ಹಳೆಯ ಒಡಂಬಡಿಕೆKNCL
1ಬೇರೆಯವರೊಡನೆ ಸೇರದವನು ಸ್ವೇಚ್ಛಾನುಸಾರ ನಡೆಯುವನು; ಇತರರು ಸುಜ್ಞಾನವೆನ್ನುವುದನ್ನೇ ವಿರೋಧಿಸುವನು.
2ಮತಿಗೆಟ್ಟವನಿಗೆ ವಿವೇಕವು ಅನಿಷ್ಟ; ಸ್ವಾರ್ಥವನ್ನು ಪ್ರಕಟಿಸುವುದೆಂದರೆ ಅವನಿಗೆ ಬಲು ಇಷ್ಟ.
3ದುರಾಚಾರವಿದ್ದಲ್ಲಿ ತಾತ್ಸಾರ; ಮಾನ ಕಳೆದುಕೊಂಡಲ್ಲಿ ಧಿಕ್ಕಾರ.
4ಸತ್ಪುರುಷನ ನುಡಿ ಜಲನಿಧಿ; ಜ್ಞಾನದ ಬುಗ್ಗೆ ಹರಿಯುವ ತೊರೆ.
5ದುಷ್ಟನಿಗೆ ಪಕ್ಷಪಾತ ತೋರುವುದು ಸಲ್ಲ; ಸಜ್ಜನನಿಗೆ ನ್ಯಾಯ ತಪ್ಪಿಸುವುದು ಸರಿಯಲ್ಲ.
6ಕಲಹವೆಬ್ಬಿಸುವುದು ಬುದ್ಧಿಹೀನನ ತುಟಿ; ಪೆಟ್ಟಿಗಾಗಿ ಕೂಗಿಕೊಳ್ಳುವುದು ಅವನ ಬಾಯಿ.
7ಬುದ್ಧಿಹೀನನಿಗೆ ಬಾಯೇ ನಾಶ, ತುಟಿಗಳೇ ಅವನಿಗೆ ಪಾಶ.
8ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು; ಅವು ಅಡಿಹೊಟ್ಟೆಗೆ ಇಳಿಯುವ ಕವಳಗಳು.
9ಸೋಮಾರಿಯಾದ ಕೆಲಸಗಳ್ಳನು, ಕೆಡುಕನಿಗೆ ರಕ್ತಸಂಬಂಧಿಕನು.
10ಸರ್ವೇಶ್ವರನ ನಾಮ ಬಲವಾದ ಗೋಪುರ; ಅದರೊಳಗೆ ಓಡಿ ಆಶ್ರಯ ಪಡೆದರೆ ಸುಭದ್ರ.
11ಐಶ್ವರ್ಯವಂತನಿಗೆ ಹಣವೆ ಬಲವಾದ ಕೋಟೆ; ಅದುವೇ ಎತ್ತರವಾದ ಪೌಳಿಗೋಡೆ.
12ಭಂಗಕ್ಕೆ ಮುಂಚೆ ಗರ್ವದ ಗುಂಡಿಗೆ; ಗೌರವಕ್ಕೆ ಮೊದಲು ನಮ್ರತೆ.
13ಕೇಳಿಸಿಕೊಳ್ಳದೆ ಉತ್ತರಕೊಡುವವನು ಹುಚ್ಚ; ನಿಂದೆ ಅವಮಾನಕ್ಕೆ ಅವನು ಯೋಗ್ಯ.
14ಆತ್ಮವು ವ್ಯಾಧಿಯನ್ನು ಸಹಿಸಬಲ್ಲದು; ಆತ್ಮವೇ ನೊಂದರೆ ಸಹಿಸುವವರಾರು?
15ಬುದ್ಧಿವಂತನ ಮನಸ್ಸು ತಿಳುವಳಿಕೆಯನ್ನು ಗಳಿಸುತ್ತದೆ; ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ.
16ಕಾಣಿಕೆ ತರುವವನಿಗೆ ಬಾಗಿಲು ತೆರೆಯುತ್ತದೆ; ಶ್ರೀಮಂತನ ಸಾನ್ನಿಧ್ಯಕ್ಕೂ ಅದು ನಡೆಸುತ್ತದೆ.
17ಮೊದಲು ವಾದಿಸುವವನು ನ್ಯಾಯವಾದಿಯೆಂದೇ ತೋರುವನು; ಅವನ ಬಂಡವಾಳ ಗೊತ್ತಾಗುವುದು ಪ್ರತಿವಾದಿ ಎದ್ದ ಮೇಲೆ.
18ಚೀಟುಹಾಕುವುದರಿಂದ ವ್ಯಾಜ್ಯಗಳ ಶಮನ; ಜಟ್ಟಿಗಳ ನಡುವೆ ಕಾಳಗದ ವಿರಾಮ.
19ಸಹಾಯ ಹೊಂದಿದ ಸೋದರ ದುರ್ಗಕ್ಕಿಂತಲು ದುಸ್ತರ; [1] ಅವನೊಡನೆ ಜಗಳ ಕೋಟೆ ಮನೆಗೆ ಹಾಕಿದ ಅಗುಳಿ.
20ಬಾಯಿ ಬಿತ್ತಿದ ಬೆಳೆಯಿಂದ ಮನುಷ್ಯ ಹೊಟ್ಟೆ ತುಂಬುವನು; ತುಟಿಗಳು ಕೊಟ್ಟ ಫಲದಿಂದ ತಿಂದು ತೇಗುವನು.
21ಜನನ ಮರಣಗಳ ಶಕ್ತಿ ನಾಲಿಗೆಗಿದೆ; ವಚನ ಪ್ರಿಯರು ಅದರ ಫಲವನ್ನು ರುಚಿಸುವರು.
22ಮಡದಿಯನ್ನು ಪಡೆಯುವುದು ಪುಣ್ಯಪಡೆದ ಹಾಗೆ, ಅದು ಸರ್ವೇಶ್ವರನ ಅನುಗ್ರಹಪಡೆದ ಹಾಗೆ.
23ಬಡವರು ಮಾಡುವ ಬಿನ್ನಹ ನಮ್ರ; ಬಲ್ಲಿದರು ಕೊಡುವ ಬದಲು ಉಗ್ರ.
24ಗೆಳೆಯರಂತೆ ನಟಿಸಿ ನಾಶಗೊಳಿಸುವವರು ಅನೇಕರುಂಟು; ಸಹೋದರನಿಗಿಂತ ಪ್ರಿಯನಾದ ಸ್ನೇಹಿತನೂ ಉಂಟು.