ಹಳೆಯ ಒಡಂಬಡಿಕೆKNCL
1ಕಳ್ಳತಕ್ಕಡಿ ಸರ್ವೇಶ್ವರನಿಗೆ ಅಸಹ್ಯ; ನ್ಯಾಯವಾದ ತೂಕ ಆತನಿಗೆ ಪ್ರಿಯ.
2ಅಹಂಕಾರವಿದ್ದಲ್ಲಿ ಅವಮಾನ; ಸ್ವಾರ್ಥ ನಿಗ್ರಹವಿದ್ದಲ್ಲಿ ಸುಜ್ಞಾನ.
3ಸಜ್ಜನರಿಗೆ ಸರಳತೆ ಮಾರ್ಗದರ್ಶನ, ದುರ್ಜನರಿಗೆ ಅವರ ವಕ್ರತೆ ಸಂಹಾರಕ.
4ತೀರ್ಪಿನ ದಿನ ನೆರವಾಗದು ಆಸ್ತಿಪಾಸ್ತಿ; ಸನ್ನಡತೆಯಿಂದಲೆ ಮರಣದಿಂದ ವಿಮುಕ್ತಿ.
5ನಿರ್ದೋಷಿಯ ಮಾರ್ಗ ಸರಾಗ; ದುಷ್ಟತನದಿಂದ ದುರುಳನ ಪತನ.
6ಸಜ್ಜನರ ಬಿಡುಗಡೆ ಸದಾಚಾರದಿಂದ; ವಂಚಕರ ಬಂಧನ ದುರಾಶೆಯಿಂದ.
7ದುರುಳನೊಂದಿಗೆ ಸಾಯುವುದು ಅವನ ನಿರೀಕ್ಷೆ; ಅಳಿವುದು ಸಾಮರ್ಥ್ಯದ ಮೇಲಿಟ್ಟ ಅವನ ನಂಬಿಕೆ.
8ಸಜ್ಜನನು ಇಕ್ಕಟ್ಟಿನಿಂದ ಪಾರಾಗುವನು; ದುರ್ಜನನು ಅದರೊಳಗೆ ಸಿಕ್ಕಿಬೀಳುವನು.
9ಅನೀತಿವಂತನು ಮಾತಿನಿಂದ ನೆರೆಯವನನ್ನು ನಾಶಮಾಡುವನು; ನೀತಿವಂತನು ತಿಳುವಳಿಕೆಯಿಂದ ಅವನನ್ನು ಉದ್ಧಾರಮಾಡುವನು.
10ಸಜ್ಜನರು ಸುಖಿಗಳಾದರೆ ಊರಿಗೆ ಉಲ್ಲಾಸ; ದುರ್ಜನರು ಹಾಳಾದರೆ ಮಾಡುವರು ಜಯಘೋಷ.
11ಸತ್ಪುರುಷರ ಆಶೀರ್ವಾದದಿಂದ ಪುರೋದ್ಧಾರ; ದುಷ್ಟಜನರ ಕೆಟ್ಟ ಬಾಯಿಂದ ಅದರ ಸಂಹಾರ.
12ನೆರೆಯವನನ್ನು ತೃಣೀಕರಿಸುವವನು ಬುದ್ಧಿಹೀನ; ವಿವೇಕಿಯು ಅದರ ಬಗ್ಗೆ ತಾಳುವನು ಮೌನ.
13ಚಾಡಿಕೋರನು ಗುಟ್ಟನ್ನು ರಟ್ಟುಮಾಡುವನು; ನಂಬಿಕಸ್ತನು ಅದನ್ನು ಮುಚ್ಚಿ ಮರೆಮಾಡುವನು.
14ನಾಯಕನಿಲ್ಲದ ಜನತೆ ನಾಶವಾಗುವುದು; ಹಲವರು ಸುಮಂತ್ರಿಗಳಿರುವಲ್ಲಿ ಸಂರಕ್ಷಣೆ ಇರುವುದು.
15ಅಪರಿಚಿತನಿಗೆ ಜಾಮೀನು ನಿಂತರೆ ಹಾನಿ; ಜಾಮೀನನ್ನು ತೊರೆದುಬಿಟ್ಟರೆ ನೆಮ್ಮದಿ.
16ಸದ್ಗುಣಸ್ತ್ರೀ ಕಾಪಾಡಿಕೊಳ್ಳುತ್ತಾಳೆ ಸನ್ಮಾನವನ್ನು; ಬಲವಂತವ್ಯಕ್ತಿ ಕಾಪಾಡಿಕೊಳ್ಳುತ್ತಾನೆ ಆಸ್ತಿಪಾಸ್ತಿಯನ್ನು.
17ಪರೋಪಕಾರಿ ತನಗೂ ಉಪಕಾರಿ; ಕ್ರೂರಿಯಾದವನು ತನ್ನ ದೇಹಕ್ಕೂ ಕ್ರೂರಿ.
18ದುರುಳನು ಪಡೆವ ಸಂಬಳ ಜೊಳ್ಳು ಸಂಬಳ; ನೀತಿಯನ್ನು ಬಿತ್ತುವವನು ಪಡೆವನು ಸತ್ಫಲ.
19ಧರ್ಮನಿರತನಿಗೆ ದೊರಕುವುದು ಜೀವ; ಅಧರ್ಮಾಸಕ್ತನಿಗೆ ಸಿಗುವುದು ಮರಣ.
20ವಕ್ರಹೃದಯರು ಸರ್ವೇಶ್ವರನಿಗೆ ಅಸಹ್ಯರು; ಸನ್ಮಾರ್ಗಿಗಳು ಆತನ ಕೃಪೆಗೆ ಪಾತ್ರರು.
21ದುಷ್ಟನಿಗೆ ದಂಡನೆ ಕಟ್ಟಿಟ್ಟ ಬುತ್ತಿ; ಶಿಷ್ಟ ಸಂತಾನಕ್ಕೆ ಸಿಗುವುದು ಮುಕ್ತಿ.
22ಲಜ್ಜೆಗೆಟ್ಟು ನಡೆಯುವ ಸೌಂದರ್ಯವತಿ; ಹಂದಿಯ ಮೂತಿಗೆ ಚಿನ್ನದ ಮೂಗುತಿ.
23ಸಜ್ಜನರ ಕೋರಿಕೆ ಕಲ್ಯಾಣ ಸಾಧಕ; ದುರ್ಜನರ ನಿರೀಕ್ಷೆ ಕೋಪಾಗ್ನಿ ಸಾಧಕ.
24ಅಳತೆಯಿಲ್ಲದೆ ಕೊಡುವವನು ಧನಾಢ್ಯನಾಗುವನು; ಕೊಡಬೇಕಾದುದನ್ನೂ ಬಿಗಿಹಿಡಿದವನು ಬಡವನಾಗುವನು.
25ದಾನ ಗುಣವುಳ್ಳವನು ಧನವಂತನಾಗುವನು; ನೀರು ಹಾಯಿಸುವವನಿಗೆ ನೀರು ದೊರಕುವುದು.
26ಧಾನ್ಯವನ್ನು ಕೊಡದೆ ತುಂಬಿಟ್ಟುಕೊಳ್ಳುವವನ ಮೇಲೆ ಜನರ ಶಾಪ; ಧಾನ್ಯವನ್ನು ಮಾರುವವನ ತಲೆಯ ಮೇಲೆ ಆಶೀರ್ವಾದ.
27ಒಳಿತಿಗಾಗಿ ಹಂಬಲಿಸುವವನು ಕೃಪಾರ್ಥಿ; ಕೇಡನ್ನು ಹುಡುಕುವವನಿಗೆ ಕೇಡೇ ಗತಿ.
28ದ್ರವ್ಯವನ್ನು ನಂಬಿದವನು ಉದುರಿಹೋಗುವನು; ದೈವಭಕ್ತನು ಕುಡಿಯಂತೆ ಚಿಗುರುವನು.
29ಮನೆಯವರನ್ನೆ ಬಾಧಿಸುವವನು ಗಳಿಸುವುದು ಗಾಳಿ; ಬಿದ್ದಿರುವನವನು ಜ್ಞಾನಿಗೆ ಊಳಿಗನಾಗಿ.
30ಸಜ್ಜನರು ಈವುದು ಜೀವಫಲ; ದುರ್ಜನರು ಪಡೆವುದು ಅಕಾಲಮರಣ.
31ಸಜ್ಜನರೇ ಜಗದೊಳು ತಮ್ಮ ಕರ್ಮದ ಫಲವನ್ನು ಅನುಭವಿಸುವಲ್ಲಿ; ಹೇಳಬೇಕೆ ಇನ್ನು ದುರ್ಜನರ, ಹಾಗೂ ಪಾಪಿಗಳ ಪರಿಸ್ಥಿತಿ?