ಹಳೆಯ ಒಡಂಬಡಿಕೆKNCL

ಜ್ಞಾನೋಕ್ತಿಗಳು 23

1ಒಡೆಯನ ಸಂಗಡ ಊಟಕ್ಕೆ ಕುಳಿತುಕೊಂಡಾಗ ಯಾರ ಮುಂದಿರುವೆ ಎಂಬುದನ್ನು ಮರೆಯಬೇಡ.

2ತಡೆಯಲಾಗದ ಹಸಿವು ನಿನಗಿದ್ದರೂ ಕಂಠದಲ್ಲಿ ಕತ್ತಿಯಿರುವಂತೆ ಸಂಯಮದಿಂದಿರು.

3ಒಡೆಯನ ರುಚಿಪದಾರ್ಥಗಳನ್ನು ಬಯಸಬೇಡ. ಅವುಗಳಲ್ಲಿ ಮರೆಮೋಸ ಅಡಗಿರಲು ಸಾಧ್ಯ.

4ದುಡ್ಡಿನಾಸೆಗಾಗಿಯೆ ದುಡಿಯಬೇಡ; ಬುದ್ಧಿಯನ್ನೆಲ್ಲಾ ಅದಕ್ಕಾಗಿಯೇ ವ್ಯಯಮಾಡಬೇಡ.

5ನಿನ್ನ ದೃಷ್ಟಿ ಅದರ ಮೇಲೆ ಬೀಳುವಷ್ಟರಲ್ಲೆ ಅದು ಮಾಯ, ರೆಕ್ಕೆ ಕಟ್ಟಿಕೊಂಡ ಗರುಡನಂತೆ ಆಗಸದತ್ತ ಅದರ ಓಟ.

6ಜಿಪುಣ ದೃಷ್ಟಿಯವನು ಬಡಿಸುವ ಅನ್ನವನ್ನು ಉಣಬೇಡ; ಅವನ ರುಚಿಪದಾರ್ಥಗಳನ್ನು ಬಯಸಬೇಡ.

7ಅವನು ತನ್ನ ಮನದಲ್ಲೆ ಲೆಕ್ಕಿಸುತ್ತಿರುತ್ತಾನೆ “ಉಣ್ಣು, ಕುಡಿ” ಎಂದರೂ; ಅವನಿಗಿಲ್ಲ ನಿನ್ನ ಮೇಲೆ ಅಕ್ಕರೆ.

8ನೀನು ತಿಂದ ತುತ್ತನ್ನೆ ಕಕ್ಕಿ ಬಿಡುವೆ, ನೀನು ಆಡಿದ ಸವಿಮಾತೆಲ್ಲ ವ್ಯರ್ಥವೆ.

9ಮೂಢನ ಸಂಗಡ ಮಾತನಾಡಬೇಡ; ನಿನ್ನ ಬುದ್ಧಿಮಾತನ್ನು ಅವನು ಮಾನ್ಯಮಾಡ.

10ಪುರಾತನ ಎಲ್ಲೆ ಗುರುತನ್ನು ಒತ್ತರಿಸಬೇಡ; ಅನಾಥರ ಹೊಲಗದ್ದೆಯನ್ನು ಆಕ್ರಮಿಸಬೇಡ.

11ಅವರನ್ನು ಕಾಪಾಡುವ ಸರ್ವೇಶ್ವರ ಬಲಶಾಲಿ, ಆತ ನಿನ್ನೊಡನೆ ವಾದಿಸಬಲ್ಲ ಅವರ ಪರವಾಗಿ.

12ಉಪದೇಶವನ್ನು ಕೇಳುವುದರತ್ತ ಮನಸ್ಸಿಡು; ತಿಳುವಳಿಕೆಯ ಮಾತುಗಳಿಗೆ ಕಿವಿಗೊಡು.

13ಮಕ್ಕಳನ್ನು ದಂಡಿಸಿ ತಿದ್ದಲು ಹಿಂಜರಿಯಬೇಕಾಗಿಲ್ಲ; ಬೆತ್ತದ ಏಟಿಗೆ ಅವರು ಸತ್ತುಹೋಗುವುದಿಲ್ಲ.

14ಬೆತ್ತದಿಂದ ಬೇಕಾದರೆ ಹೊಡೆ; ಮಗುವಿನ ಆತ್ಮ ಪಾತಾಳಕ್ಕೆ ಬೀಳದಂತೆ ತಡೆ.

15ಮಗನೇ, ನೀನು ಬುದ್ಧಿವಂತನಾದರೆ ಆನಂದವೇ ಆನಂದ ನನ್ನ ಮನಸ್ಸಿಗೆ.

16ನಿನ್ನ ಬಾಯಿಂದ ಹಿತೋಕ್ತಿಗಳು ಬಂದರೆ ಸಂತೋಷ ನನ್ನ ಅಂತರಾತ್ಮಕ್ಕೆ.

17ಪಾಪಿಗಳನ್ನು ನೋಡಿ ಅಸೂಯೆಪಡಬೇಡ; ಸರ್ವೇಶ್ವರನಲ್ಲಿರಲಿ ನಿರಂತರ ಭಯಭಕ್ತಿ.

18ಆಗ ನಿನ್ನ ಭವಿಷ್ಯ ಶುಭದಾಯಕವಾಗಿರುವುದು, ನಿನ್ನ ನಿರೀಕ್ಷೆ ಸಾರ್ಥಕವಾಗುವುದು.

19ಮಗನೇ ಕೇಳು, ಬುದ್ಧಿವಂತನಾಗಿರು, ನಿನ್ನ ಮನಸ್ಸನ್ನು ಸನ್ಮಾರ್ಗದತ್ತ ಹರಿಸು.

20ಕುಡುಕರೊಡನೆ, ಹೊಟ್ಟೆಬಾಕರೊಡನೆ ಸೇರಬೇಡ; ಮಿತಿಮೀರಿ ಮಾಂಸ ತಿನ್ನುವ ಜನರ ಜೊತೆ ನಿನಗೆ ಬೇಡ.

21ಕುಡುಕನಿಗೂ ಹೊಟ್ಟೆಬಾಕನಿಗೂ ಕಾದಿದೆ ದುರ್ಗತಿ; ಹರಕು ಬಟ್ಟೆಗಳನ್ನು ಹೊದಿಸುವುದು ಅವರ ನಿದ್ರಾಸಕ್ತಿ.

22ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನ ತಾಯಿಯನ್ನು ಅಸಡ್ಡೆಮಾಡದಿರು.

23ಸತ್ಯವನ್ನು, ಅಂದರೆ ಜ್ಞಾನ, ಸುಶಿಕ್ಷೆ, ವಿವೇಕ ಇವನ್ನು ಬೆಲೆಕೊಟ್ಟಾದರೂ ಕೊಂಡುಕೊ, ಮಾರಿಬಿಡಬೇಡ!

24ನೀತಿವಂತನ ತಂದೆಗೆ ಅತಿ ಸಂತೋಷ; ಜ್ಞಾನಿಯನ್ನು ಹೆತ್ತವನಿಗೆ ಅತಿ ಉಲ್ಲಾಸ.

25ಹರ್ಷಗೊಳಿಸು ನಿನ್ನ ತಂದೆತಾಯಿಗಳನ್ನು; ಆನಂದಪಡಿಸು ನಿನ್ನ ಹೆತ್ತವಳನ್ನು.

26ಮಗನೇ, ನಾನು ಹೇಳುವುದು ನಾಟಲಿ ನಿನ್ನ ಮನಸ್ಸಿಗೆ; ನನ್ನ ನಡತೆ ಆದರ್ಶಕವಾಗಿರಲಿ ನಿನ್ನ ಕಣ್ಣುಗಳಿಗೆ.

27ವೇಶ್ಯೆ ಒಂದು ಆಳವಾದ ಬಾವಿ; ವ್ಯಭಿಚಾರಿಣಿ ಇಕ್ಕಟ್ಟಾದ ಗುಳಿ.

28ಆಕೆ ಕಳ್ಳನಂತೆ ಹೊಂಚುಹಾಕುತ್ತಾಳೆ; ಅನೇಕರನ್ನು ದ್ರೋಹಿಗಳನ್ನಾಗಿಸುತ್ತಾಳೆ.

29ಕಿರಿಚಾಟ, ಕೂಗಾಟ, ಕಿತ್ತಾಟ, ಗೋಳಾಟವು ನಿರ್ನಿಮಿತ್ತ ಹುಣ್ಣು, ಕೆಂಪೇರಿದ ಕಣ್ಣು; ಇವುಗಳನ್ನು ಅನುಭವಿಸುವವರು ಯಾರು?

30ಮಿಶ್ರಮದ್ಯಪಾನಗಳಲ್ಲಿ ಆಸಕ್ತನಾಗಿರುವವನೇ, ದ್ರಾಕ್ಷಾರಸ ಕುಡಿಯುತ್ತ ಕಾಲಹರಣ ಮಾಡುವವನೇ.

31ಪಾತ್ರೆಯಲ್ಲಿ ಕೆಂಪಗೆ ಥಳಥಳಿಸುವ, ಗಂಟಲಿನೊಳಗೆ, ಸುಲಭವಾಗಿ, ಇಳಿಯುವ, ದ್ರಾಕ್ಷಾರಸದ ಮೇಲೆ ಕಣ್ಣಿಡಬೇಡ.

32ಕುಡಿದಾದ ಮೇಲೆ ಅದು ಹಾವಿನಂತೆ ಕಚ್ಚುವುದು; ಹೌದು, ವಿಷಸರ್ಪದಂತೆ ಕಡಿಯುವುದು.

33ನಿನ್ನಾ ಕಣ್ಣು ಇಲ್ಲದ್ದನ್ನೇ ಕಾಣುವುದು; ಮನಸ್ಸು ವಕ್ರವಾದುವುಗಳನ್ನೇ ಹೊರಪಡಿಸುವುದು.

34ನೀನು ಸಮುದ್ರ ಮಧ್ಯದಲ್ಲಿ ಮಲಗಿ ಇರುವವನಂತೆ ಇರುವೆ, ಹಡಗಿನ ಕಂಬದ ತುದಿಯಲ್ಲಿ ನಿದ್ರಿಸುವವನಂತೆ ಇರುವೆ.

35“ಜನರು ನನ್ನನ್ನು ಹೊಡೆದರೂ ನೋವಾಗಲಿಲ್ಲ; ಬಡಿದರೂ ನನಗೆ ತಿಳಿಯಲಿಲ್ಲ; ಎಚ್ಚರವಾಗುವುದು ಯಾವಾಗ? ಮತ್ತೆ ಒಂದು ಸಾರಿ ಕುಡಿಯುವೆನು” ಎಂದುಕೊಳ್ಳುವೆ.