ಹಳೆಯ ಒಡಂಬಡಿಕೆKNCL
1ಮಗನು ಜ್ಞಾನಿಯಾದರೆ ತಂದೆಗೆ ಸುಖ; ಅಜ್ಞಾನಿಯಾದರೆ ತಾಯಿಗೆ ದುಃಖ.
2ಅನ್ಯಾಯದ ಸಂಪತ್ತು ನಿಷ್ಪ್ರಯೋಜಕ; ಧರ್ಮವು ಮೃತ್ಯುವಿನಿಂದ ರಕ್ಷಕ.
3ಸತ್ಪುರುಷನನ್ನು ಸರ್ವೇಶ್ವರ ಹಸಿವೆಗೊಳಿಸನು; ದುಷ್ಟನ ಆಶೆಯನ್ನಾತ ಭಂಗಪಡಿಸುವನು.
4ಜೋಲುಗೈ ತರುತ್ತದೆ ದಾರಿದ್ರ್ಯ; ಚುರುಕು ಕೈ ತರುತ್ತದೆ ಐಶ್ವರ್ಯ.
5ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತ; ಕೊಯ್ಲಿನಲ್ಲಿ ತೂಕಡಿಸುವವನು ಲಜ್ಜೆಗೆಡುಕ.
6ಸಜ್ಜನರ ತಲೆಯ ಮೇಲೆ ಆಶೀರ್ವಾದ; ದುರ್ಜನರ ಬಾಯಿ ಹಿಂಸಾಚಾರದ ಮುಚ್ಚಳ.
7ಸಜ್ಜನರ ಸ್ಮರಣೆ ಮಂಗಳಕರ; ದುರ್ಜನರ ಹೆಸರು ಅಸಹ್ಯಕರ.
8ಬುದ್ಧಿಜೀವಿಗಳು ಆಜ್ಞೆಗಳನ್ನು ಅಂಗೀಕರಿಸುವರು; ಹರಟೆಕೋರ ಹುಚ್ಚರು ನೆಲ ಕಚ್ಚುವರು.
9ನಿರ್ದೋಷಿ ನಡೆಯುವನು ನಿರ್ಭಯನಾಗಿ; ವಕ್ರಮಾರ್ಗಿ ಸಿಕ್ಕಿಬಿಡುವನು ಬಟ್ಟಬಯಲಾಗಿ.
10ಕಣ್ಣು ಮಿಟುಕಿಸುವವನು ತೊಂದರೆಗೆ ಕಾರಣನು; ನೆಟ್ಟಗೆ ಗದರಿಸುವವನು ಸಮಾಧಾನಕರನು.
11ಸಜ್ಜನನ ಬಾಯಿ ಜೀವದ ಬುಗ್ಗೆ; ದುರ್ಜನನ ಬಾಯಿತುಂಬ ಚಿತ್ರಹಿಂಸೆ.
12ಜಗಳವೆಬ್ಬಿಸುತ್ತದೆ ದ್ವೇಷ; ಪಾಪಗಳ ಮರೆಸುತ್ತದೆ ಪ್ರೇಮ.
13ಬುದ್ಧಿವಂತನ ಬಾಯಿಂದ ಜ್ಞಾನ; ಬುದ್ಧಿಹೀನನ ಬೆನ್ನಿಗೆ ಬೆತ್ತ.
14ಬುದ್ಧಿವಂತರು ಜ್ಞಾನದ ಭಂಡಾರಿಗಳು; ಮೂರ್ಖನ ಮಾತುಗಳು ವಿನಾಶದ ಸೋಪಾನಗಳು.
15ಐಶ್ವರ್ಯವಂತನಿಗೆ ಐಶ್ವರ್ಯವೇ ಬಲವಾದ ಡೆಂಕಣ; ಬಡವನ ಅಳಿವಿಗೆ ಬಡತನವೇ ಕಾರಣ.
16ಸಜ್ಜನರ ದುಡಿತ ಜೀವಾಸ್ಪದ; ದುರ್ಜನರ ಆದಾಯ ಪಾಪಾಸ್ಪದ.
17ಶಿಸ್ತನ್ನು ಕೈಗೊಳ್ಳುವವನು ಜೀವಮಾರ್ಗದಲ್ಲಿರುವನು; ತಿದ್ದುಪಾಟನ್ನು ತಿರಸ್ಕರಿಸುವವನು ದಾರಿ ತಪ್ಪುವನು.
18ಹೊಟ್ಟೆಯಲ್ಲಿ ಹಗೆ ಇಟ್ಟುಕೊಳ್ಳುವವನು ಸಟೆಗಾರ; ಚಾಡಿ ಹೇಳಿ ಕೇಡುಮಾಡುವುದು ಮೂರ್ಖತನ.
19ವಾಚಾಳಿಗೆ ಪಾಪ ತಪ್ಪದು; ಮೌನಿಗೆ ಜ್ಞಾನ ಕೆಡದು.
20ಸಜ್ಜನರ ನಾಲಿಗೆ ಚೊಕ್ಕಬೆಳ್ಳಿ; ದುರ್ಜನರ ಹೃದಯ ಹುಲ್ಲುಕಡ್ಡಿ.
21ಸಜ್ಜನರ ಭಾಷಣದಿಂದ ಬಹುಜನರಿಗೆ ಪೋಷಣ; ಬುದ್ಧಿಹೀನತೆಯಿಂದ ಮೂರ್ಖರಿಗೆ ನಾಶನ.
22ಸರ್ವೇಶ್ವರನ ಆಶೀರ್ವಾದ ಭಾಗ್ಯದಾಯಕ; ಅದಕ್ಕೆ ಬಾಹಿರವಾದುದು ಕಷ್ಟದುಃಖ.
23ಮೂರ್ಖನಿಗೆ ಕೆಡುಕುಮಾಡುವ ಚಟ; ಬುದ್ಧಿವಂತನಿಗೆ ಜ್ಞಾನಗಳಿಸುವ ಹಟ.
24ದುರ್ಜನರು ಭಯಪಡುವುದೇ ಸಂಭವಿಸುವುದು; ಸಜ್ಜನರು ಇಷ್ಟಪಡುವುದೇ ಲಭಿಸುವುದು.
25ಬಿರುಗಾಳಿ ಬೀಸಿದರೆ ದುರ್ಜನರು ಇಲ್ಲವಾಗುವರು; ಸಜ್ಜನರಾದರೋ ಸದಾಕಾಲ ಸ್ಥಿರವಾಗಿ ನಿಲ್ಲುವರು.
26ಹಲ್ಲಿಗೆ ಹುಳಿ ಹೇಗೋ, ಕಣ್ಣಿಗೆ ಹೊಗೆ ಹೇಗೋ; ಯಜಮಾನನಿಗೆ ಮೈಗಳ್ಳನು ಹಾಗೆ.
27ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವರು ಬಾಳುವರು ದೀರ್ಘಕಾಲ; ದುರುಳ ಜನರ ಜೀವಮಾನವೋ ಅಲ್ಪಕಾಲ.
28ಸಜ್ಜನರ ನಂಬಿಕೆ ಆನಂದಕರ; ದುರ್ಜನರ ನಿರೀಕ್ಷೆ ವಿನಾಶಕರ.
29ಸನ್ಮಾರ್ಗಿಗೆ ಸರ್ವೇಶ್ವರನೆ ಆಶ್ರಯ; ಕೆಡುಕನಿಗೆ ಆತನೆ ಪ್ರಳಯ.
30ಸಜ್ಜನರು ಎಂದಿಗೂ ಕದಲರು; ದುರ್ಜನರು ನಾಡಿನಲ್ಲಿ ನಿಲ್ಲರು.
31ಸಜ್ಜನರ ಬಾಯಲ್ಲಿ ಜ್ಞಾನ ಮೊಳೆಯುವುದು; ನೀಚನ ನಾಲಿಗೆಯೂ ಕತ್ತರಿಸಿ ಹೋಗುವುದು.
32ಸಜ್ಜನರ ಬಾಯಲ್ಲಿ ಹಿತವಚನ; ದುರ್ಜನರ ಬಾಯಲ್ಲಿ ನೀಚವಚನ.