ಹಳೆಯ ಒಡಂಬಡಿಕೆKNCL
1ಹಕಲ್ಯನ ಮಗ ನೆಹೆಮೀಯನ ಮಾತುಗಳು: ಇಪ್ಪತ್ತನೆಯ ವರ್ಷದ ಮಾರ್ಗಶಿರ ಮಾಸದಲ್ಲಿ [1] ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದೆ.
2ಆಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯನು ಹಾಗೂ ಬೇರೆ ಕೆಲವು ಜನರು ಜುದೇಯದಿಂದ ನನ್ನ ಬಳಿಗೆ ಬಂದರು. ಸೆರೆಹೋದವರಿಂದ ತಪ್ಪಿಸಿಕೊಂಡ ಯೆಹೂದ್ಯರ ಮತ್ತು ಜೆರುಸಲೇಮಿನ ಸಮಾಚಾರವನ್ನು ನಾನು ಅವರಲ್ಲಿ ವಿಚಾರಿಸಿದೆ.
3ಅವರು ನನಗೆ, “ಸೆರೆಯಿಂದ ತಪ್ಪಿಸಿಕೊಂಡು ಈಗ ಆ ನಾಡಿನಲ್ಲಿ ವಾಸಿಸುತ್ತಿರುವವರು ಮಹಾಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ. ಜೆರುಸಲೇಮಿನ ಪೌಳಿಗೋಡೆಯನ್ನು ಕೆಡವಲಾಗಿದೆ. ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ,” ಎಂದು ಹೇಳಿದರು.
4ನಾನು ಈ ಸಮಾಚಾರವನ್ನು ಕೇಳಿದಾಗ ನೆಲಕಚ್ಚಿ ಕುಳಿತು ಅತ್ತೆ; ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ.
5ನನ್ನ ಪ್ರಾರ್ಥನೆಯಲ್ಲಿ, “ಹೇ ಸರ್ವೇಶ್ವರಾ, ಮಹೋನ್ನತರೂ ಭಯಭಕ್ತಿಗೆ ಪಾತ್ರರೂ ಆಗಿರುವ ಪರಲೋಕದೇವರೇ, ನಿಮ್ಮನ್ನು ಪ್ರೀತಿಸಿ, ನಿಮ್ಮ ಆಜ್ಞೆಗಳನ್ನು ಅನುಸರಿಸುವವರಿಗೆ ನೀವು ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವರೇ,
6ಕೃಪೆಮಾಡಿ ನನಗೆ ಕಿವಿಗೊಡಿ, ಕಟಾಕ್ಷಿಸಿ ನೋಡಿ; ನಿಮ್ಮ ದಾಸನ ಪ್ರಾರ್ಥನೆಯನ್ನು ಆಲಿಸಿ, ನಾನು ಈಗ ಹಗಲಿರುಳೂ ನಿಮ್ಮ ಸನ್ನಿಧಿಯಲ್ಲಿ ನಿಮ್ಮ ದಾಸರಾದ ಇಸ್ರಯೇಲರ ಪರವಾಗಿ ಪ್ರಾರ್ಥಿಸುತ್ತಾ ಇದ್ದೇನೆ; ಅವರು ನಿಮಗೆ ವಿರುದ್ಧ ಮಾಡಿದ ಪಾಪಗಳನ್ನು ಅರಿಕೆಮಡುತ್ತಾ ಇದ್ದೇನೆ; ನಾನೂ ನನ್ನ ಪೂರ್ವಜರೂ ಆ ಪಾಪಗಳಲ್ಲಿ ಪಾಲುಗಾರರು.
7ನಾವು ನಿಮಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು; ನೀವು ನಿಮ್ಮ ದಾಸ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ.
8ನೀವು ಅವನ ಮುಖಾಂತರ, ‘ನೀವು ಅವಿಧೇಯರಾದರೆ ನಿಮ್ಮನ್ನು ಜನಾಂಗಗಳೊಳಗೆ ಚದರಿಸಿಬಿಡುವೆನು;
9ನನಗೆ ಅಭಿಮುಖರಾಗಿ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆದರೆ, ನಿಮ್ಮವರು ಆಕಾಶದ ಕೊನೆಯವರೆಗೆ ಒಯ್ಯಲ್ಪಟ್ಟರೂ ನಾನು ಅವರನ್ನು ಅಲ್ಲಿಂದ ಕೂಡಿಸಿ ನನ್ನ ನಾಮಸ್ಥಾಪನೆಗಾಗಿ ಆರಿಸಿದ ಸ್ಥಳಕ್ಕೆ ಮತ್ತೆ ಬರಮಾಡುವೆನು; ಎಂದು ಹೇಳಿದಿರಲ್ಲವೆ? ಆ ಮಾತನ್ನು ನೆನಪುಮಾಡಿಕೊಳ್ಳಿ. ಸ್ವಾಮೀ,
10ಅವರು ನಿಮ್ಮ ದಾಸರು ಹಾಗೂ ನೀವು ನಿಮ್ಮ ಮಹಾಶಕ್ತಿ, ಭುಜಪರಾಕ್ರಮಗಳಿಂದ ವಿಮೋಚಿಸಿದ ನಿಮ್ಮ ಪ್ರಜೆಗಳೂ ಆಗಿರುತ್ತಾರಲ್ಲವೆ?
11ಸ್ವಾಮೀ, ಕೃಪೆಮಾಡಿ; ನಿಮ್ಮ ದಾಸನಾದ ನನ್ನ ಪ್ರಾರ್ಥನೆಗೂ ನಿಮ್ಮ ನಾಮಸ್ಮರಣೆಯಲ್ಲಿ ಆನಂದಿಸುವ ನಿಮ್ಮ ಭಕ್ತರ ಪ್ರಾರ್ಥನೆಗೂ ಕಿವಿಗೊಡಿ. ನಿಮ್ಮ ದಾಸನಾದ ನಾನು ಈ ದಿನ ಈ ಮನುಷ್ಯನ ದಯೆಗೆ ಪಾತ್ರನಾಗಿ ಕೃತಾರ್ಥನಾಗುವಂತೆ ಅನುಗ್ರಹಿಸಿ,” ಎಂದು ಬೇಡಿಕೊಂಡೆನು.