ಹಳೆಯ ಒಡಂಬಡಿಕೆKNCL
1ಮಗನೇ, ನನ್ನ ಮಾತುಗಳನ್ನು ಅಂಗೀಕರಿಸು; ನಿಧಿಯಂತೆ ನನ್ನ ವಿಧಿಗಳನ್ನು ಕಾದಿರಿಸು.
2ಜ್ಞಾನದ ಕಡೆಗೆ ಕಿವಿಗೊಡು, ವಿವೇಕದ ಕಡೆಗೆ ಮನತಿರುಗಿಸು.
3ಬುದ್ಧಿಗಾಗಿ ಮೊರೆಯಿಡು, ವಿವೇಕಕ್ಕಾಗಿ ಕೂಗಿಕೊಳ್ಳು.
4ಹಣದಂತೆ ಅದನ್ನು ಹುಡುಕು, ನಿಧಿಯಂತೆ ಅದನ್ನು ತಡಕು.
5ಆಗ ಅರಿತುಕೊಳ್ಳುವೆ ದೈವಭಯವನ್ನು, ಪಡೆದುಕೊಳ್ಳುವೆ ದೈವಜ್ಞಾನವನ್ನು.
6ಜ್ಞಾನವನ್ನು ನೀಡುವಾತ ಸರ್ವೇಶ್ವರನೇ; ತಿಳುವಳಿಕೆ, ವಿವೇಕ ಹೊರಡುವುದು ಆತನ ಬಾಯಿಂದಲೇ.
7ಜ್ಞಾನವನ್ನು ಸಜ್ಜನರಿಗೆ ಸೇರಿಸಿಡುವನಾತ, ಸನ್ಮಾರ್ಗಿಗಳಿಗೆ ಕವಚವಾಗಿರುವನಾತ.
8ನ್ಯಾಯಮಾರ್ಗವನ್ನು ಕಾಯುವನಾತ, ಭಕ್ತರ ಹಾದಿಯನ್ನು ಭದ್ರವಾಗಿಸುವನಾತ.
9ಆಗ ನೀತಿನ್ಯಾಯಗಳನ್ನು ನೀನರಿತುಕೊಳ್ಳುವೆ, ಸಕಲ ಸನ್ಮಾರ್ಗಸತ್ಯತೆಗಳನ್ನೂ ತಿಳಿದುಕೊಳ್ಳುವೆ.
10ಜ್ಞಾನ ಉದಯಿಸುವುದು ನಿನ್ನ ಹೃದಯದೊಳಗೆ, ತಿಳುವಳಿಕೆ ಬೆಳಗುವುದು ನಿನ್ನ ಆತ್ಮದೊಳಗೆ.
11ಬುದ್ಧಿಯು ನಿನಗೆ ಕಾವಲಾಗಿರುವುದು, ವಿವೇಕವು ನಿನ್ನನ್ನು ಕಾಪಾಡುವುದು.
12ಹೀಗೆ ದುರ್ಮಾರ್ಗದಿಂದ ತಪ್ಪಿಸಿಕೊಳ್ಳುವೆ, ಮೂರ್ಖ ಮಾತುಗಾರನಿಂದ ಮರೆಯಾಗುವೆ.
13ಅಂಥವರು ಹಿಡಿವುದು ಕತ್ತಲು ಹಾದಿಯನ್ನು, ತೊರೆದುಬಿಡುವರು ಸತ್ಯದ ಮಾರ್ಗವನ್ನು.
14ಅವರು ಸಂತೋಷಿಸುವುದು ಕೇಡನ್ನು ಮಾಡುವುದರಲ್ಲಿ. ಉಲ್ಲಾಸಿಸುವುದು ಕೆಟ್ಟವರ ದುಷ್ಟತನದಲ್ಲಿ,
15ಅವರ ಮಾರ್ಗ ಅಂಕು, ಅವರ ನಡತೆ ಡೊಂಕು.
16ವಿವೇಕವು ನಿನ್ನನ್ನು ತಪ್ಪಿಸುವುದು ಜಾರಳಿಂದ, ಸವಿಮಾತಾಡುವ ಆ ಪರಸ್ತ್ರೀಯಳಿಂದ.
17ನಿನ್ನನ್ನು ಅದು ತಪ್ಪಿಸುವುದು ತನ್ನ ಯೌವನಕಾಲದ ಪ್ರಿಯನನ್ನು ತ್ಯಜಿಸಿದವಳಿಂದ, ತನ್ನ ದೇವರ ಮುಂದೆ ಮಾಡಿದ ಒಪ್ಪಂದವನ್ನು ಮರೆತವಳಿಂದ.
18ಅವಳ ಮನೆ ಪಾತಾಳಕ್ಕಿಳಿಸುವ ದಾರಿ, ಅವಳ ಮಾರ್ಗ ಪ್ರೇತಲೋಕಕ್ಕೆ ಹಾದಿ.
19ಅವಳ ಬಳಿಗೆ ಹೋಗುವವರು ಹಿಂದಿರುಗುವುದಿಲ್ಲ, ಅವರಿಗೆ ಜೀವಮಾರ್ಗ ಪುನಃ ದೊರಕುವುದಿಲ್ಲ.
20ನೀನಾದರೊ ಸಜ್ಜನರ ಮಾರ್ಗದಲ್ಲಿ ನಡೆವೆ, ನೀತಿವಂತರ ಹಾದಿಯನ್ನು ಹಿಡಿವೆ.
21ಸತ್ಯವಂತರು ನಾಡಿನಲ್ಲಿ ಬಾಳುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.
22ದುರುಳರಾದರೋ ನಾಡಿನಿಂದ ಬೇರ್ಪಡುವರು, ದ್ರೋಹಿಗಳು ಅಲ್ಲಿಂದ ಅಳಿದು ನಾಶವಾಗುವರು.