮಾಡುವಳು; ಎಂದಿಗೂ ಆಕೆ ಅವನಿಗೆ ಕೇಡನ್ನು ಬಗೆಯಳು.
13ಉಣ್ಣೆಯನ್ನೂ ಸೆಣಬನ್ನೂ ಹುಡುಕಿ ತರುವಳು; ತನ್ನ ಕೈಗಳಿಂದಲೇ ಬಟ್ಟೆಯನ್ನು ನೇಯುವಳು.
14ವ್ಯಾಪಾರದ ಹಡಗುಗಳಂತೆ ದೂರದಿಂದ ಆಹಾರ ಪದಾರ್ಥಗಳನ್ನು ತರುವಳು.
15ಇನ್ನೂ ಕತ್ತಲಿರುವಾಗಲೆ ಎದ್ದುಬಿಡುತ್ತಾಳೆ, ಮನೆಯವರಿಗೆ ತಿಂಡಿತೀರ್ಥ ಅಣಿಮಾಡುತ್ತಾಳೆ, ಕೆಲಸಗಿತ್ತಿಯರಿಗೆ ದಿನಗೆಲಸಗಳನ್ನು ನೇಮಿಸುತ್ತಾಳೆ.
16ಆಲೋಚನೆಮಾಡಿ ಹೊಲವನ್ನು ಕೊಂಡುಕೊಳ್ಳುತ್ತಾಳೆ; ಕೈಗೆಲಸದ ಆದಾಯದಿಂದಲೆ ತೋಟ ಮಾಡಿಸುತ್ತಾಳೆ.
17ನಡುಕಟ್ಟಿ ಕೆಲಸಕ್ಕೆ ನಿಲ್ಲುತ್ತಾಳೆ, ದುಡಿಮೆಯಲ್ಲಿ ತೋಳ್ಬಲವನ್ನು ತೋರ್ಪಡಿಸುತ್ತಾಳೆ.
18ತನ್ನ ಕೆಲಸದಿಂದ ಲಭಿಸುವ ಆದಾಯದ ರುಚಿ ಆಕೆಗಿದೆ; ಆಕೆಯ ಮನೆದೀಪ ರಾತ್ರಿಯೆಲ್ಲ ಆರದಿದೆ.
19ರಾಟೆಯನ್ನು ತಾನೆ ಆಡಿಸುತ್ತಾಳೆ; ಕದಿರನ್ನು ಕೈಯಿಂದ ಹಿಡಿಯುತ್ತಾಳೆ.
20ಬಡವರಿಗೆ ಕೈಬಿಚ್ಚಿ ಕೊಡುತ್ತಾಳೆ; ದಿಕ್ಕಿಲ್ಲದವರಿಗೆ ಕೈಚಾಚಿ ನೀಡುತ್ತಾಳೆ.
21ಚಳಿಗಾಲದಲ್ಲಿ ಮನೆಯವರಿಗಾಗಿ ಆಕೆ ಚಿಂತಿಸಬೇಕಿಲ್ಲ; ಏಕೆಂದರೆ ಎಲ್ಲರಿಗೂ ಬೆಚ್ಚನೆಯ ಕಂಬಳಿಗಳಿವೆ.
22ತನಗೆ ಬೇಕಾದ ರತ್ನಗಂಬಳಿಯನ್ನು ತಾನೆ ನೇಯ್ದಿದ್ದಾಳೆ; ಆಕೆಯ ಉಡುಪೋ ನಾರುಮಡಿ, ರಕ್ತಾಂಬರ.
23ಆಕೆಯ ಗಂಡ ನಾಡಿಗರಲ್ಲಿ ಗಣ್ಯ; ನ್ಯಾಯಸ್ಥಾನದಲ್ಲಿ ಸನ್ಮಾನಿತ.
24ದುಪ್ಪಟಿಗಳನ್ನು ನೇಯ್ದು ಮಾರಾಟ ಮಾಡುತ್ತಾಳೆ; ನಡುಕಟ್ಟುಗಳನ್ನು ಮಾಡಿ ವರ್ತಕರಿಗೆ ವಿಕ್ರಯಿಸುತ್ತಾಳೆ.
25ಘನತೆ, ಗೌರವ, ಆಕೆಯ ಬಟ್ಟೆಬರೆ; ಭವಿಷ್ಯತ್ತಿನಲ್ಲಿ ಆಕೆಗೆ ನಿರ್ಭೀತ ನಗೆ.
26ಆಕೆಯ ಬಾಯಿಂದ ಬರುವ ಮಾತು ಜ್ಞಾನಪೂರ್ಣ; ಆಕೆ ಹೇಳುವ ಬುದ್ಧಿಮಾತು ಪ್ರೀತಿಪ್ರೇರಿತ.
27ಮನೆಗೆಲಸವನ್ನೆಲ್ಲ ಚೆನ್ನಾಗಿ ನೋಡಿಕೊಳ್ಳುತ್ತಾಳೆ; ಆಕೆ ಕೆಲಸಮಾಡದೆ ಊಟಮಾಡುವವಳಲ್ಲ.
28ಮಕ್ಕಳು ಆಕೆಯನ್ನು ಧನ್ಯಳೆಂದು ಹೊಗಳುವರು.
29ಗಂಡನು, “ಗುಣವತಿಯರು ಎಷ್ಟೋಮಂದಿ ಇರುವರು; ಅವರೆಲ್ಲರಿಗಿಂತ ನೀನೆ, ಶ್ರೇಷ್ಠಳು” ಎಂದು ಕೊಂಡಾಡುವನು.
30ಆಕರ್ಷಣೆ ನೆಚ್ಚತಕ್ಕದಲ್ಲ. ಅಲಂಕಾರ ನೆಲೆಯಾದುದಲ್ಲ; ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವಳೆ ಸ್ತುತ್ಯಾರ್ಹಳು.
31ಆಕೆಯ ಕೈ ಕೆಲಸಕ್ಕೆ ತಕ್ಕ ಪ್ರತಿಫಲ ಲಭಿಸಲಿ; ಆಕೆಯ ಕಾರ್ಯಗಳೇ ಆಕೆಯನ್ನು ಪುರದ್ವಾರಗಳಲ್ಲಿ ಹೊಗಳಲಿ!