ಹಳೆಯ ಒಡಂಬಡಿಕೆKNCL
1ಜಗಳ ತುಂಬಿದ ಮನೆಯಲ್ಲಿ ಹಬ್ಬದೂಟ ಮಾಡುವುದಕ್ಕಿಂತಲು ಶಾಂತಿ ಸಮಾಧಾನದಿಂದ ಕೂಡಿದ ಒಣ ತುತ್ತೇ ಲೇಸು.
2ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರ ನಡೆಸುವನು, ಮನೆಮಕ್ಕಳ ಬಾಧ್ಯತೆಯಲ್ಲೂ ಪಾಲುಗಾರನಾಗುವನು.
3ಪುಟಕುಲುಮೆಗಳು ಬೆಳ್ಳಿಬಂಗಾರಗಳನ್ನು ಶೋಧಿಸುತ್ತವೆ; ಸರ್ವೇಶ್ವರನು ಹೃದಯಗಳನ್ನು ಶೋಧಿಸುತ್ತಾನೆ.
4ಕೆಡುಕನು ಕೆಟ್ಟತುಟಿ ಆಡುವುದನ್ನು ಗಮನಿಸುತ್ತಾನೆ; ಸುಳ್ಳುಗಾರ ನಷ್ಟಮಾಡುವ ನಾಲಿಗೆಗೆ ಕಿವಿಗೊಡುತ್ತಾನೆ.
5ಬಡವರನ್ನು ಗೇಲಿಮಾಡುವವನು ತನ್ನ ಸೃಷ್ಟಿಕರ್ತನನ್ನೇ ಹೀನೈಸುತ್ತಾನೆ; ಪರರ ಕಷ್ಟದುಃಖಗಳನ್ನು ನೋಡಿ ಹಿಗ್ಗುವವನು ದಂಡನೆಗೆ ಗುರಿಯಾಗುತ್ತಾನೆ.
6ಮಕ್ಕಳ ಮಕ್ಕಳು ಮುದುಕರ ಮುಕುಟ; ಮಕ್ಕಳಿಗೆ ಹೆತ್ತವರೇ ಭೂಷಣ.
7ಉತ್ತಮವಾದ ಮಾತು ಮೂರ್ಖನಿಗೆ ಹಿಡಿಸದು; ಸುಳ್ಳುಮಾತು ಉತ್ತಮನಿಗೆ ಮತ್ತೂ ಹಿಡಿಸದು.
8ಕೊಡುವವನ ಕಣ್ಣಿಗೆ ಲಂಚವು ಚಿಂತಾಮಣಿಯಂತೆ; ಎತ್ತ ತಿರುಗಿದರತ್ತ ಅದರಿಂದ ಜಯವಂತೆ!
9ತಪ್ಪನ್ನು ಮನ್ನಿಸುವವನು ಪ್ರೀತಿಯನ್ನು ಅರಸುತ್ತಾನೆ; ತಪ್ಪನ್ನು ಎತ್ತಿ ಆಡುವವನು ಆಪ್ತನನ್ನೂ ಕಳೆದುಕೊಳ್ಳುತ್ತಾನೆ.
10ಮಂದಮತಿಗೆ ನೂರು ಗುದ್ದು; ಬುದ್ಧಿವಂತನಿಗೆ ಒಂದು ಮಾತು.
11ದುರಾತ್ಮನ ಕಣ್ಣೆಲ್ಲಾ ದಂಗೆ ಏಳುವುದರ ಮೇಲೆ; ಕ್ರೂರದೂತನು ಎರಗಿ ಬರುವನು ಅವನ ಮೇಲೆ.
12ಮೂರ್ಖತನದಲ್ಲಿ ಮುಳುಗಿರುವ ಮೂಢನಿಗೆ ಎದುರಾಗುವುದಕ್ಕಿಂತಲು ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವುದು ಲೇಸು.
13ಯಾರು ಉಪಕಾರಕ್ಕೆ ಅಪಕಾರ ಮಾಡುತ್ತಾರೊ ಅಂಥವರ ಮನೆಯಿಂದ ಕೇಡು ತೊಲಗದು.
14ವಾಗ್ವಾದವು ಏರಿಗೆ ಬಿರುಕು ಬಿದ್ದಂತೆ; ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ತೊರೆದುಬಿಡು.
15ದುರ್ಜನರನ್ನು ಸಜ್ಜನರೆಂದೂ, ಸಜ್ಜನರನ್ನು ದುರ್ಜನರೆಂದೂ ನಿರ್ಣಯಿಸುವ ಇಬ್ಬರೂ ಸರ್ವೇಶ್ವರನಿಗೆ ಅಸಹ್ಯರು.
16ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಇದನ್ನು ಕೊಳ್ಳಲು ಬೇಕಾದ ಬುದ್ಧಿಯೇ ಅವನಿಗಿಲ್ಲವಲ್ಲಾ!
17ಮಿತ್ರನ ಪ್ರೀತಿ ನಿರಂತರ; ಕಷ್ಟಕ್ಕಾದವನೆ ಹುಟ್ಟುನಂಟ.
18ಬೇರೆಯವನ ಸಾಲಕ್ಕಾಗಿ ಕೈ ಮೇಲೆ ಕೈಹಾಕಿ ಹೊಣೆಯಾಗಿ ನಿಂತವನು ಬುದ್ಧಿಹೀನನೆ ಸರಿ.
19ಕಲಹಪ್ರಿಯನು ಪಾಪಪ್ರಿಯನು; ಕದವನ್ನು ಎತ್ತರಿಸಿದವನು [1] ಕೇಡನ್ನು ಬರಮಾಡಿಕೊಳ್ಳುವನು.
20ವಕ್ರಮನಸ್ಸುಳ್ಳವನು ಒಳಿತನ್ನು ಕಾಣನು; ಕೆಟ್ಟ ನಾಲಿಗೆಯವನು ಸಂಕಟಕ್ಕೆ ಸಿಕ್ಕಿಕೊಳ್ಳುವನು.
21ಹೆಡ್ಡನನ್ನು ಹೆತ್ತವನಿಗೆ ವ್ಯಥೆ; ಮೂರ್ಖನ ತಂದೆಗೆ ಕಡುಚಿಂತೆ.
22ಹರ್ಷ ಹೃದಯ ಒಳ್ಳೆಯ ಔಷಧ; ಕುಗ್ಗಿದ ಮನದಿಂದ ಅಸ್ಥಿಪಂಜರ.
23ಲಂಚವನ್ನು ಗುಟ್ಟಾಗಿ ಪಡೆದ ದುಷ್ಟನು ಡೊಂಕಾಗಿಸುತ್ತಾನೆ ನ್ಯಾಯ ನಿರ್ಣಯವನ್ನು.
24ವಿವೇಕಿಗೆ ಜ್ಞಾನವೇ ಗುರಿ ಧ್ಯೇಯ; ಮೂಢನ ದೃಷ್ಟಿ ದಿಗಂತದಷ್ಟು ವಿಶಾಲ.
25ಬುದ್ಧಿಹೀನನಾದ ಮಗನು ತಂದೆಗೆ ಕಿರಿಕಿರಿ; ಹೆತ್ತತಾಯಿಗೆ ಅವನು ಕರಕರೆ.
26ನೀತಿವಂತನಿಗೆ ದಂಡ ಸರಿಯಲ್ಲ; ಸಜ್ಜನನಿಗೆ ಶಿಕ್ಷೆ ನ್ಯಾಯವಲ್ಲ.
27ಹಿಡಿದು ಮಾತಾಡುವವನು ಜ್ಞಾನಿ; ಶಾಂತ ಗುಣವುಳ್ಳವನು ವಿವೇಕಿ.
28ಮೂಢನು ಕೂಡ ಮೌನತಾಳಿದರೆ ಜ್ಞಾನಿಯೆನಿಸಿಕೊಳ್ಳುವನು; ತುಟಿಗಳನ್ನು ಬಿಗಿಹಿಡಿದರೆ ವಿವೇಕಿ ಎನಿಸಿಕೊಳ್ಳುವನು.