ಹಳೆಯ ಒಡಂಬಡಿಕೆKNCL
1ಯೋಬನು ಮತ್ತೆ ಪ್ರಸ್ತಾಪವೆತ್ತಿ ಹೀಗೆಂದನು:
2“ನನಗೆ ನ್ಯಾಯ ದೊರಕಿಸದ ಜೀವಂತ ದೇವರಾಣೆ, ನನ್ನ ಮನಸ್ಸನು ಕಹಿಯಾಗಿಸಿದ ಸರ್ವಶಕ್ತನಾಣೆ.
3ನನ್ನಲ್ಲಿ ಜೀವ ಉಸಿರಾಡುತ್ತಿರುವವರೆಗೆ, ನನ್ನ ಮೂಗಲ್ಲಿ ದೇವರು ಊದಿದ ಶ್ವಾಸವಿರುವವರೆಗೆ,
4ನನ್ನ ತುಟಿ ಅನ್ಯಾಯವನು ನುಡಿಯದು ನನ್ನ ನಾಲಿಗೆ ಎಷ್ಟುಮಾತ್ರಕ್ಕೂ ಮೋಸದ ಮಾತನಾಡದು.
5ನೀವು ನ್ಯಾಯವಂತರೆಂದು ನಾನು ಒಪ್ಪಿದರೆ ನನಗಿರಲಿ ಧಿಕ್ಕಾರ! ನಾನು ಸತ್ಯತೆಯನ್ನು ಕಳೆದುಕೊಳ್ಳಲಾರೆ ಸಾಯುವ ತನಕ.
6ನ್ಯಾಯನೀತಿಯನ್ನು ಬಿಡದೆ ಹಿಡಿವೆನು ಭದ್ರವಾಗಿ ನನ್ನ ಬಾಳಿನ ಯಾವ ದಿನದಂದೂ ನಿಂದಿಸಿದ್ದಿಲ್ಲ ನನ್ನ ಮನಸ್ಸಾಕ್ಷಿ.
7ನನ್ನ ಹಗೆಗೆ ದುಷ್ಟತನ ಗತಿಯಾಗಲಿ ಅನೀತಿವಂತನ ಪಾಡು ನನ್ನ ವಿರೋಧಿಗೆ ಒದಗಲಿ.
8ದೇವರೇ ದುಷ್ಟನ ಪ್ರಾಣ ತೆಗೆವ ಕಾಲಕ್ಕೆ ಅವನಿಗೆಲ್ಲಿಂದ ಬಂದೀತು ಭರವಸೆ!
9ಅವನಿಗೆ ಕಷ್ಟದುಃಖ ಬಂದೊದಗಲು ದೇವರು ಆಲೈಸುವನೆ ಅವನ ಮೊರೆಯನು?
10ಅವನು ಆನಂದಿಸುವನೆ ಸರ್ವಶಕ್ತನಲಿ? ಪ್ರಾರ್ಥನೆ ಮಾಡುವನೆ ಸರ್ವದಾ ಆತನಲಿ?
11ದೇವರ ಹಸ್ತಬಲವನು ಕುರಿತು ಬೋಧಿಸುವೆನು ಸರ್ವಶಕ್ತನ ಯೋಜನೆಯನು ನಿಮಗೆ ಮರೆಮಾಚೆನು.
12ಇಗೋ, ನೀವೆಲ್ಲರೂ ಇದನು ನೋಡಿದ್ದೀರಿ ಖುದ್ದಾಗಿ ಮತ್ತೆ ಏಕೆ ವಾದಿಸುತ್ತೀರಿ ವ್ಯರ್ಥವಾಗಿ?”
13“ಹೀಗಿರುತ್ತವೆ ದುಷ್ಟನಿಗೆ ದೇವರಿಂದ ದೊರಕುವ ಪಾಲು ಹಿಂಸಾಚಾರಿಗೆ ಸರ್ವಶಕ್ತನಿಂದ ಸಿಗುವ ಸೊತ್ತು:
14ಅವನಿಗೆ ಮಕ್ಕಳು ಹೆಚ್ಚಿದರೂ ಕತ್ತಿಗೆ ತುತ್ತಾಗುವರು ಅವನ ಸಂತತಿಯವರಿಗೆ ಊಟದ ಕೊರತೆ ತಪ್ಪದು.
15ಅವನ ಮನೆಯವರಲ್ಲಿ ಉಳಿದವರು ಗುಳಿಸೇರುವರು ವ್ಯಾಧಿಯಿಂದ ಅವನ ವಿಧವೆಯರು ಅವನಿಗೆ ನೆರವಾಗುವರು ಉತ್ತರಕ್ರಿಯೆಗಳಿಂದ.
16ಅವನು ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ ಧೂಳಿನಷ್ಟು, ವಸ್ತ್ರಗಳನು ಗುಡ್ಡೆ ಮಾಡಿಟ್ಟಿದ್ದರೂ ಮಣ್ಣಿನಷ್ಟು.
17ಸಜ್ಜನರು ಧರಿಸಿಕೊಳ್ಳುವರು ಆ ವಸ್ತ್ರಗಳನು ನಿರ್ದೋಷಿಗಳು ಹಂಚಿಕೊಳ್ಳುವರು ಆ ಬೆಳ್ಳಿಯನು.
18ಜೇಡರ ಹುಳದ ಗೂಡಿನಂತೆ ಕಾವಲುಗಾರನ ಗುಡಿಸಿಲಂತೆ ಬಡಕಲಾಗುವುದು ಅವನು ಕಟ್ಟಿಕೊಂಡ ಮನೆ.
19ಅವನು ನಿದ್ರಿಸಹೋಗುತ್ತಾನೆ ಹಣವಂತನಾಗಿ ಕಣ್ಣು ತೆರೆಯುತ್ತಲೆ ಇಲ್ಲವಾಗಿರುತ್ತದೆ ಆಸ್ತಿ! ಮತ್ತೆ ಇರುತ್ತಾನೆ ನಿದ್ರೆ ಕಾಣದವನಾಗಿ
20ವಿಪತ್ತುಗಳು ಅವನನ್ನು ಹಿಂದಟ್ಟಿ ಹಿಡಿಯುವುವು ಹೊಳೆಯಂತೆ ಬಿರುಗಾಳಿ ಅವನನ್ನು ಅಪಹರಿಸುವುದು ರಾತ್ರಿಯಲ್ಲೆ.
21ಅವನು ತೂರಿಹೋಗದಿರನು ಮೂಡಣಗಾಳಿ ಬಡಿಯುವುದರಿಂದ ಅವನನ್ನು ಹೊಡೆದು ಹಾರಿಸಿಬಿಡುವುದು ಅವನಿರುವ ಜಾಗದಿಂದ,
22ಅವನ ಮೇಲೆ ಅದು ಬೀಸುತ್ತದೆ ನಿರ್ದಾಕ್ಷಿಣ್ಯದಿಂದ ತಪ್ಪಿಸಿಕೊಳ್ಳಲು ಅವನು ಯತ್ನಿಸುತ್ತಾನೆ ಅದರ ಹೊಡೆತದಿಂದ.
23ಜನರು ಹಾಸ್ಯಮಾಡುತ್ತಾರೆ ಚಪ್ಪಾಳೆ ತಟ್ಟಿ ಅವನನ್ನು ಹೊರಗಟ್ಟುತ್ತಾರೆ ಛೀಮಾರಿ ಹಾಕಿ.”