ಹಳೆಯ ಒಡಂಬಡಿಕೆKNCL
1ಸರ್ವೇಶ್ವರ ಸ್ವಾಮಿ ಮೋಶೆ - ಆರೋನರಿಗೆ ಕೊಟ್ಟ ಆಜ್ಞೆ ಇದು:
2ಇಸ್ರಯೇಲರೆಲ್ಲರೂ ದೇವದರ್ಶನದ ಗುಡಾರದ ಸುತ್ತಲೂ ಸ್ವಲ್ಪ ದೂರವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬನೂ ತನ್ನ ತನ್ನ ಗೋತ್ರ ಧ್ವಜದ ಹತ್ತಿರ ತನ್ನ ತನ್ನ ದಂಡಿನಲ್ಲೇ ಇಳಿದುಕೊಳ್ಳಬೇಕು.
3“ಸೂರ್ಯೋದಯವಾಗುವ ದಿಕ್ಕಿನಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆ ಕುಲದವರಿಗೆ ನಾಯಕ ಅಮ್ಮಿನಾದಾಬನ ಮಗ ನಹಶೋನ.
4ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 74,600:
5ಅವರ ಸಮೀಪದಲ್ಲೇ ಇಸ್ಸಾಕಾರ್ ಕುಲದವರೂ ಜೆಬುಲೂನ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆ ಕುಲದವರಿಗೆ ನಾಯಕ ಚೂವಾರನ ಮಗ ನೆತನೇಲ್;
6ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 54,400:
7ಜೆಬುಲೂನ್ಯರಿಗೆ ನಾಯಕ ಹೇಲೋನನ ಮಗ ಎಲೀಯಾಬ್,
8ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 57,400:
9ಹೀಗೆ ಯೆಹೂದ ಕುಲದ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - 1,86,400: ಇವರು ಮುಂಭಾಗದಲ್ಲಿ ಹೊರಡಬೇಕು.
10“ದಕ್ಷಿಣ ದಿಕ್ಕಿನಲ್ಲಿ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಈ ರೂಬೇನ್ ಕುಲದವರಿಗೆ ನಾಯಕ ಶೆದೇಯೂರನ ಮಗ ಎಲೀಚೂರ;
11ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 46,500:
12ಅವರ ಸಮೀಪದಲ್ಲೇ ಸಿಮೆಯೋನ್ ಕುಲದವರೂ ಗಾದ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಸಿಮೆಯೋನ್ ಕುಲದವರಿಗೆ ನಾಯಕ ಚೂರೀಷದ್ದೈಯನ ಮಗ ಶೆಲೂಮೀಯೇಲ;
13ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 59,300:
14ಗಾದ್ ಕುಲದವರಿಗೆ ನಾಯಕ ರೆಗೂವೇಲನ ಮಗ ಎಲ್ಯಾಸಾಫ;
15ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 45,650:
16ಹೀಗೆ ರೂಬೇನ್ ಕುಲದ ದಂಡಿಗೆ ಸೇರಿದ್ದವರೆಲ್ಲರ ಸಂಖ್ಯೆ - 1,51,450: ಇವರು ಎರಡನೆಯ ದಂಡಾಗಿ ಹೊರಡಬೇಕು.
17“ಅನಂತರ ಸೈನ್ಯಗಳ ನಟ್ಟನಡುವೆ ದೇವದರ್ಶನದ ಗುಡಾರ ಮತ್ತು ಲೇವಿಯರ ಪಾಳೆಯದವರು ಹೊರಡಬೇಕು. ಅವರು ಹೇಗೆ ಇಳಿದುಕೊಂಡಿದ್ದರೋ ಹಾಗೆಯೇ ತಮ್ಮ ತಮ್ಮ ಧ್ವಜಗಳನ್ನು ಹಿಡಿದುಕೊಂಡು ತಮ್ಮ ತಮ್ಮ ಗೊತ್ತಾದ ಸ್ಥಾನದಲ್ಲಿ ಹೊರಡಬೇಕು.
18ಪಶ್ಚಿಮ ದಿಕ್ಕಿನಲ್ಲಿ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರಿಗೆ ನಾಯಕ ಅಮ್ಮೀಹೂದನ ಮಗ ಎಲೀಷಾಮಾ;
19ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 40,500:
20ಅವರ ಸಮೀಪದಲ್ಲೇ ಮನಸ್ಸೆ ಕುಲದವರು ಬೆನ್ಯಾಮೀನ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಮನಸ್ಸೆ ಕುಲದವರಿಗೆ ನಾಯಕ ಪೆದಾಚೂರನ ಮಗ ಗಮ್ಲೀಯೆಲ್;
21ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ -32,200:
22ಬೆನ್ಯಾಮೀನ್ ಕುಲದವರಿಗೆ ನಾಯಕ ಗಿದ್ಯೋನಿಯ ಮಗ ಅಬೀದಾನ್.
23ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ -35,400:
24ಹೀಗೆ ಎಫ್ರಾಯೀಮರ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - 1,08,100: ಇವರು ಮೂರನೆಯ ದಂಡಾಗಿ ಹೊರಡಬೇಕು.
25ಉತ್ತರ ದಿಕ್ಕಿನಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರಿಗೆ ನಾಯಕ ಅಮ್ಮೀಷದ್ದೈಯನ ಮಗ ಅಹೀಗೆಜೆರ್;
26ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 62,700:
27ಅವರ ಸಮೀಪದಲ್ಲೇ ಆಶೇರ್ ಕುಲದವರು ಮತ್ತು ನಫ್ತಾಲಿ ಕುಲದವರು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆಶೇರ್ ಕುಲದವರಿಗೆ ನಾಯಕ ಒಕ್ರಾನನ ಮಗ ಪಗೀಯೇಲ್;
28ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 41,500:
29ನಫ್ತಾಲಿ ಕುಲದವರಿಗೆ ನಾಯಕ ಏನಾನನ ಮಗ ಅಹೀರ;
30ಅವರಲ್ಲಿ ಎಣಿಕೆಯಾದ ಸೈನಿಕರ ಸಂಖ್ಯೆ - 53,400:
31ಹೀಗೆ ದಾನ್ ಕುಲದ ದಂಡಿಗೆ ಸೇರಿದವರೆಲ್ಲರ ಸಂಖ್ಯೆ - 1,57,600: ಇವರು ಕಡೆಯ ದಂಡಾಗಿ ಹೊರಡಬೇಕು.
32ಇವರೇ ಇಸ್ರಯೇಲರಲ್ಲಿ ಗೋತ್ರಗೋತ್ರಗಳ ಪ್ರಕಾರ ಎಣಿಕೆಯಾದವರು. ಆ ದಂಡುಗಳಲ್ಲಿ ಸೈನಿಕರಾಗಿ ಎಣಿಕೆಯಾದ ಸೈನಿಕರ ಸಂಖ್ಯೆ - 6,03,500:
33ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಲೇವಿಯರು ಇತರ ಇಸ್ರಯೇಲರ ಸಂಗಡ ಎಣಿಕೆಯಾಗಲಿಲ್ಲ.
34ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಯೇಲರು ಮಾಡಿದರು. ಹಾಗೆಯೆ ದಂಡು ದಂಡಾಗಿ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. ಅಂತೆಯೇ ಗೋತ್ರ ಕುಟುಂಬಗಳ ಪ್ರಕಾರ ಹೊರಡುತ್ತಿದ್ದರು.