ಹಳೆಯ ಒಡಂಬಡಿಕೆKNCL
1ಆ ಮೀನಿನ ಹೊಟ್ಟೆಯೊಳಗಿಂದಲೇ ಯೋನನು ಸರ್ವೇಶ್ವರಸ್ವಾಮಿ ದೇವರಿಗೆ ಈ ರೀತಿ ಪ್ರಾರ್ಥನೆ ಮಾಡಿದನು:
2“ಸಂಕಟದಲಿ, ಸರ್ವೇಶ್ವರಾ, ನಾ ನಿನಗೆ ಮೊರೆಯಿಟ್ಟೆ ನೀನೆನ್ನ ಮೊರೆಗೆ ಕಿವಿಗೊಟ್ಟೆ. ಪಾತಾಳದಂತರಾಳದಿಂದ ನಿನ್ನ ನೆರವನ್ನು ಬೇಡಿದೆ ನೀನೆನ್ನ ಪ್ರಾರ್ಥನೆಯನ್ನಾಲಿಸಿದೆ.
3ಸಾಗರದ ಉದರಕೆ ನೀನೆನ್ನ ತಳ್ಳಿರುವೆ ಅಗಾಧ ಜಲದೊಳಗೆ ದೂಡಿರುವೆ. ಸುತ್ತಮುತ್ತಲಿದೆ ಪ್ರವಾಹದ ಹೊಡೆತ ಮೇಲ್ಗಡೆ ಅಬ್ಬರಿಪ ಅಲೆಗಳ ಭೋರ್ಗರೆತ!
4ನಿನ್ನ ಸನ್ನಿಧಿಯಿಂದ ನಾನಿನ್ನು ಬಹಿಷ್ಕೃತ ಕಾಣೆನೆಂದೂ ನಿನ್ನ ಪವಿತ್ರಾಲಯ ನಿರುತ. ಈ ಭಾಗ್ಯಗಳೆಲ್ಲ ಎನಗಿಲ್ಲವೆಂದು ಪರಿಪರಿಯಾಗಿ ಮರುಗುತಿರುವೆನಿಂದು.
5ಸುತ್ತುವರಿಯೆ ಜಲರಾಶಿ, ಉಸಿರು ಕಟ್ಟಿದಂತಾಯ್ತು ಸಾಗರವು ಸಂಪೂರ್ಣವಾಗೆನ್ನ ಆವರಿಸಿತು; ಎನ್ನ ಶಿರವನು ಜೊಂಡು ಸುತ್ತುಗಟ್ಟಿತು.
6ಪರ್ವತಗಳ ತಳಹದಿಗೆ ದೇವಾ, ನಾನಿಳಿದೆ ಮುಚ್ಚಿಕೊಂಡವು ಜಗದ ದ್ವಾರಗಳು ನನ್ನ ಹಿಂದೆ. ಎನ್ನ ಕಾಪಾಡಿದೆ ಅಂಥ ಕೋಪದಿಂದ ಸರ್ವೇಶ್ವರಾ, ಮೇಲಕ್ಕೆತ್ತಿದೆಯೆನ್ನ ಜೀವಸಹಿತ.
7ನಂದಿದಂತಾಗಲು ಎನ್ನ ಪ್ರಾಣ ದೀವಿಗೆ ಮೊರೆಯಿಟ್ಟೆ, ಸರ್ವೇಶ್ವರಾ, ನಾ ನಿನಗೆ ನಿನ್ನ ಪರಿಶುದ್ಧ ಆಲಯದಲಿ ನೀನಾಸೀನನಿದ್ದೆ ಎನ್ನ ಪ್ರಾರ್ಥನೆಯನು ನೀನಾಲಿಸಿದೆ.
8ನಿರರ್ಥಕ ವಿಗ್ರಹಗಳನಾರಾಧಿಪ ಜನರು ತೊರೆದಿಹರು ಹಾರ್ದಿಕ ಭಕ್ತಿಯನು
9ನಾನಾದರೋ ಹಾಡಿ ಹೊಗಳುವೆ ನಿನ್ನನು ನಿನಗರ್ಪಿಸುವೆ ಸಮರ್ಪಕ ಬಲಿಯನು ಬಿಡದೆ ಸಲ್ಲಿಸುವೆ ಹೊತ್ತ ಹರಕೆಯನು ಹೊಂದುವೆ ಸ್ವಾಮಿಯಿಂದಲೆ ರಕ್ಷಣೆಯನು.”
10ಸರ್ವೇಶ್ವರಸ್ವಾಮಿಯ ಆಜ್ಞೆಯ ಪ್ರಕಾರ ಆ ಮೀನು ಯೋನನನ್ನು ದಡದ ಮೇಲೆ ಕಕ್ಕಿತು.