ಹಳೆಯ ಒಡಂಬಡಿಕೆKNCL
1ಮೃದುವಾದ ಮಾತು ಸಿಟ್ಟನ್ನಾರಿಸುತ್ತದೆ; ಬಿರುಸಾದ ನುಡಿ ಸಿಟ್ಟನ್ನೇರಿಸುತ್ತದೆ.
2ಜ್ಞಾನಿಗಳ ನಾಲಿಗೆ ತಿಳುವಳಿಕೆಯನ್ನು ಸಾರ್ಥಕಪಡಿಸುತ್ತದೆ; ಜ್ಞಾನಹೀನರ ಬಾಯಿ ಮೂರ್ಖತನವನ್ನು ಕಕ್ಕುತ್ತದೆ.
3ಸರ್ವೇಶ್ವರನ ದೃಷ್ಟಿ ಸರ್ವವ್ಯಾಪ್ತ; ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಆತನ ನೋಟ.
4ಸಂತೈಸುವ ನಾಲಿಗೆ ಜೀವವೃಕ್ಷಕ್ಕೆ ಸಮಾನ; ಹಿಂಸಾತ್ಮಕ ನಾಲಿಗೆ ಮನಮುರಿತಕ್ಕೆ ಸಾಧನ.
5ಮೂರ್ಖನು ತಂದೆಯ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡುತ್ತಾನೆ; ಜಾಣನು ಆತನ ಗದರಿಕೆಯನ್ನೂ ಗಮನಿಸುತ್ತಾನೆ.
6ನೀತಿವಂತನ ಮನೆಯೊಳು ನಿಧಿನಿಕ್ಷೇಪ; ಅನೀತಿವಂತನ ಆದಾಯ ದುಃಖತಾಪ.
7ತಿಳುವಳಿಕೆಯ ಬಿತ್ತನೆ ಜ್ಞಾನಿಗಳ ಬಾಯಿಂದ; ದುರುಳರ ಹೃದಯಕ್ಕೆ ಅದು ಅಸಾಧ್ಯ.
8ದುರುಳರು ಅರ್ಪಿಸುವ ಬಲಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರು ಮಾಡುವ ಪ್ರಾರ್ಥನೆ ಆತನಿಗೆ ಪ್ರಿಯ.
9ದುರುಳರ ನಡತೆ ಸರ್ವೇಶ್ವರನಿಗೆ ಹೇಯ; ನೀತಿವಂತರ ನಡತೆ ಆತನಿಗೆ ಸುಪ್ರಿಯ.
10ಸನ್ಮಾರ್ಗವನ್ನು ತೊರೆದವನಿಗೆ ಬರುವ ಶಿಕ್ಷೆ ಕಠಿಣ ಬುದ್ಧಿವಾದವನ್ನು ಕೇಳಲೊಲ್ಲದವನಿಗೆ ಬರುವುದು ಮರಣ.
11ಸರ್ವೇಶ್ವರನ ಕಣ್ಣಿಗೆ ನರಕಪಾತಾಳಗಳೇ ಬಟ್ಟಬಯಲಾಗಿರಲು; ನರಮಾನವರ ಹೃದಯ ಆತನಿಗೆ ಮುಚ್ಚುಮರೆಯೇ?
12ಕುಚೋದ್ಯನಿಗೆ ಬೇಡ ಬುದ್ಧಿವಾದ; ಅವನಿಗೆ ಬೇಡ ಜ್ಞಾನಿಗಳ ಸತ್ಸಂಘ.
13ಹರ್ಷಹೃದಯದಿಂದ ಮುಖ ಅರಳುವುದು; ಮನೋವ್ಯಥೆಯಿಂದ ಚೈತನ್ಯ ಕುಂದುವುದು.
14ವಿವೇಕಿಯ ಮನ ತಿಳುವಳಿಕೆಯನ್ನು ಅರಸುವುದು; ಮತಿಹೀನನ ಬಾಯಿ ಮೂರ್ಖತನವನ್ನು ಮುಕ್ಕುವುದು.
15ದಲಿತರ ದಿನಗಳೆಲ್ಲ ದುಃಖಭರಿತ; ಹರ್ಷ ಹೃದಯನಿಗೆ ಸದಾ ಹಬ್ಬದಾನಂದ.
16ನೆಮ್ಮದಿಯಿಲ್ಲದ ಸಿರಿಸಂಪತ್ತಿಗಿಂತಲು, ಸರ್ವೇಶ್ವರನ ಭಯಭಕ್ತಿಯಿಂದ ಕೂಡಿದ ಕಿಂಚಿತ್ತೇ ಮೇಲು.
17ದ್ವೇಷವಿರುವಲ್ಲಿ ಕೊಬ್ಬಿದ ಮಾಂಸಭೋಜನಕ್ಕಿಂತ, ಪ್ರೀತಿಯಿರುವಲ್ಲಿ ಸೊಪ್ಪಿನ ಊಟವೇ ಲೇಸು.
18ಉಗ್ರಕೋಪಿ ವ್ಯಾಜ್ಯವೆಬ್ಬಿಸುತ್ತಾನೆ; ದೀರ್ಘಶಾಂತನು ಜಗಳ ತೀರಿಸುತ್ತಾನೆ.
19ಸೋಮಾರಿಯ ದಾರಿ ಮುಳ್ಳಿನ ಬೇಲಿ; ಸಜ್ಜನರ ಮಾರ್ಗ ರಾಜಬೀದಿ.
20ಬುದ್ಧಿವಂತ ಮಗ ತಂದೆಯನ್ನು ಸಂತೋಷಗೊಳಿಸುತ್ತಾನೆ; ಬುದ್ಧಿಹೀನನು ಹೆತ್ತ ತಾಯಿಯನ್ನು ತಿರಸ್ಕರಿಸುತ್ತಾನೆ.
21ಬುದ್ಧಿಹೀನನು ಮೂರ್ಖತನದಲ್ಲಿ ಆನಂದಿಸುತ್ತಾನೆ; ಬುದ್ಧಿವಂತನು ಸನ್ಮಾರ್ಗದಲ್ಲಿ ಮುಂದುವರಿಯುತ್ತಾನೆ.
22ಆಲೋಚನೆಯಿಲ್ಲದೆ ಉದ್ದೇಶಗಳು ಈಡೇರವು; ಹಲವಾರು ಆಲೋಚನಾಪರರಿರುವಲ್ಲಿ ಅವು ಕೈಗೂಡುವುವು.
23ಸದುತ್ತರ ಕೊಡುವವನಿಗೆ ಎಷ್ಟೋ ಸಂತೋಷ; ಸಮಯೋಚಿತ ವಚನ ಎಷ್ಟೋ ಸ್ವಾರಸ್ಯ.
24ವಿವೇಕಿಗಳ ಮಾರ್ಗ ಏರಿಸುವುದು ಸಜ್ಜೀವಕ್ಕೆ; ಅದನ್ನು ಕೈಗೊಳ್ಳುವವರು ಇಳಿಯರು ಪಾತಾಳಕ್ಕೆ.
25ಗರ್ವಿಷ್ಠನ ಮನೆಯನ್ನು ಸರ್ವೇಶ್ವರ ಕೆಡವಿಬಿಡುವನು; ವಿಧವೆಯ ಎಲ್ಲೆ ಮೇರೆಯನ್ನು ಸುಭದ್ರಪಡಿಸುವನು.
26ದುರುಳರ ಕುಯುಕ್ತಿ ಸರ್ವೇಶ್ವರನಿಗೆ ಅಸಹ್ಯ; ಸಜ್ಜನರ ಸುಸೂಕ್ತಿ ಆತನಿಗೆ ಪ್ರಿಯ.
27ಸೂರೆಮಾಡುವವನು ಸ್ವಂತ ಮನೆಗೇ ಕೇಡುಮಾಡುತ್ತಾನೆ; ಲಂಚವನ್ನು ದ್ವೇಷಿಸುವವನು ಸುಖವಾಗಿ ಬಾಳುತ್ತಾನೆ.
28ಸಜ್ಜನರು ಸಮಾಲೋಚಿಸಿ ಉತ್ತರಿಸುತ್ತಾರೆ; ದುರ್ಜನರು ಕೆಟ್ಟದ್ದನ್ನು ಕಕ್ಕುತ್ತಿರುತ್ತಾರೆ.
29ಸರ್ವೇಶ್ವರನು ದುರುಳರಿಗೆ ದೂರ; ನೀತಿವಂತರ ಪ್ರಾರ್ಥನೆಗೆ ಹತ್ತಿರ.
30ಹಸನ್ಮುಖ ಕಂಡಾಗ ಹೃದಯಕ್ಕೆ ಆನಂದ; ಶುಭಸಮಾಚಾರದಿಂದ ದೇಹಕ್ಕೆ ಉತ್ತೇಜನ.
31ಹಿತಕರ ಬುದ್ಧಿವಾದಕ್ಕೆ ಕಿವಿಗೊಡುವವನು ಸಜ್ಜನರ ಸತ್ಸಂಘದಲ್ಲಿ ಪಾಲ್ಗೊಳ್ಳುವನು.
32ಶಿಸ್ತನ್ನು ನಿರಾಕರಿಸುವವನು ತನ್ನನ್ನೇ ತೃಣೀಕರಿಸುತ್ತಾನೆ; ಬುದ್ಧಿವಾದವನ್ನು ಅಂಗೀಕರಿಸುವವನು ಜ್ಞಾನ ಹೊಂದುತ್ತಾನೆ.
33ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರಿಗೆ ಜ್ಞಾನೋದಯ; ಘನತೆಗೌರವಕ್ಕೆ ಮುಂಚೆ ಸವಿನಯ.