ಹಳೆಯ ಒಡಂಬಡಿಕೆKNCL

ಯೋಬನು ಗ್ರಂಥ 18

1ಆಗ ಶೂಹ್ಯನಾದ ಬಿಲ್ದದನು ಹೀಗೆಂದು ಉತ್ತರಿಸಿದ:

2“ಯೋಬನೇ, ಇನ್ನೆಷ್ಟರವರೆಗೆ ಮಾತುಗಳಿಗಾಗಿ ಹೊಂಚುಹಾಕುತ್ತಿರುವೆ? ಮೊದಲು ಆಲೋಚಿಸಿನೋಡು, ಆಮೇಲೆ ಬಾ ಮಾತುಕತೆಗೆ.

3ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ? ನಿನ್ನ ದೃಷ್ಟಿಯಲಿ ನಾವೇನು ಅಷ್ಟು ದಡ್ಡರೆ?

4ಸಿಟ್ಟಿನಿಂದ ನಿನ್ನನ್ನೆ ಸೀಳಿಕೊಳ್ಳುತ್ತಿರುವವನೇ, ನಿನ್ನ ನಿಮಿತ್ತ ಇಡೀಲೋಕ ಬಿಕೋ ಎನ್ನಬೇಕೆ? ಬೆಟ್ಟಗುಡ್ಡಗಳು ಸ್ಥಳಬಿಟ್ಟು ಜರುಗಬೇಕೆ?

5ಹೌದು, ದುರುಳನ ದೀಪ ಆರಿಹೋಗುವುದು ಅವನ ಒಲೆಯು ಉರಿಯದೆ ಹೋಗುವುದು.

6ಅವನ ಗುಡಾರದ ಬೆಳಕು ಕತ್ತಲಾಗುವುದು ಅವನ ಮೇಲಣ ಸೊಡರು ನಂದಿಹೋಗುವುದು.

7ಅವನ ಬಿರುಸಾದ ಹೆಜ್ಜೆಗಳು ಜಡವಾಗುವುವು ಅವನು ಹಾಕಿದ ಯೋಜನೆಗಳು ಅವನನ್ನೆ ಕೆಡವಿಹಾಕುವುವು.

8ಅವನನ್ನು ಅವನ ಕಾಲುಗಳೆ ಬಲೆಗೆ ಬೀಳಿಸುವುವು ಅವನನ್ನು ಪಾಳುಗುಂಡಿಯ ಮೇಲೆ ನಡೆಸುವುವು.

9ಕತ್ತರಿಬೋನು ಅವನ ಹಿಮ್ಮಡಿಯನ್ನು ಕಚ್ಚುವುದು ಆ ಕಳ್ಳ ಉರುಲು ಅವನನ್ನು ಸಿಕ್ಕಿಸಿಕೊಳ್ಳುವುದು.

10ಅವನಿಗಾಗಿ ಜಾಲವನ್ನು ಅವಿತಿಡಲಾಗಿದೆ ದಾರಿಯಲಿ ಅವನಿಗಾಗಿ ಪಾಶವನ್ನು ಹೂತಿಡಲಾಗಿದೆ ನೆಲದಲಿ.

11ಸುತ್ತಲಿನ ಅಪಾಯಗಳು ಅವನನ್ನು ಹೆದರಿಸುತ್ತವೆ ಅವನ ಹಿಮ್ಮಡಿ ತುಳಿಯುತ್ತಾ ಅವು ಬೆನ್ನು ಹತ್ತುತ್ತವೆ.

12ಕುಂದಿಹೋಗುವುದು ಅವನ ಕಿಮ್ಮತ್ತು ಅವನು ಬೀಳುವುದನ್ನೇ ಕಾದಿದೆ ಆಪತ್ತು.

13ರೋಗರುಜಿನಗಳು ಅವನ ಚರ್ಮವನು ಚೂರುಚೂರಾಗಿ ತಿಂದುಬಿಡುವುವು ಅಂಗಾಂಗವಾಗಿ ಮೃತ್ಯುಕಾರಕ ರೋಗವು ಅವನನ್ನು ನುಂಗಿಬಿಡುವುದು.

14ನೆಮ್ಮದಿಯ ಗುಡಾರದಿಂದ ಅವನನ್ನು ಎಳೆದು ಹಾಕುವುದು ಹೊರಗೆ ಸಾಗಿಸಿಕೊಂಡು ಹೋಗುವುದವನನ್ನು ಅತಿಭಯಂಕರ ರಾಜನೆಡೆಗೆ.

15ಅನ್ಯಜನರು ವಾಸಮಾಡುವರು ಅವನ ಗುಡಾರದೊಳಗೆ ಗಂಧಕವನ್ನು ಸುರಿಸಲಾಗುವುದು ಅವನ ಮನೆಯ ಮೇಲೆ.

16ಒಣಗುವುದು ಅವನ ಬುಡ ಕೆಳಗಡೆ ಬಾಡುವುದು ಅವನ ರೆಂಬೆ ಮೇಲ್ಗಡೆ.

17ಅವನ ಸ್ಮರಣೆ ಅಳಿದುಹೋಗುವುದು ಜಗದಲಿ ಇಲ್ಲವಾಗುವುದು ಅವನ ಹೆಸರು ನಾಡಿನಲಿ.

18ಅವನನ್ನು ಬೆಳಕಿನಿಂದ ತಳ್ಳುವರು ಕತ್ತಲಿಗೆ ಅಟ್ಟಿಬಿಡುವರು ಅವನನ್ನು ಲೋಕದಿಂದಲೆ.

19ಅವನ ಮಗ, ಮೊಮ್ಮಗರಾರೂ ಇರರು ಸ್ವಜನರಲಿ ಯಾರೂ ಉಳಿಯರು ಅವನು ವಾಸಿಸಿದ ಸ್ಥಳದಲಿ.

20ಅವನ ಗತಿಯನು ಕೇಳಿ ಚಕಿತಗೊಳ್ವರು ಪಡುವಣದವರು ಅಂತೆಯೇ ಭಯಭ್ರಾಂತರಾಗುವರು ಮೂಡಣದವರು.

21ಕೇಡಿಗರ ನಿವಾಸಗಳ ಗತಿ ಹೀಗೆಯೇ ದೇವರನು ಅಲಕ್ಷಿಸುವವನ ಸ್ಥಿತಿ ಇದುವೇ.”