ಹಳೆಯ ಒಡಂಬಡಿಕೆKNCL

ಯೋಬನು ಗ್ರಂಥ 40

1ಯೋಬನಿಗೆ ಸರ್ವೇಶ್ವರ ಮತ್ತೆ ಇಂತೆಂದನು:

2“ಸರ್ವಶಕ್ತನೊಡನೆ ವ್ಯಾಜ್ಯವಾಡುವುದನು ಈಗಲಾದರು ನಿಲ್ಲಿಸುವೆಯಾ? ದೇವರೊಡನೆ ತರ್ಕಮಾಡುವಂಥ ನೀನು ಉತ್ತರಕೊಡುವೆಯಾ?”

3ಆಗ ಯೋಬನು ಸರ್ವೇಶ್ವರಸ್ವಾಮಿಗೆ ಇಂತೆಂದನು:

4“ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯ ಮೇಲೆ ಕೈಯಿಡುವೆ ಮೌನತಾಳಿ.

5ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.”

6ಸರ್ವೇಶ್ವರ ಬಿರುಗಾಳಿಯೊಳಗಿಂದ ಯೋಬನಿಗೆ ಕೊಟ್ಟ ಪ್ರತ್ಯುತ್ತರವಿದು:

7“ಶೂರನಂತೆ ನಡುಕಟ್ಟಿಕೊಂಡು ನನ್ನ ಪ್ರಶ್ನೆಗೆ ಉತ್ತರಕೊಡು:

8ಏನು, ನನ್ನ ನಿರ್ಣಯವನ್ನು ನೀನು ಖಂಡಿಸುತ್ತೀಯೋ? ನೀನು ನಿರ್ದೋಷಿಯೆನಿಸಿಕೊಳ್ಳಲು ನನ್ನನ್ನು ದೋಷಿಯನ್ನಾಗಿಸುತ್ತೀಯೋ?

9ದೇವರಾದ ನನಗಿರುವಂಥ ಭುಜಬಲ ನಿನಗಿದೆಯೋ? ನನ್ನ ಧ್ವನಿಗೆ ಸಮನಾಗಿ ನೀನು ಗುಡುಗಬಲ್ಲೆಯೋ?

10ಮಹಿಮೆ ಘನತೆಗಳಿಂದ ಅಲಂಕರಿಸಿಕೊ! ಗೌರವ ಪ್ರಭಾವಗಳನು ಧರಿಸಿಕೊ!

11ನಿನ್ನ ಕಡುಕೋಪವನು ಎಲ್ಲೆಡೆಯೂ ಹರಡಿಸು ಕಣ್ಣಿಟ್ಟು ಗರ್ವಿಷ್ಠರೆಲ್ಲರನು ತಗ್ಗಿಸು.

12ಹೌದು, ಕಣ್ಣಿಟ್ಟು ಗರ್ವಿಷ್ಠರೆಲ್ಲರನು ತಗ್ಗಿಸು ದುಷ್ಟರನು ನಿಂತಲ್ಲೇ ತುಳಿದುಬಿಡು.

13ಅವರೆಲ್ಲರನು ಧೂಳಿನಲ್ಲಿ ಒಟ್ಟಿಗೆ ಅಡಗಿಸಿಬಿಡು ಅವರ ಮುಖಕ್ಕೆ ಅಧೋಲೋಕದಲಿ ಮುಸುಕುಹಾಕು.

14ಆಗ ನಿನ್ನ ಬಲ ನಿನ್ನನು ರಕ್ಷಿಸಬಲ್ಲದೆಂದು ನಾನೇ ಒಪ್ಪಿಕೊಳ್ಳುವೆನು.

15ಸೃಷ್ಟಿಮಾಡಿದೆನು ನೀರಾನೆಯನು ನಿನ್ನ ಹಾಗೆ ಅದು ಹುಲ್ಲನು ಮೇಯುತ್ತದೆ ಎತ್ತಿನ ಹಾಗೆ.

16ಅದರ ಬಲ ಇರುವುದು ಸೊಂಟದಲಿ ಅದರ ತ್ರಾಣ ಹೊಟ್ಟೆಯ ನರಗಳಲಿ.

17ಬಾಲವನ್ನು ಬಾಗಿಸುತ್ತದೆ ದೇವದಾರು ಮರದಂತೆ ಅದರ ನರಗಳೋ ಹೆಣೆದುಕೊಂಡಿವೆ.

18ಅದರ ಮೂಳೆಗಳಿವೆ ಕಂಚಿನ ನಳಿಕೆಗಳಂತೆ ಅದರ ಎಲುಬುಗಳಿವೆ ಕಬ್ಬಿಣದ ಹಾರೆಗಳಂತೆ.

19ದೈವಸೃಷ್ಟಿಗಳಲ್ಲಿ ಅದು ಮುಖ್ಯವಾದುದು ಸೃಷ್ಟಿಕರ್ತನು ಅದಕ್ಕೆ ಕೊಟ್ಟಿರುವನು ಕೋರೆಹಲ್ಲಿನ ಖಡ್ಗವನ್ನು.

20ಅದಕ್ಕೆ ಮೇವು ಕೊಡುತ್ತವೆ ಬೆಟ್ಟಗುಡ್ಡಗಳು ಅಲ್ಲಿ ಅಲೆದಾಡುತ್ತಿರುತ್ತವೆ ಕಾಡು ಮೃಗಗಳು.

21ಅದು ಮಲಗುತ್ತದೆ ತಾವರೆ ಗಿಡಗಳಡಿಯಲಿ ವಿಶ್ರಮಿಸುತ್ತದೆ ಆಪಿನ ಮರೆಯಲಿ, ಕೆಸರು ಭೂಮಿಯಲಿ.

22ಅದಕ್ಕೆ ನೆರಳನ್ನೀಯುತ್ತವೆ ತಾವರೆ ಎಲೆಗಳು ಅದರ ಸುತ್ತಲಿರುತ್ತವೆ ನದಿಯ ನೀರವಂಜಿಗಳು.

23ಹೊಳೆ ಉಕ್ಕಿಬಂದರೂ ಅದು ಹೆದರುವುದಿಲ್ಲ ನೋಡು ಜೋರ್ಡನ್ ನದಿ ಅದರ ಬಾಯೊಳಗೆ ನುಗ್ಗಿದರೂ ಧೈರ್ಯದಿಂದಿರುವುದು!

24ಅದು ನೋಡುವಾಗ ಯಾವನಾದರು ಅದನು ಹಿಡಿಯಬಲ್ಲನೆ? ಗಾಳದಿಂದ ಯಾವನಾದರು ಅದರ ಮೂಗನು ಚುಚ್ಚಬಲ್ಲನೆ?”