ಹೊಸ ಒಡಂಬಡಿಕೆKNCL

ಮತ್ತಾಯನು ಬರೆದ ಶುಭಸಂದೇಶ 24

1ಯೇಸುಸ್ವಾಮಿ ಮಹಾದೇವಾಲಯವನ್ನು ಬಿಟ್ಟುಹೋಗುತ್ತಿದ್ದರು. ಅದರ ಕಟ್ಟಡಗಳತ್ತ ಅವರ ಗಮನ ಸೆಳೆಯಲು ಶಿಷ್ಯರು ಅವರ ಬಳಿಗೆ ಬಂದರು.

2ಆಗ ಯೇಸು, “ಇವುಗಳನ್ನೆಲ್ಲಾ ನೀವು ನೋಡುತ್ತಾ ಇದ್ದೀರಲ್ಲವೆ? ನಾನು ನಿಮಗೆ ಹೇಳುತ್ತೇನೆ ಕೇಳಿ: ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವರು,” ಎಂದರು.

3ಬಳಿಕ ಯೇಸುಸ್ವಾಮಿ ಓಲಿವ್ ಗುಡ್ಡದ ಮೇಲೆ ಕುಳಿತರು. ಶಿಷ್ಯರು ಅವರ ಬಳಿಗೆ ಬಂದು, “ಇದೆಲ್ಲಾ ಸಂಭವಿಸುವುದು ಯಾವಾಗ? ನಿಮ್ಮ ಪುನರಾಗಮನದ ಹಾಗೂ ಕಾಲಾಂತ್ಯದ ಪೂರ್ವಸೂಚನೆ ಏನು? ನಮಗೆ ತಿಳಿಸಿ,” ಎಂದು ಪ್ರತ್ಯೇಕವಾಗಿ ಕೇಳಿಕೊಂಡರು.

4ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ.

5ಅನೇಕರು ‘ನಾನೇ ಕ್ರಿಸ್ತ, ನಾನೇ ಕ್ರಿಸ್ತ,’ ಎನ್ನುತ್ತಾ ನನ್ನ ಹೆಸರನ್ನೇ ಹೇಳಿಕೊಂಡು ಬರುವರು. ಮಾತ್ರವಲ್ಲ, ಎಷ್ಟೋ ಜನರನ್ನು ತಪ್ಪುದಾರಿಗೆಳೆಯುವರು.

6ಇದೂ ಅಲ್ಲದೆ, ನೀವು ರಣಕಹಳೆಗಳನ್ನೂ ಸಮರಗಳ ಸುದ್ದಿಯನ್ನೂ ಕೇಳುವಿರಿ. ಆಗ ಕಳವಳಪಡದಂತೆ ಎಚ್ಚರಿಕೆಯಿಂದಿರಿ. ಇವೆಲ್ಲವು ಸಂಭವಿಸಲೇಬೇಕು. ಆದರೆ ಇದಿನ್ನೂ ಕಾಲಾಂತ್ಯವಲ್ಲ.

7ಜನಾಂಗಕ್ಕೆ ವಿರುದ್ಧ ಜನಾಂಗವೂ ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರವೂ ಯುದ್ಧಕ್ಕಿಳಿಯುವುವು. ಅಲ್ಲಲ್ಲಿ ಕ್ಷಾಮಡಾಮರಗಳೂ ಭೂಕಂಪಗಳೂ ಸಂಭವಿಸುವುವು.

8ಇವೆಲ್ಲವೂ ಪ್ರಸವ ವೇದನೆಯ ಪ್ರಾರಂಭ ಮಾತ್ರ.

9“ಬಳಿಕ ಜನರು ನಿಮ್ಮನ್ನು ಕಷ್ಟಸಂಕಟಗಳಿಗೆ ಗುರಿಮಾಡಿ ಕೊಲ್ಲುವರು. ನೀವು ನನ್ನವರು, ಆದುದರಿಂದಲೇ ಜನಾಂಗಗಳೆಲ್ಲ ನಿಮ್ಮನ್ನು ದ್ವೇಷಿಸುವುವು.

10ಆ ದಿನಗಳಲ್ಲಿ ಬಹುಮಂದಿ ವಿಶ್ವಾಸಭ್ರಷ್ಟರಾಗುವರು, ಒಬ್ಬರಿಗೊಬ್ಬರು ದ್ರೋಹ ಬಗೆಯುವರು. ಒಬ್ಬರನ್ನೊಬ್ಬರು ದ್ವೇಷಿಸುವರು.

11ಅನೇಕ ಸುಳ್ಳುಪ್ರವಾದಿಗಳು ತಲೆಯೆತ್ತಿಕೊಂಡು ಎಷ್ಟೋಮಂದಿಯನ್ನು ವಂಚಿಸುವರು.

12ಭ್ರಷ್ಟಾಚಾರವು ಬೆಳೆದು ಬಹುಜನರ ಪ್ರೀತಿ ಉಡುಗಿಹೋಗುವುದು.

13ಆದರೆ ಕೊನೆಯವರೆಗೂ ಸ್ಥಿರವಾಗಿರುವವರು ಜೀವೋದ್ಧಾರವನ್ನು ಹೊಂದುವರು.

14ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು ಸರ್ವಜನಾಂಗಗಳಿಗೂ ಸಾಕ್ಷಿಯಾಗಿ ಜಗತ್ತಿನಲ್ಲೆಲ್ಲಾ ಪ್ರಬೋಧಿಸಲಾಗುವುದು. ಅಂತ್ಯವು ಬರುವುದು ಅನಂತರವೇ.

15“ಪ್ರವಾದಿ ದಾನಿಯೇಲನು ಸೂಚಿಸಿರುವ ‘ವಿನಾಶಕರ ವಿಕಟ ಮೂರ್ತಿ’ ಪವಿತ್ರಸ್ಥಾನದಲ್ಲಿ ನಿಂತಿರುವುದನ್ನು ನೀವು ಕಾಣುವಿರಿ.

16(ಇದನ್ನು ಓದುವವನು ಅರ್ಥಮಾಡಿಕೊಳ್ಳಲಿ). ಆಗ ಜುದೇಯದಲ್ಲಿರುವ ಜನರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ.

17ಮಾಳಿಗೆಯ ಮೇಲಿರುವವನು ಇಳಿದು ಮನೆಯಿಂದ ಏನನ್ನೂ ತೆಗೆದುಕೊಳ್ಳದೆ ಓಡಿಹೋಗಲಿ.

18ಹೊಲಗದ್ದೆಯಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂದಿರುಗದಿರಲಿ.

19ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಹಾಗೂ ಹಾಲೂಡಿಸುವ ತಾಯಂದಿರ ಗೋಳೇನು!

20ಈ ನಿಮ್ಮ ಪಲಾಯನ ಚಳಿಗಾಲದಲ್ಲಾಗಲಿ, ಸಬ್ಬತ್ ದಿನದಲ್ಲಾಗಲಿ ಸಂಭವಿಸದಂತೆ ಪ್ರಾರ್ಥನೆಮಾಡಿರಿ.

21ಏಕೆಂದರೆ ಆಗ ಬರಲಿರುವ ಸಂಕಷ್ಟಗಳು ಸೃಷ್ಟಿಯ ಆದಿಯಿಂದ ಇಂದಿನವರೆಗೂ ಇರಲಿಲ್ಲ; ಇನ್ನು ಮುಂದಕ್ಕೂ ಇರುವುದಿಲ್ಲ.

22ಆ ದಿನಗಳ ಅವಧಿಯನ್ನು ಕಡಿಮೆಮಾಡದೆ ಇದ್ದಲ್ಲಿ ಯಾವ ಮಾನವನೂ ಉಳಿಯುವಂತಿಲ್ಲ. ಆದರೆ ದೇವರು ಆರಿಸಿಕೊಂಡವರ ಪ್ರಯುಕ್ತ ಆ ದಿನಗಳನ್ನು ಕಡಿಮೆಮಾಡಲಾಗುವುದು.

23“ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತ ಇಲ್ಲಿದ್ದಾನೆ, ಅಗೋ, ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿ.

24ಏಕೆಂದರೆ ಕಪಟ ಉದ್ಧಾರಕರೂ ವಂಚಕ ಪ್ರವಾದಿಗಳೂ ತಲೆಯೆತ್ತಿಕೊಳ್ಳುವರು. ಸಾಧ್ಯವಾದರೆ ದೇವರು ಆರಿಸಿಕೊಂಡವರನ್ನೂ ಮೋಸಗೊಳಿಸುವಂತಹ ಮಹತ್ಕಾರ್ಯಗಳನ್ನೂ ಪವಾಡಗಳನ್ನೂ ಮಾಡಿತೋರಿಸುವರು.

25ಎಚ್ಚರಿಕೆ! ನಾನು ನಿಮಗೆ ಮುಂಚಿತವಾಗಿಯೇ ಇದನ್ನು ತಿಳಿಸುತ್ತಾ ಇದ್ದೇನೆ.

26ಆದ್ದರಿಂದ ಯಾರಾದರು, ‘ಅಗೋ ಕ್ರಿಸ್ತ ಅಡವಿಯಲ್ಲಿದ್ದಾನೆ,’ ಎಂದರೆ ಅಲ್ಲಿಗೆ ಹೋಗಬೇಡಿ. ‘ಇಗೋ, ಇಲ್ಲೇ ಒಳಗೆ ಅವಿತುಕೊಂಡಿದ್ದಾನೆ,’ ಎಂದರೂ ಅದನ್ನು ನಂಬಬೇಡಿ.

27ಏಕೆಂದರೆ ಪೂರ್ವದಿಂದ ಮಿನುಗಿ ಪಶ್ಚಿಮದವರೆಗೂ ಹೊಳೆಯುವ ಮಿಂಚಿನಂತೆ ಇರುವುದು ನರಪುತ್ರನ ಆಗಮನ.

28ಹೆಣವಿದ್ದೆಡೆ ರಣಹದ್ದುಗಳು ಬಂದು ಸೇರುತ್ತವೆ.

29“ಆ ದಿನಗಳ ಸಂಕಷ್ಟಗಳು ಮುಗಿದ ಕೂಡಲೇ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಕಳಚಿ ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು.

30ಆಗ ನರಪುತ್ರನ ಚಿಹ್ನೆ ಆಕಾಶದಲ್ಲಿ ಕಾಣಿಸಿಕೊಳ್ಳುವುದು. ಪೃಥ್ವಿಯ ಪ್ರಜೆಗಳೆಲ್ಲಾ ಅತ್ತು ಪ್ರಲಾಪಿಸುವರು. ನರಪುತ್ರನು ಶಕ್ತಿಸಾಮರ್ಥ್ಯದಿಂದಲೂ ಮಹಾಮಹಿಮೆಯಿಂದಲೂ ಮೇಘಾರೂಢನಾಗಿ ಆಗಮಿಸುವುದನ್ನು ಅವರು ಕಾಣುವರು.

31ತುತೂರಿಯ ಘೋಷಣೆಯೊಂದಿಗೆ ಆತನು ತನ್ನ ದೂತರನ್ನು ನಾಲ್ಕು ದಿಕ್ಕುಗಳಿಗೂ ಕಳುಹಿಸುವನು. ಅವರು ಹೋಗಿ ಆತನಿಂದ ಆಯ್ಕೆಯಾದ ಜನರನ್ನು ವಿಶ್ವದ ಅಷ್ಟದಿಕ್ಕುಗಳಿಂದ ಒಟ್ಟುಗೂಡಿಸುವರು.

32“ಅಂಜೂರದ ಮರದಿಂದ ಒಂದು ಪಾಠ ಕಲಿತುಕೊಳ್ಳಿ. ಅದರ ಎಳೆ ರೆಂಬೆಗಳಲ್ಲಿ ಎಲೆಗಳು ಚಿಗುರುವಾಗ ವಸಂತಕಾಲ ಸಮೀಪಿಸಿತು ಎಂದು ತಿಳಿದುಕೊಳ್ಳುತ್ತೀರಿ.

33ಅಂತೆಯೇ ಇದೆಲ್ಲವನ್ನು ನೋಡುವಾಗ ನರಪುತ್ರನು ಸಮೀಪಿಸಿಬಿಟ್ಟಿದ್ದಾನೆ, ಹೊಸ್ತಿಲಲ್ಲೇ ಇದ್ದಾನೆಂದು ತಿಳಿದುಕೊಳ್ಳಿ.

34ಇದೆಲ್ಲವೂ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿಹೋಗದೆಂದು ನಿಮಗೆ ಒತ್ತಿ ಹೇಳುತ್ತೇನೆ.

35ಭೂಮ್ಯಾಕಾಶಗಳು ಗತಿಸಿಹೋಗುವುವು; ಆದರೆ ನನ್ನ ಮಾತುಗಳು ಶಾಶ್ವತವಾಗಿ ನಿಲ್ಲುವುವು.

36“ಆ ದಿನವಾಗಲಿ, ಆ ಗಳಿಗೆಯಾಗಲಿ ಯಾವಾಗ ಬರುವುದೆಂದು ದೇವರೇ ಹೊರತು ಮತ್ತಾರೂ ಅರಿಯರು. ಸ್ವರ್ಗದ ದೂತರೇ ಆಗಲಿ, ಪುತ್ರನೇ ಆಗಲಿ ಅದನ್ನು ಅರಿಯರು.

37ನೋವನ ಕಾಲದಲ್ಲಿ ಆದಂತೆಯೇ ನರಪುತ್ರನು ಬರುವಾಗಲೂ ಆಗುವುದು.

38ಜಲಪ್ರಳಯಕ್ಕೆ ಹಿಂದಿನ ದಿನಗಳಲ್ಲಿ ನೋವನು ನಾವೆಯನ್ನು ಹತ್ತುವ ದಿನದವರೆಗೆ ಜನರು ತಿನ್ನುತ್ತಲೇ ಇದ್ದರು; ಕುಡಿಯುತ್ತಲೇ ಇದ್ದರು; ಮದುವೆ ಮಾಡಿಕೊಳ್ಳುವುದರಲ್ಲೂ ಮಾಡಿಕೊಡುವುದರಲ್ಲೂ ನಿರತರಾಗಿದ್ದರು.

39ಜಲಪ್ರಳಯ ಬಂದು ಅವರನ್ನು ಕೊಚ್ಚಿಕೊಂಡು ಹೋಗುವ ತನಕ ಅದರ ಅರಿವೇ ಅವರಿಗಿರಲಿಲ್ಲ. ನರಪುತ್ರನು ಆಗಮಿಸುವಾಗಲೂ ಹಾಗೆಯೇ ನಡೆಯುವುದು.

40ಆಗ ಹೊಲದಲ್ಲಿದ್ದ ಇಬ್ಬರಲ್ಲಿ ಒಬ್ಬನನ್ನು ತೆಗೆದುಕೊಂಡು ಹೋಗಲಾಗುವುದು. ಇನ್ನೊಬ್ಬನನ್ನು ಬಿಡಲಾಗುವುದು.

41ಒಂದೇ ಕಲ್ಲಿನಲ್ಲಿ ಬೀಸುತ್ತ ಇರುವ ಇಬ್ಬರು ಮಹಿಳೆಯರಲ್ಲಿ ಒಬ್ಬಳನ್ನು ತೆಗೆದುಕೊಂಡು ಹೋಗಲಾಗುವುದು, ಇನ್ನೊಬ್ಬಳನ್ನು ಬಿಡಲಾಗುವುದು.

42ನಿಮ್ಮ ಪ್ರಭು ಯಾವ ದಿನ ಬರುತ್ತಾನೆಂದು ನಿಮಗೆ ತಿಳಿಯದು, ಆದ್ದರಿಂದ ಎಚ್ಚರವಾಗಿರಿ.

43ಕಳ್ಳನು ಬರುವ ಗಳಿಗೆ ಮನೆಯ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಹಾಕಲು ಬಿಡನು, ಅಲ್ಲವೆ?

44ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು.

45“ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲಕಾಲಕ್ಕೆ ಸರಿಯಾಗಿ ಕೂಲಿ ಆಳುಗಳಿಗೆ ದವಸಧಾನ್ಯಗಳನ್ನು ಅಳೆದುಕೊಟ್ಟು ತನ್ನ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನಿಂದ ನೇಮಕಗೊಂಡವನು.

46ಯಜಮಾನನು ಮನೆಗೆ ಹಿಂದಿರುಗಿಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.

47ಅಂಥವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುತ್ತಾನೆಂಬುದು ನಿಶ್ಚಯ.

48ಆದರೆ ಆ ಮೇಸ್ತ್ರಿ ದುಷ್ಟನಾಗಿದ್ದು ‘ನನ್ನ ಯಜಮಾನ ತಡಮಾಡುವನು’ ಎಂದು ನೆನಸಿಕೊಂಡು,

49ತನ್ನ ಜೊತೆಯ ಸೇವಕರನ್ನು ಹೊಡೆಯತೊಡಗಿದರೆ, ಕುಡುಕರ ಸಂಗಡ ತಿಂದುಕುಡಿಯಲಾರಂಭಿಸಿದರೆ,

50ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ, ಯಜಮಾನನು ಬರುವನು.

51ಅವನನ್ನು ಚಿತ್ರಹಿಂಸೆಗೂ ಕಪಟಿಗಳ ದುರ್ಗತಿಗೂ ಗುರಿಮಾಡುವನು. ಅಲ್ಲಿರುವವರೊಡನೆ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು.