ಹಳೆಯ ಒಡಂಬಡಿಕೆKNCL

ಯೋಬನು ಗ್ರಂಥ 11

1ಆಗ ನಾಮಾಥ್ಯನಾದ ಚೋಫರನು ಹೀಗೆಂದ:

2“ಇಷ್ಟೆಲ್ಲ ಮಾತುಗಳಿಗೆ ತಕ್ಕ ಉತ್ತರ ಬೇಡವೆ? ಮಾತಿನಮಲ್ಲನು ನೀತಿವಂತ ಎನಿಸಿಕೊಳ್ಳುವನೆ?

3ನಿನ್ನ ವಾಕ್ ಚಮತ್ಕಾರಕ್ಕೆ ಜನ ಬಾಯಿಮುಚ್ಚಿಕೊಳ್ಳಬೇಕೆ? ನಿನ್ನ ಕುಚೋದ್ಯಕ್ಕೆ ನಿನಗಾಗಬೇಡವೆ ನಾಚಿಕೆ?

4ನೀನು ಹೇಳುವುದೇ ಸತ್ಯವೆಂದು ವಾದಿಸುತ್ತಿರುವೆ ದೇವರ ದೃಷ್ಟಿಯಲ್ಲಿ ನೀನು ಪರಿಶುದ್ಧನು ಎನ್ನುತ್ತಿರುವೆ.

5ಆದರೆ ದೇವರೇ ಬಾಯ್ದೆರೆದು ನಿನಗೆ ವಿರುದ್ಧ ಮಾತನಾಡಿದರೆ ಒಳಿತು!

6ಜ್ಞಾನದ ರಹಸ್ಯಗಳನು ದೇವರೇ ನಿನಗೆ ತಿಳಿಸಲಿ ಸುಜ್ಞಾನ ಬಹುಮುಖವಾದುದೆಂದು ಆತನೇ ತೋರಿಸಲಿ ನಿನ್ನ ದೋಷಗಳನ್ನೆಲ್ಲ ಆತ ಲಕ್ಷಿಸಿಲ್ಲ ಎಂಬುದು ನಿನಗೆ ತಿಳಿದಿರಲಿ.

7ನೀನು ಕಂಡುಕೊಳ್ಳಬಲ್ಲೆಯಾ ದೇವರ ಅಂತರಾಳವನ್ನು? ಗ್ರಹಿಸಿಕೊಳ್ಳಬಲ್ಲೆಯಾ ಸರ್ವಶಕ್ತನ ಇತಿಮಿತಿಯನ್ನು?

8ಅದು ಆಕಾಶಕ್ಕಿಂತಲೂ ಎತ್ತರ; ನಿನ್ನಿಂದೇನು ಮಾಡಲು ಸಾಧ್ಯ? ಅದು ಪಾತಾಳಕ್ಕಿಂತಲೂ ಆಳ; ನಿನ್ನಿಂದ ಹೇಗೆ ತಿಳಿಯಲು ಸಾಧ್ಯ?

9ಅದು ಭೂಮಿಗಿಂತಲು ಉದ್ದ ಸಮುದ್ರಕ್ಕಿಂತಲು ಅಗಲ.

10ಆತ ಹಾದುಹೋದರೂ ಸೆರೆಹಿಡಿದರೂ ನ್ಯಾಯಾಲಯಕ್ಕೆ ಎಳೆದರೂ ತಡೆವರಾರು?

11ಆತ ದುರುಳರನು ಗುರುತು ಹಚ್ಚುತ್ತಾನೆ ನೆರವಿಲ್ಲದೆ ಅಕ್ರಮವನು ಕಂಡುಹಿಡಿಯುತ್ತಾನೆ.

12ಕಾಡುಕತ್ತೆಮರಿ ನರಜನ್ಮ ತಾಳಿದಾಗ ಪೆದ್ದ ಮಾನವ ಬುದ್ಧಿವಂತನಾದ!

13ಸರಿಪಡಿಸಿಕೋ ನಿನ್ನ ಅಂತರಂಗವನ್ನು ದೇವರತ್ತ ಎತ್ತು ನಿನ್ನ ಕರಗಳನ್ನು.

14ನಿನ್ನ ಕೈಯಿಂದ ದೂರವಿರಲಿ ಅಕ್ರಮ ನಿನ್ನ ಗುಡಾರದಲಿ ನೆಲಸದಿರಲಿ ಅನ್ಯಾಯ.

15ಆಗ ಮಾತ್ರ ನೀನು ತಲೆಯೆತ್ತಬಲ್ಲೆ ಗೌರವದಿಂದ ಸ್ಥಿರಚಿತ್ತನಾಗಿರಬಲ್ಲೆ ನಿರ್ಭಯದಿಂದ.

16ಮರೆತುಬಿಡುವೆ ಆಗ ನಿನ್ನ ಕಷ್ಟದುಃಖವನ್ನು ನಿನ್ನ ನೆನಪಿಗೆ ಅದು ಹರಿದುಹೋದ ನೀರು.

17ಆಗ ನಿನ್ನ ಬಾಳು ನಡುಹಗಲಿಗಿಂತ ಪ್ರಜ್ವಲ ಕತ್ತಲು ಕೂಡ ಪ್ರಾತಃಕಾಲದಂತೆ ಉಜ್ವಲ!

18ನಂಬಿಕೆಯಿಂದಿರುವುದರಿಂದ ಧೈರ್ಯದಿಂದಿರುವೆ ಸುತ್ತಲು ಸುರಕ್ಷಿತನಾಗಿ ನೆಮ್ಮದಿಯಿಂದ ಮಲಗುವೆ.

19ಆಗ ನೀನು ವಿಶ್ರಮಿಸುವೆ ಹೆದರಿಕೆಯಿಲ್ಲದೆ ಅನೇಕರಿಗೆ ಬೇಕಾಗುವುದು ನಿನ್ನ ಮುಖಪ್ರಸನ್ನತೆ.

20ದುರ್ಜನರು ನಿರಾಶೆಯಿಂದ ಕಂಗೆಡುವರು ಪ್ರಾಣಬಿಡಬೇಕೆಂಬುದೇ ಅವರ ಆಶೆಯಾಗಿರುವುದು.”