ಹಳೆಯ ಒಡಂಬಡಿಕೆKNCL
1ಸಂಸೋನನು ತಿಮ್ನಾ ಊರಿಗೆ ಇಳಿದುಹೋಗಿ ಅಲ್ಲಿನ ಫಿಲಿಷ್ಟಿಯರ ಹೆಣ್ಣುಗಳಲ್ಲಿ ಒಬ್ಬಳನ್ನು ನೋಡಿದನು.
2ತಂದೆ ತಾಯಿಗಳ ಬಳಿಗೆ ಬಂದು ಅವರಿಗೆ, “ನಾನು ತಿಮ್ನಾ ಊರಲ್ಲಿ ಒಬ್ಬ ಫಿಲಿಷ್ಟಿಯ ಹೆಣ್ಣನ್ನು ನೋಡಿ ಇದ್ದೇನೆ; ಆಕೆಯನ್ನು ನನಗೆ ಮದುವೆ ಮಾಡಿಕೊಡಿ,” ಎಂದು ಹೇಳಿದನು.
3ಆಗ ಅವರು ಅವನಿಗೆ, “ಸುನ್ನತಿಯಿಲ್ಲದ ಫಿಲಿಷ್ಟಿಯರ ಹೆಣ್ಣನ್ನು ವರಿಸಬೇಕೆಂದಿರುವೆಯಾ? ನಿನ್ನ ಬಂಧುಗಳಲ್ಲಿ ಅದೂ ನಮ್ಮ ಎಲ್ಲಾ ಜನರಲ್ಲಿ ನಿನಗೆ ಹೆಣ್ಣು ಸಿಕ್ಕುವುದಿಲ್ಲವೇ?” ಎಂದು ಪ್ರತಿಭಟಿಸಿದರು. ಅವನು, “ನನಗಾಗಿ ಆಕೆಯನ್ನೇ ತನ್ನಿ. ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ,” ಎಂದನು.
4ಫಿಲಿಷ್ಟಿಯರ ದಂಡನೆಗೆ ಕಾರಣವನ್ನು ಹುಡುಕುತ್ತಿದ್ದ ಸರ್ವೇಶ್ವರನ ಪ್ರೇರಣೆಯಿಂದಲೇ ಇದೆಲ್ಲ ಸಂಭವಿಸಿತೆಂದು ಅವನ ತಂದೆತಾಯಿಗಳಿಗೆ ಗೊತ್ತಾಗಲಿಲ್ಲ. ಆ ಕಾಲದಲ್ಲಿ ಫಿಲಿಷ್ಟಿಯರು ಇಸ್ರಯೇಲರ ಮೇಲೆ ದೊರೆತನ ನಡೆಸುತ್ತಿದ್ದರು.
5ಸಂಸೋನನು ತನ್ನ ತಂದೆತಾಯಿಗಳ ಸಮೇತ ತಿಮ್ನಾ ಊರಿಗೆ ಹೊರಟು ಅಲ್ಲಿನ ದ್ರಾಕ್ಷಿತೋಟಗಳ ಬಳಿಗೆ ಬಂದನು. ಅಲ್ಲಿ ಒಂದು ಪ್ರಾಯದ ಸಿಂಹ ಗರ್ಜಿಸುತ್ತಾ ಅವನೆದುರಿಗೆ ಬಂದಿತು.
6ಸರ್ವೇಶ್ವರನ ಆತ್ಮ ಅವನ ಮೇಲೆ ಫಕ್ಕನೆ ಇಳಿದು ಬಂದಿತು. ಆಗ ಅವನು ಕೈಯಲ್ಲಿ ಏನೂ ಇಲ್ಲದಿದ್ದರೂ ಆ ಸಿಂಹವನ್ನು ಹೋತಮರಿಯನ್ನೋ ಎಂಬಂತೆ ಸೀಳಿಬಿಟ್ಟನು. ಈ ಸಂಗತಿಯನ್ನು ತಂದೆತಾಯಿಗಳಿಗೆ ತಿಳಿಸಲಿಲ್ಲ.
7ಅನಂತರ ಅವನು ಊರೊಳಗೆ ಹೋಗಿ ಆ ಮಹಿಳೆಯನ್ನು ಮಾತಾಡಿಸಿ ಆಕೆಯನ್ನು ಮೆಚ್ಚಿಕೊಂಡನು.
8ಕೆಲವು ದಿವಸಗಳಾದ ಮೇಲೆ ಅವನು ಆಕೆಯನ್ನು ವರಿಸುವುದಕ್ಕಾಗಿ ಮತ್ತೆ ಆ ಊರಿಗೆ ಹೋಗುತ್ತಿದ್ದಾಗ, ದಾರಿ ಬಿಟ್ಟು, ಸಿಂಹದ ಹೆಣವನ್ನು ನೋಡುವುದಕ್ಕೆ ಹೋದನು. ಅದರ ಒಡಲಲ್ಲಿ ಜೇನುಹುಳುಗಳನ್ನೂ ಜೇನನ್ನೂ ಕಂಡು
9ಆ ಜೇನನ್ನು ಕೈಯಲ್ಲಿ ತೆಗೆದುಕೊಂಡು ತಿನ್ನುತ್ತಾ ಹೋದನು; ತನ್ನ ತಂದೆತಾಯಿಗಳಿಗೂ ಕೊಟ್ಟನು; ಅವರೂ ತಿಂದರು. ಆದರೆ ಅದು ತನಗೆ ಸಿಂಹದ ಒಡಲಲ್ಲಿ ಸಿಕ್ಕಿತೆಂಬುದನ್ನು ಅವರಿಗೆ ತಿಳಿಸಲಿಲ್ಲ.
10ಸಂಸೋನನ ತಂದೆ ಹೆಣ್ಣಿನ ಮನೆಗೆ ಬಂದ ಮೇಲೆ ಸಂಸೋನನು ಯೌವನಸ್ಥರ ಪದ್ಧತಿಯ ಪ್ರಕಾರ ಅಲ್ಲಿ ಔತಣವನ್ನು ಸಿದ್ಧಮಾಡಿಸಿದನು.
11ಫಿಲಿಷ್ಟಿಯನು ಅವನನ್ನು ನೋಡಿದಾಗ ತಮ್ಮ ಮಧ್ಯದಿಂದ ಮೂವತ್ತು ಮಂದಿ ‘ಆಪ್ತರನ್ನು’ ಆರಿಸಿ ಅವನ ಜೊತೆಯಲ್ಲಿ ಇರಿಸಿದರು.
12ಸಂಸೋನನು ಇವರಿಗೆ, “ನಾನು ನಿಮಗೆ ಒಂದು ಒಗಟನ್ನು ಹೇಳುತ್ತೇನೆ; ನೀವು ಔತಣದ ಏಳು ದಿನಗಳಲ್ಲಿಯೇ ಅದನ್ನು ಬಿಡಿಸಿ ಅದರ ಅರ್ಥವನ್ನು ಹೇಳಿದರೆ ನಿಮಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷ ವಸ್ತ್ರಗಳನ್ನೂ ಕೊಡುತ್ತೇನೆ.
13ನಿಮ್ಮಿಂದ ಆಗದೆಹೋದರೆ ನೀವು ನನಗೆ ಮೂವತ್ತು ದುಪ್ಪಟಿಗಳನ್ನೂ ಮೂವತ್ತು ವಿಶೇಷವಸ್ತ್ರಗಳನ್ನೂ ಕೊಡಬೇಕು” ಎನ್ನಲು ಅವರು ಅವನಿಗೆ, “ನಿನ್ನ ಒಗಟನ್ನು ಹೇಳು, ಕೇಳೋಣ,” ಎಂದು ಹೇಳಿದರು.
14ಆಗ ಅವನು, “ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು ಕ್ರೂರವಾದದ್ದರಿಂದ ಮಧುರವಾದದ್ದು ಸಿಕ್ಕಿತು” ಎಂದು ಹೇಳಿದನು. ಮೂರು ದಿನಗಳಾದರೂ ಅವರು ಅದನ್ನು ಬಿಡಿಸಲಾರದೆ ಹೋದರು.
15ಅವರು ಏಳನೆಯ ದಿನದಲ್ಲಿ ಸಂಸೋನನ ಹೆಂಡತಿಗೆ, “ನಿನ್ನ ಗಂಡನನ್ನು ಮರುಳುಗೊಳಿಸಿ ಅವನಿಂದ ಒಗಟಿನ ಅರ್ಥವನ್ನು ತಿಳಿದುಕೋ; ಇಲ್ಲವಾದರೆ ನಾವು ನಿನ್ನನ್ನೂ ನಿನ್ನ ತಂದೆಯ ಮನೆಯವರನ್ನೂ ಬೆಂಕಿಯಿಂದ ಸುಟ್ಟುಬಿಡುತ್ತೇವೆ; ನಮಗಿರುವುದೆಲ್ಲವನ್ನೂ ಕಸಿದುಕೊಳ್ಳುವುದಕ್ಕೆ ನಮ್ಮನ್ನು ಇಲ್ಲಿಗೆ ಕರಿಸಿದಿರೋ?” ಎಂದರು.
16ಆಕೆ ಸಂಸೋನನ ಮುಂದೆ ಅಳುತ್ತಾ, “ನೀವು ನನ್ನನ್ನು ಪ್ರೀತಿಸುವುದಿಲ್ಲ, ದ್ವೇಷಿಸುತ್ತೀರಷ್ಟೇ; ನನ್ನ ಜನರಿಗೆ ಒಗಟನ್ನು ಹೇಳಿದ್ದೀರಿ, ಅದರ ಅರ್ಥವನ್ನು ನನಗೆ ತಿಳಿಸಲಿಲ್ಲವಲ್ಲಾ” ಎಂದು ಪೀಡಿಸಿದಳು. ಅವನು ಆಕೆಗೆ, “ಇದನ್ನು ನನ್ನ ತಂದೆತಾಯಿಗಳಿಗೂ ಹೇಳಲಿಲ್ಲ; ನಿನಗೆ ಹೇಳುವೆನೋ?” ಎಂದು ಉತ್ತರಕೊಟ್ಟನು.
17ಆಕೆ ಔತಣದ ಏಳು ದಿನಗಳಲ್ಲೂ ಅವನ ಮುಂದೆ ಅಳುತ್ತಿದ್ದಳು. ಏಳನೆಯ ದಿನ ಆಕೆ ಬಹಳವಾಗಿ ಪೀಡಿಸಿದ್ದರಿಂದ ಅವನು ಹೇಳೇಬಿಟ್ಟನು. ಆಕೆ ಒಗಟಿನ ಅರ್ಥವನ್ನು ತನ್ನ ಜನರಿಗೆ ತಿಳಿಸಿದಳು.
18ಅವರು ಏಳನೆಯ ದಿನ ಸೂರ್ಯಾಸ್ತಮಾನಕ್ಕೆ ಮೊದಲೇ ಅವನಿಗೆ, “ಜೇನಿಗಿಂತ ಸಿಹಿಯಾದದ್ದು ಯಾವುದು” ಸಿಂಹಕ್ಕಿಂತ ಕ್ರೂರವಾದದ್ದು ಯಾವುದು?” ಎಂದು ಹೇಳಿದರು. ಅವನು, “ನೀವು ನನ್ನ ಕಡಸಿನಿಂದ ಉಳದಿದ್ದರೆ ಒಗಟನ್ನು ಬಿಡಿಸಲು ನಿಮ್ಮಿಂದಾಗುತ್ತಿರಲಿಲ್ಲ,” ಎಂದನು.
19ಸರ್ವೇಶ್ವರನ ಆತ್ಮ ಫಕ್ಕನೆ ಅವನ ಮೇಲೆ ಬಂದಿತು. [1] ಅವನು ಅಷ್ಕೆಲೋನಿಗೆ ಹೋಗಿ ಅಲ್ಲಿನ ಮೂವತ್ತು ಮಂದಿಯನ್ನು ಹೊಡೆದು ಅವರ ವಸ್ತ್ರಗಳನ್ನು ಸುಲಿದುಕೊಂಡು ಒಗಟನ್ನು ಬಿಡಿಸಿದವರಿಗೆ ತಂದುಕೊಟ್ಟನು. ಬಳಿಕ ಕೋಪಗೊಂಡು ತನ್ನ ತಂದೆಯ ಮನೆಗೆ ಹೋದನು.
20ಇತ್ತ ಸಂಸೋನನ ಹೆಂಡತಿಯನ್ನು ಅವನ ಆಪ್ತರೊಬ್ಬನಿಗೆ ಮದುವೆ ಮಾಡಿಕೊಟ್ಟರು.