ಹಳೆಯ ಒಡಂಬಡಿಕೆKNCL

ಜ್ಞಾನೋಕ್ತಿಗಳು 21

1ರಾಜನ ಹೃದಯ ಸರ್ವೇಶ್ವರನ ಕೈಯಲ್ಲಿ; ತಿರುಗಿಸಬಲ್ಲ ಆತ ಅದನ್ನು ನೀರಿನ ಕಾಲುವೆಯ ಪರಿ.

2ಮಾನವರ ನಡವಳಿಕೆ ಅವರವರ ನೋಟಕ್ಕೆ ನೇರ; ಅವರ ಅಂತರಂಗವನ್ನು ವೀಕ್ಷಿಸಬಲ್ಲವನೋ ಸರ್ವೇಶ್ವರ.

3ನ್ಯಾಯನೀತಿಗಳು ಬಲಿಯರ್ಪಣೆಗಿಂತ ಶ್ರೇಷ್ಠ; ಸರ್ವೇಶ್ವರನಿಗೆ ಅವು ಬಲು ಇಷ್ಟ.

4ಗರ್ವದ ನೋಟ, ಉಬ್ಬಿದ ಎದೆ, ಇವು ದುರುಳರೊಳು ಕಾಣುವ ಪಾಪದ ಕಿಡಿಗಳು.

5ಶ್ರಮಜೀವಿಗಳ ಯೋಜನೆಯಿಂದ ಸಮೃದ್ಧಿ; ತಾಳ್ಮೆಯಿಲ್ಲದ ತ್ವರೆಯಿಂದ ಅಧೋಗತಿ.

6ಹಬೆಯಂತೆ ನಾಪತ್ತೆ ಸುಳ್ಳಿನಿಂದ ಸಿಕ್ಕಿದ ಸಂಪತ್ತು; ಮೃತ್ಯುಪಾಶದಂತೆ ಅದೊಂದು ವಿಪತ್ತು.

7ದುಷ್ಟರು ನ್ಯಾಯವನ್ನು ನಿರಾಕರಿಸುವ ಕಾರಣ, ಅವರನ್ನೇ ಎಳೆದೊಯ್ಯುವುದು ಅವರ ಹಿಂಸಾಚಾರ.

8ದೋಷಿಯ ದಾರಿ ಸೊಟ್ಟಗೆ; ದೋಷರಹಿತನ ನಡತೆ ನೆಟ್ಟಗೆ.

9ಜಗಳಗಂಟಿಯೊಡನೆ ಮಹಡಿ ಮನೆಯಲ್ಲಿರುವುದಕ್ಕಿಂತ ಗುಡಿಸಲಿನ ಮೂಲೆಯಲ್ಲಿ ಒಂಟಿಯಾಗಿ ವಾಸಿಸುವುದು ಲೇಸು.

10ದುರಾತ್ಮನ ಮನಸ್ಸು ಕೇಡಿನ ಮೇಲೆ; ದಯೆತೋರಿಸನಾತ ನೆರೆಯವನ ಮೇಲೆ.

11ಕುಚೋದ್ಯನಿಗೆ ದಂಡನೆಯಾದರೆ ಮುಗ್ಧನಿಗೆ ಜ್ಞಾನಗಳಿಕೆ; ಜ್ಞಾನಿಗೆ ಶಿಕ್ಷೆಯಾದರೆ ತಾನೆ ಹೊಂದುವನು ತಿಳುವಳಿಕೆ.

12ಸತ್ಯಸ್ವರೂಪನ ದೃಷ್ಟಿ ದುಷ್ಟರ ಮನೆಯ ಮೇಲೆ; ಆ ದುರುಳರನ್ನು ದಬ್ಬಿಬಿಡುವನು ಕೇಡಿಗೆ.

13ಬಡವನ ಮೊರೆಗೆ ಕಿವಿ ಮುಚ್ಚಿಕೊಳ್ಳುವವನೇ, ನೀನೇ ಮೊರೆಯಿಡುವಾಗ ಉತ್ತರಕೊಡುವವರಾರು ನಿನಗೆ?

14ಗುಟ್ಟಾಗಿ ಬಹುಮಾನ ಕೊಟ್ಟು ಸಿಟ್ಟನ್ನು ಅಡಗಿಸುತ್ತಾರೆ; ಮಡಿಲಲ್ಲಿ ಲಂಚವನ್ನು ಮುಚ್ಚಿಟ್ಟು ಕೋಪವನ್ನು ಆರಿಸುತ್ತಾರೆ.

15ನ್ಯಾಯವಾದ ತೀರ್ಪಿನಿಂದ ಸಜ್ಜನರಿಗೆ ಸಂತಸ; ದುರ್ಜನರಿಗಾದರೊ ಅದು ತರುತ್ತದೆ ಸಂಕಟ.

16ಬುದ್ಧಿಮಾರ್ಗ ಬಿಟ್ಟು ನಡೆದವನು ಪ್ರೇತಗಳ ನಡುವೆ ವಿಶ್ರಾಂತಿ ಪಡೆಯುವನು.

17ಭೋಗಾಸಕ್ತನು ಬಡವನಾಗುವನು, ಮಧ್ಯಸುಗಂಧಗಳನ್ನು ಬಯಸುವವನು ಧನವಂತನಾಗನು.

18ದುರ್ಜನರು ಸಜ್ಜನರಿಗೆ ದ್ರೋಹಿಗಳು; ನೀತಿವಂತರಿಗೆ ಮಾಡಲಾಶಿಸುವ ಕೇಡಿಗೆ ತಾವೇ ಈಡಾಗುವರು.

19ಕಾಡುವ ಜಗಳಗಂಟಿಯ ಸಹವಾಸಕ್ಕಿಂತಲು ಕಾಡಿನಲ್ಲಿ ಒಂಟಿಯಾಗಿ ವಾಸಿಸುವುದೇ ಲೇಸು.

20ಬುದ್ಧಿವಂತನ ಮನೆಯ ಸಿರಿ, ಎಣ್ಣೆ ಬೆಣ್ಣೆ; ಬುದ್ಧಿಹೀನನು ನುಂಗಿಬಿಡುವನು ಸರ್ವಸ್ವವನ್ನೆ.

21ನೀತಿ ಪ್ರೀತಿ ಪಾಲಿಸುವವನಿಗೆ ಲಭಿಸುವುದು ಆಯುಸ್ಸು, ಕೀರ್ತಿ, ದೊಡ್ಡಸ್ತಿಕೆ.

22ಜ್ಞಾನಿ ಹಿಡಿಯಬಲ್ಲನು ಬಲಿಷ್ಠರ ಪಟ್ಟಣವನ್ನು ಕೆಡವಬಲ್ಲನು ಅವರ ಬಲವಾದ ಕೋಟೆಯನ್ನು.

23ಬಾಯನ್ನೂ ನಾಲಿಗೆಯನ್ನೂ ಕಾಯಬಲ್ಲವನು ಜಯಿಸುವನು ತೊಂದರೆ ತಾಪತ್ರಯಗಳನ್ನು.

24ಸೊಕ್ಕೇರಿದ ಗರ್ವಿ ಕುಚೋದ್ಯನೆನಿಸಿಕೊಳ್ಳುವನು; ಅಹಂಕಾರ, ಮದಮತ್ಸರಗಳಿಂದ ಅವನು ವರ್ತಿಸುವನು.

25ಮೈಗಳ್ಳನನ್ನು ಕೊಲ್ಲುವುದು ಅವನ ಇಚ್ಛೆಯೆ; ಬಗ್ಗದು ಅವನ ಕೈ ದುಡಿಮೆಗೆ.

26ಇಲ್ಲವೆನ್ನದೆ ಕೊಡುವವರು ಸಜ್ಜನರು; ದಾನವೆಲ್ಲ ಬೇಕೆನ್ನುತ್ತಿರುವವನು ಜಿಪುಣನು.

27ದುಷ್ಟರು ಅರ್ಪಿಸುವ ಬಲಿಯಜ್ಞ ಅಸಹ್ಯ; ದುರಾಲೋಚನೆಯಿಂದ ಅರ್ಪಿಸುವುದು ಮತ್ತೂ ಅಸಹ್ಯ.

28ಸುಳ್ಳು ಸಾಕ್ಷಿ ಹೇಳುವವನೇ ಅಳಿದುಹೋಗುವನು; ಕೇಳಿದ್ದನ್ನೆ ಹೇಳುವವನ ಸಾಕ್ಷಿ ಅಳಿಯದೆ ಉಳಿಯುವುದು.

29ದುಷ್ಟನ ಮುಖದಲ್ಲಿ ಹಟಭಾವನೆ; ಸಜ್ಜನನ ನಡತೆಯಲ್ಲಿ ಸದೃಢತೆ.

30ಸರ್ವೇಶ್ವರನ ಮುಂದೆ ನಿಲ್ಲಬಲ್ಲ ಜ್ಞಾನವಿಲ್ಲ, ವಿವೇಚನೆಯಿಲ್ಲ, ಆಲೋಚನೆಯಿಲ್ಲ.

31ಯುದ್ಧಕ್ಕಾಗಿ ಸನ್ನದ್ಧವಾಗಿರಬಹುದು ಅಶ್ವಬಲ; ಜಯಸಿಗುವುದಾದರೋ ಸರ್ವೇಶ್ವರನಿಂದ.