ಹಳೆಯ ಒಡಂಬಡಿಕೆKNCL
1ಸರ್ವೇಶ್ವರ ಸ್ವಾಮಿ ಮೋಶೆ ಆರೋನರಿಗೆ ಹೇಳಿದ್ದೇನೆಂದರೆ;
2ಒಬ್ಬ ವ್ಯಕ್ತಿಯ ಮೈಮೇಲೆ ಬಾವಾಗಲಿ ಗುಳ್ಳೆಯಾಗಲಿ, ಹೊಳೆಯುವ ಮಚ್ಚೆಯಾಗಲಿ ಕಾಣಿಸಿಕೊಂಡು ಅದರಲ್ಲಿ ಕುಷ್ಠರೋಗದ ಲಕ್ಷಣಗಳು ತೋರಿದರೆ ಅವನನ್ನು ಮಹಾಯಾಜಕ ಆರೋನನ ಬಳಿಗೆ, ಇಲ್ಲವೆ ಆರೋನನ ಮಕ್ಕಳಾದ ಯಾಜಕರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು.
3ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ಪರೀಕ್ಷಿಸಬೇಕು. ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಮಚ್ಚೆ ಮಿಕ್ಕ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಆ ವ್ಯಕ್ತಿಯನ್ನು ಅಶುದ್ಧನೆಂದು ನಿರ್ಣಯಿಸಬೇಕು.
4ಆ ಹೊಳೆಯುವ ಮಚ್ಚೆ ಬೆಳ್ಳಗಾಗಿದ್ದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿರದೆ ಹೋದರೆ ಮತ್ತು ಅಲ್ಲಿರುವ ರೋಮ ಬೆಳ್ಳಗಾಗಿದ್ದರೆ ಯಾಜಕನು ಆ ಮಚ್ಚೆಯಿದ್ದವನನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
5ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊದಲು ಇದ್ದಂತೆಯೇ ತೋರಿದರೆ ಯಾಜಕನು ಇನ್ನು ಏಳು ದಿನಗಳವರೆಗೂ ಅವನನ್ನು ಪ್ರತ್ಯೇಕವಾಗಿ ಇರಿಸಬೇಕು.
6ಆ ಏಳು ದಿನಗಳಾದ ಮೇಲೆ ಯಾಜಕನು ಮತ್ತೆ, ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊಬ್ಬಾಗಿದ್ದರೆ ಯಾಜಕನು ಅದು ಕೇವಲ ಗುಳ್ಳೆಯೆಂದು ತಿಳಿದು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು; ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು.
7ಆದರೆ ಅವನು ತನ್ನ ಶುದ್ಧಿಯ ವಿಷಯದಲ್ಲಿ ತನ್ನನ್ನು ಯಾಜಕನಿಗೆ ತೋರಿಸಿಕೊಂಡ ನಂತರ ಆ ಗುಳ್ಳೆ ದೇಹದ ಚರ್ಮದಲ್ಲಿ ಹರಡಿಕೊಂಡರೆ ಅವನು ಪುನಃ ಯಾಜಕನಿಗೆ ತೋರಿಸಿಕೊಳ್ಳಬೇಕು.
8ಯಾಜಕನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠವೆಂದು ತಿಳಿದು ಆ ವ್ಯಕ್ತಿಯನ್ನು ಅಶುದ್ಧನೆಂದು ನಿರ್ಣಯಿಸಬೇಕು.
9ಕುಷ್ಠರೋಗದ ಚಿಹ್ನೆಗಳು ಯಾವ ವ್ಯಕ್ತಿಯಲ್ಲಾದರೂ ಕಾಣಬಂದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
10ಯಾಜಕನು ಅವನನ್ನು ಪರೀಕ್ಷಿಸುವಾಗ ದೇಹದ ಚರ್ಮದಲ್ಲಿ ಬೆಳ್ಳಗಾದ ಬಾವು ಇದ್ದರೆ ಮತ್ತು ಬಾವಿನಲ್ಲಿ ಮಾಂಸ ಕಾಣಿಸಿದರೆ
11ಅದು ಹಳೇ ಕುಷ್ಠರೋಗದ ಗುರುತು. ಅವನು ಅಶುದ್ಧನಾದ್ದರಿಂದ ಯಾಜಕನು ಅವನನ್ನು ಪ್ರತ್ಯೇಕಿಸದೆ ಆಗಲೇ ಅಶುದ್ಧನೆಂದು ನಿರ್ಣಯಿಸಬೇಕು.
12ಆದರೆ ಒಬ್ಬ ವ್ಯಕ್ತಿಯ ಚರ್ಮದಲ್ಲಿ ತೊನ್ನು ಹತ್ತಿ ಯಾಜಕನು ನೋಡುವ ಎಲ್ಲಾ ಕಡೆಯಲ್ಲಿಯೂ ತಲೆ ಮೊದಲುಗೊಂಡು ಅಂಗಾಲಿನವರೆಗೂ ಹರಡಿಕೊಂಡಿದ್ದರೆ ಯಾಜಕನು ನೋಡುವಾಗ
13ಆ ತೊನ್ನು ದೇಹದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರೆ ಅಂಥವನನ್ನು ಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅವನ ಚರ್ಮವೆಲ್ಲಾ ಬೆಳ್ಳಗಾಗಿ ಹೋದುದರಿಂದ ಅವನು ಶುದ್ಧನು.
14ಆದರೆ ಅಂಥವನ ದೇಹದಲ್ಲಿ ಯಾವಾಗಲಾದರೂ ಮಾಂಸ ಕಾಣಬಂದರೆ ಅವನು ಅಶುದ್ಧನಾಗುವನು.
15ಯಾಜಕನು ಆ ಮಾಂಸವನ್ನು ನೋಡಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಅಂಥ ಮಾಂಸವು ಅಶುದ್ಧವೇ ಸರಿ, ಅದು ಕುಷ್ಠವು.
16ಆದರೆ ಆ ಮಾಂಸವು ಅದೇ ಪ್ರಕಾರವಾಗಿ ಇರದೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು.
17ಯಾಜಕನು ಪರೀಕ್ಷಿಸುವಾಗ ಆ ಮಚ್ಚೆ ಬೆಳ್ಳಗಾಗಿ ಹೋಗಿದ್ದರೆ ಆ ವ್ಯಕ್ತಿಯನ್ನು ಶುದ್ಧನೆಂದು ನಿರ್ಣಯಿಸಬೇಕು, ಅವನು ಶುದ್ಧನಾಗಿದ್ದಾನೆ.
18ಒಬ್ಬನ ದೇಹದ ಚರ್ಮದಲ್ಲಿ ಹುಣ್ಣು ಆಗಿದ್ದು
19ವಾಸಿಯಾದ ಮೇಲೆ ಅದು ಇದ್ದ ಸ್ಥಳದಲ್ಲಿ ಬಿಳೀ ಬಾವಾಗಲಿ ಕೆಂಪು ಬಿಳುಪು ಮಿಶ್ರವಾಗಿ ಹೊಳೆಯುವ ಕಲೆಯಾಗಲಿ ಕಂಡುಬಂದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು.
20ಯಾಜಕನು ಪರೀಕ್ಷಿಸಿ ನೋಡುವಾಗ ಆ ಕಲೆ ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಮತ್ತು ಅದರಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಆ ಹುಣ್ಣಿನಲ್ಲಿ ಕುಷ್ಠಹುಟ್ಟಿರುವುದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.
21ಆದರೆ ಯಾಜಕನು ಪರೀಕ್ಷಿಸಿ ನೋಡುವಾಗ ಅದರಲ್ಲಿ ಬಿಳೀ ರೋಮವಿಲ್ಲದೆ ಹೋದರೆ ಮತ್ತು ಆ ಕಲೆ ಮಿಕ್ಕ ಚರ್ಮಕ್ಕಿಂತ ತಗ್ಗಾಗದೆ ಮೊಬ್ಬಾಗಿದ್ದರೆ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
22ತರುವಾಯ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು; ಅದು ಕುಷ್ಠರೋಗವೇ ಸರಿ.
23ಆದರೆ ಆ ಹೊಳೆಯುವ ಕಲೆ ಹರಡಿಕೊಳ್ಳದೆ ಮೊದಲಿದ್ದಂತೆಯೇ ಇದ್ದರೆ ಅದು ಆ ಹುಣ್ಣಿನ ಕಲೆಯೆಂದು ತಿಳಿದುಕೊಂಡು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
24ಒಬ್ಬ ವ್ಯಕ್ತಿಯ ಚರ್ಮದಲ್ಲಿ ಬೆಂಕಿಯಿಂದುಂಟಾದ ಬೊಬ್ಬೆ ಇರಲಾಗಿ ಆ ಬೊಬ್ಬೆಯ ಸ್ಥಳವು ಹೊಳೆಯುವ ಕಲೆಯಾಗಿ
25ಬೆಳ್ಳಗಾಗಿಯಾಗಲಿ ಕೆಂಪು ಬಿಳುಪು ಮಿಶ್ರವಾಗಿಯಾಗಲಿ ಇದ್ದರೆ ಯಾಜಕನು ಅದನ್ನು ಪರೀಕ್ಷಿಸಿ ನೋಡಬೇಕು. ಅವನು ನೋಡುವಾಗ ಆ ಹೊಳೆಯುವ ಕಲೆಯಲ್ಲಿರುವ ರೋಮವು ಬೆಳ್ಳಗಾಗಿಹೋಗಿದ್ದರೆ ಮತ್ತು ಆ ಕಲೆಯು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಅದು ಆ ಬೊಬ್ಬೆಯಲ್ಲಿ ಹುಟ್ಟಿದ ಕುಷ್ಠವೆಂದು ತಿಳಿದು ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
26ಆದರೆ ಯಾಜಕನು ಪರೀಕ್ಷಿಸುವಾಗ ಆ ಹೊಳೆಯುವ ಕಲೆಯಲ್ಲಿ ಬಿಳೀ ರೋಮವಿಲ್ಲದೆ ಹೋದರೆ ಮತ್ತು ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಮೊಬ್ಬಾಗಿ ಹೋಗಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು.
27ಏಳನೆಯ ದಿನದಲ್ಲಿ ಯಾಜಕನು ಅವನನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠರೋಗವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
28ಆ ಹೊಳೆಯುವ ಕಲೆಯು ಚರ್ಮದಲ್ಲಿ ಹರಡಿಕೊಳ್ಳದೆ ಮೊದಲಿನಂತೆಯೇ ಇದ್ದು ಮೊಬ್ಬಾಗಿಹೋಗಿದ್ದರೆ ಅದು ಬೆಂಕಿಸುಟ್ಟ ಬೊಬ್ಬೆಯೆಂದು ತಿಳಿದು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
29ಹೆಂಗಸಿನ ತಲೆಯಲ್ಲಾಗಲಿ ಗಂಡಸಿನ ತಲೆಯಲ್ಲಿ ಅಥವಾ ಗಡ್ಡದಲ್ಲಾಗಲಿ ಕಲೆಯುಂಟಾದರೆ ಯಾಜಕನು ಅದನ್ನು ಪರೀಕ್ಷಿಸಿ ನೋಡಬೇಕು.
30ಆಗ ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರಿದರೆ ಮತ್ತು ಅದರಲ್ಲಿ ಹಳದಿಬಣ್ಣವುಳ್ಳ ಸಣ್ಣ ಕೂದಲು ಇದ್ದರೆ ಅದು ತಲೆಯಲ್ಲಾಗಲಿ ಗಡ್ಡದಲ್ಲಾಗಲಿ ಉಂಟಾದ ಕುಷ್ಠವನ್ನು ಸೂಚಿಸುವಂಥಾದ್ದು ಆಗಿರುವುದರಿಂದ ಯಾಜಕನು ಅಂಥವನನ್ನು ಅಶುದ್ಧನೆಂದು ನಿರ್ಣಯಿಸಬೇಕು..
31ಯಾಜಕನು ಆ ಇಸಬನ್ನು ನೋಡುವಾಗ ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಹೋದಾಗ್ಯೂ ಅದು ಇರುವ ಕಡೆ ಕರೇಕೂದಲು ಇಲ್ಲದಿದ್ದರೆ ಯಾಜಕರು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು.
32ಏಳನೆಯ ದಿನದಲ್ಲಿ ಯಾಜಕನು ನೋಡುವಾಗ ಆ ಇಸುಬು ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಕಡೆ ಹಳದಿಬಣ್ಣದ ಕೂದಲು ಇಲ್ಲದಿದ್ದರೆ ಮತ್ತು ಅದು ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆಹೋದರೆ
33ಅವನು ಕ್ಷೌರಮಾಡಿಸಿಕೊಳ್ಳಬೇಕು. ಆ ಇಸುಬು ಇರುವ ಭಾಗವನ್ನು ಮಾತ್ರ ಕ್ಷೌರಮಾಡಿಸಿಕೊಳ್ಳಬಾರದು. ಯಾಜಕನು ಅವನನ್ನು ಇನ್ನೂ ಏಳು ದಿನಗಳವರೆಗೂ ಪ್ರತ್ಯೇಕಿಸಬೇಕು.
34ಏಳನೆಯ ದಿನದಲ್ಲಿ ಯಾಜಕನು ಪುನಃ ಆ ಇಸುಬನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಳ್ಳದೆ ಹೋಗಿದ್ದರೆ ಮಿಕ್ಕ ಚರ್ಮಕ್ಕಿಂತ ತಗ್ಗಾಗಿ ತೋರದೆ ಹೋದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡಾಗ ಶುದ್ಧನಾಗುವನು.
35ಆದರೆ ಅವನು ಶುದ್ಧನೆಂದು ನಿರ್ಣಯಿಸಲ್ಪಟ್ಟ ಮೇಲೆ ಆ ಇಸುಬು ಚರ್ಮದಲ್ಲಿ ಹರಡಿಕೊಂಡರೆ
36ಯಾಜಕನು ಅವನನ್ನು ಪರೀಕ್ಷಿಸಬೇಕು; ಆದರೆ ಹಳದಿಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ; ಅವನು ಅಶುದ್ಧನೇ.
37ಇಸುಬು ಮೊದಲು ಇದ್ದಂತೆಯೇ ಇದ್ದಾದರಲ್ಲಿ ಕರೇ ಕೂದಲು ಹುಟ್ಟಿದರೆ ಅದು ವಾಸಿಯಾಗಿದೆ. ಅವನು ಶುದ್ಧನು; ಯಾಜಕರು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು.
38ಗಂಡಸಿಗಾಗಲಿ ಹೆಂಗಸಿಗಾಗಲಿ ಚರ್ಮದಲ್ಲಿ ಹೊಳೆಯುವ ಬಿಳುಪಾದ ಕಲೆಗಳು ಅಲ್ಲಲ್ಲಿ ಹುಟ್ಟಿದ್ದರೆ
39ಯಾಜಕನು ಅವುಗಳನ್ನು ಪರೀಕ್ಷಿಸಬೇಕು . ಆ ಹೊಳೆಯುವ ಕಲೆಗಳು ಮೊಬ್ಬಾದ ಬಿಳೀ ಬಣ್ಣವಾಗಿದ್ದರೆ ಅದು ದೇಹದ ಚರ್ಮದಲ್ಲಿ ಹುಟ್ಟಿದ ಚಿಬ್ಬು, ಅವನು ಶುದ್ಧನು.
40ಒಬ್ಬ ವ್ಯಕ್ತಿಯ ತಲೆಯ ಕೂದಲು ಉದುರಿಹೋದುದರಿಂದ ಬೋಳುತಲೆಯವನಾದರೂ ಅವನು ಶುದ್ಧನೇ.
41ಮುಂದಲೆಯ ಕೂದಲು ಉದುರಿದರೆ ಅವನು ಪಟ್ಟೆತಲೆಯವನಾದರೂ ಶುದ್ಧನೇ.
42ಆದರೆ ಬೋಳುತಲೆಯಲ್ಲಾಗಲಿ, ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪು ಮಿಶ್ರವಾದ ಮಚ್ಚೆ ಹುಟ್ಟಿದರೆ ಅದು ಕುಷ್ಠವೇ.
43ಯಾಜಕನು ಅವನನ್ನು ಪರೀಕ್ಷಿಸಬೇಕು. ಆಗ ಅದರಿಂದುಂಟಾದ ಬಾವು ಕೆಂಪು ಬಿಳುಪು ಮಿಶ್ರವಾಗಿ ಚರ್ಮದಲ್ಲಿನ ಕುಷ್ಠದಂತೆ ತೋರಿದರೆ ಅವನು ಕುಷ್ಠರೋಗಿ; ಅಶುದ್ಧನು.
44ಅವನ ತಲೆಯ ಮೇಲೆ ಕುಷ್ಠದ ಗುರುತು ಕಾಣಿಸಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು.
45ಯಾರಲ್ಲಿ ಕುಷ್ಠದ ಗುರುತು ಕಾಣಬಂತೋ ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಹರಿದುಕೊಂಡು ತಲೆಯನ್ನು ಕೆದರಿಕೊಂಡು ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು - ‘ನಾನು ಅಶುದ್ದನು, ಅಶುದ್ಧನು’ ಎಂದು ಕೂಗಿಕೊಳ್ಳಬೇಕು.
46ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದುದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸ ಪಾಳೆಯದ ಹೊರಗೆ ಇರಬೇಕು.
47ಕುಷ್ಠರೋಗದ ಗುರುತು ಬಟ್ಟೆಯಲ್ಲಿ ಕಂಡುಬಂದಾಗ ಅದು ಉಣ್ಣೆಯ ಬಟ್ಟೆಯಾಗಲಿ, ನಾರಿನ ಬಟ್ಟೆಯಾಗಲಿ,
48ನಾರಿನ ಅಥವಾ ಉಣ್ಣೆಯ ನೆಯಿಗೆಯಲ್ಲಾಗಲಿ, ಹೆಣಿಗೆಯಲ್ಲಾಗಲಿ, ಇಲ್ಲವೆ ತೊಗಲಿನಲ್ಲಾಗಲಿ, ತೊಗಲಿನಿಂದ ಮಾಡಲ್ಪಟ್ಟ ವಸ್ತುವಿನಲ್ಲಾಗಲಿ,
49ಆ ಬಟ್ಟೆ ತೊಗಲು, ಹಾಸು, ಹೊಕ್ಕು, ತೊಗಲಿನ ಸಾಮಾನುಗಳಲ್ಲಿ ಹಸುರಾಗಿ ಇಲ್ಲವೆ ಕೆಂಪಾಗಿ ಮಚ್ಚೆಕಾಣಿಸಿದರೆ ಅದು ಕುಷ್ಠದ ಗುರುತು; ಅದನ್ನು ಯಾಜಕನಿಗೆ ತೋರಿಸಬೇಕು.
50ಯಾಜಕನು ಅದನ್ನು ನೋಡಿ ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇಡಿಸಬೇಕು.
51ಏಳನೆಯ ದಿನದಲ್ಲಿ ಅವನು ಅದನ್ನು ನೋಡುವಾಗ ಆ ಬಟ್ಟೆಯ ನೆಯಿಗೆಯಲ್ಲಾಗಲಿ ಹೆಣಿಗೆಯಲ್ಲಾಗಲಿ ಇಲ್ಲವೇ ಯಾವುದಾದರೂ ಒಂದು ಕೆಲಸಕ್ಕೆ ಉಪಯೋಗವಾಗಿರುವ ಆ ತೊಗಲಿನಲ್ಲಿ ಆ ಮಚ್ಚೆ ಹರಡಿಕೊಂಡಿದ್ದರೆ ಅದು ಪ್ರಾಣಕ್ಕೆ ಅಪಾಯಕರವಾದ ಕುಷ್ಠವೇ; ಆ ವಸ್ತು ಅಶುದ್ಧ.
52ಆ ವಸ್ತುವು ಬಟ್ಟೆಯಾದರೂ ನೆಯಿಗೆಯಾದರೂ ಹೆಣಿಗೆಯಾದರೂ ಉಣ್ಣೆಯದಾದರೂ ನಾರಿನದಾದರೂ ತೊಗಲಿನದಾದರೂ ಅದರಲ್ಲಿ ಪ್ರಾಣಕ್ಕೆ ಅಪಾಯಕರವಾದ ಕುಷ್ಠವಿರುವುದರಿಂದ ಅದನ್ನು ಬೆಂಕಿಯಿಂದ ಸುಡಿಸಿಬಿಡಬೇಕು.
53ಆದರೆ ಯಾಜಕನು ಪರೀಕ್ಷಿಸುವಾಗ ಆ ವಸ್ತುವಿನಲ್ಲಿ ಅಂದರೆ ಆ ಬಟ್ಟೆ, ನೆಯಿಗೆ, ಹೆಣಿಗೆ, ತೊಗಲಿನ ಸಾಮಾನು ಇವುಗಳಲ್ಲಿ ಆ ಮಚ್ಚೆ ಹರಡಿಕೊಳ್ಳದಿದ್ದರೆ
54ಅದನ್ನು ನೀರಿನಿಂದ ತೊಳೆಯಬೇಕೆಂದು ಯಾಜಕನು ಅಪ್ಪಣೆಕೊಟ್ಟು ಇನ್ನೂ ಏಳುದಿನಗಳ ತನಕ ಅದನ್ನು ಪ್ರತ್ಯೇಕವಾಗಿ ಇಡಿಸಬೇಕು.
55ಆ ಮಚ್ಚೆ ಇದ್ದ ವಸ್ತುವನ್ನು ತೊಳೆಸಿದ ಮೇಲೆ ಯಾಜಕನು ನೋಡುವಾಗ ಆ ಮಚ್ಚೆಯು ಹರಡಿಕೊಳ್ಳದೆ ಇದ್ದಾಗ್ಯೂ ಅದರ ಬಣ್ಣ ಮೊದಲಿದ್ದಂತೆಯೇ ಇದ್ದರೆ ಆ ವಸ್ತು ಅಶುದ್ಧ. ಕುಷ್ಠರೋಗದ ಗುರುತು ಅದರ ಮೇಲಿನ ಕಡೆಯಿಂದಾಗಲಿ ಕೆಳಗಿನ ಕಡೆಯಿಂದಾಗಲಿ ಆ ವಸ್ತುವಿನೊಳಗೆ ವ್ಯಾಪಿಸಿದ್ದರಿಂದ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.
56ಆದರೆ ತೊಳೆದ ಬಟ್ಟೆಯನ್ನು ಯಾಜಕನು ನೋಡುವಾಗ ಅದರಲ್ಲಿದ್ದ ಮಚ್ಚೆ ಮೊಬ್ಬಾಗಿ ಹೋಗಿದ್ದರೆ ಅವನು ಆ ಮಚ್ಚೆ ಇರುವ ಭಾಗವನ್ನು ಬಟ್ಟೆಯಿಂದಾಗಲಿ ತೊಗಲಿನಿಂದಾಗಲಿ ನೆಯಿಗೆಯಿಂದಾಗಲಿ ಹೆಣಿಗೆಯಿಂದಾಗಲಿ ಕತ್ತರಿಸಿಬಿಡಬೇಕು.
57ಆಮೇಲೆಯೂ ಕುಷ್ಠದ ಮಚ್ಚೆ ಆ ಬಟ್ಟೆಯಲ್ಲಾಗಲಿ ನೆಯಿಗೆಯಲ್ಲಾಗಲಿ ಹೆಣಿಗೆಯಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ಕಂಡು ಬಂದರೆ ಕುಷ್ಠರೋಗವು ಇನ್ನೂ ಅದರಲ್ಲಿ ಉಂಟೆಂದು ತಿಳಿದುಕೊಳ್ಳಬೇಕು. ಆ ಮಚ್ಚೆ ಇರುವ ವಸ್ತುವನ್ನೇ ಬೆಂಕಿಯಿಂದ ಸುಟ್ಟುಬಿಡಬೇಕು.
58ಆ ಬಟ್ಟೆಯಲ್ಲಾಗಲಿ ನೆಯಿಗೆಯಲ್ಲಾಗಲಿ ಹೆಣಿಗೆಯಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ತೊಳೆದ ನಂತರ ಆ ಮಚ್ಚೆ ಕಾಣದೆ ಹೋದರೆ ಅದನ್ನು ಎರಡನೆಯ ಸಾರಿ ತೊಳೆಯಬೇಕು; ಆಗ ಅದು ಶುದ್ಧವಾಗುವುದು.
59ಉಣ್ಣೇ ಬಟ್ಟೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ ನೆಯಿಗೆಯಲ್ಲಾಗಲಿ ಹೆಣಿಗೆಯಲ್ಲಾಗಲಿ ತೊಗಲಿನ ಸಾಮಾನಿನಲ್ಲಾಗಲಿ ಕಾಣಬಂದ ಕುಷ್ಠರೋಗದ ಗುರುತಿನ ವಿಷಯವಾದ ವಿಧಿ ಇದೇ. ಅದು ಶುದ್ಧವೆಂದು ನಿರ್ಣಯಿಸಬೇಕೋ ಅಶುದ್ಧವೆಂದು ನಿರ್ಣಯಿಸಬೇಕೋ ಎಂಬುದು ಇದರಿಂದ ತಿಳಿಯುವುದು.