ಹಳೆಯ ಒಡಂಬಡಿಕೆKNCL
1ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ [1] ನೇರೀಯನ ಮಗ ಬಾರೂಕನು ಯೆರೆಮೀಯನ ಮಾತುಗಳನ್ನು ಅವನ ಬಾಯಿಂದ ಬಂದ ಹಾಗೆಯೇ ಪುಸ್ತಕದಲ್ಲಿ ಬರೆದನು. ಆಗ ಪ್ರವಾದಿ ಯೆರೆಮೀಯನು ಸರ್ವೇಶ್ವರನ ಆಜ್ಞೆಯ ಪ್ರಕಾರ ಈ ವಾಕ್ಯವನ್ನು ಬಾರೂಕನಿಗೆ ನುಡಿದನು.
2“ಬಾರೂಕನೇ, ಇಸ್ರಯೇಲಿನ ದೇವರಾದ ಸರ್ವೇಶ್ವರ ಸ್ವಾಮಿ ನಿನಗೆ ಹೇಳುವುದನ್ನು ಕೇಳು: ನೀನು, ‘ಅಯ್ಯೋ, ನನಗೆ ಕೇಡು!
3ವ್ಯಥೆಪಡುತ್ತಿದ್ದ ನನಗೆ ಸರ್ವೇಶ್ವರ ದುಃಖದ ಮೇಲೆ ದುಃಖ ಕಳುಹಿಸಿದ್ದಾರೆ. ನಾನು ನರಳಿ ದಣಿದು ಹೋಗಿದ್ದೇನೆ. ನನಗೆ ಯಾವ ನೆಮ್ಮದಿಯೂ ದೊರಕದಿದೆ’ ಎಂದು ಹೇಳುತ್ತಿರುವೆ ಅಲ್ಲವೆ?
4“ಸರ್ವೇಶ್ವರನ ಈ ವಾಣಿಯನ್ನು ಕೇಳು: ‘ನೋಡು, ನಾನು ಕಟ್ಟಿದ್ದನ್ನು ನಾನೇ ಕೆಡವುತ್ತೇನೆ. ನಾನು ನೆಟ್ಟಿದ್ದನ್ನು ನಾನೇ ಕಿತ್ತುಹಾಕುತ್ತೇನೆ. ಹೌದು ಜಗದಲ್ಲೆಲ್ಲ ಹಾಗೆ ಮಾಡುತ್ತೇನೆ.
5ನಿನಗೆ ಮಾತ್ರ ಪ್ರತ್ಯೇಕ ಸ್ಥಾನಮಾನಗಳನ್ನು ನಿರೀಕ್ಷಿಸುತ್ತಿಯೋ? ನಿರೀಕ್ಷಿಸಬೇಡ. ಹೌದು, ಮಾನವ ಜನಾಂಗವನ್ನೇ ನಾನು ದಂಡಿಸಲಿದ್ದೇನೆ. ಆದರೆ ನೀನು ಎಲ್ಲಿಗೆ ಹೋದರೂ ನಿನ್ನ ಪ್ರಾಣವೊಂದನ್ನು ಕೊಳ್ಳೆಯಂತೆ ಉಳಿಸಿಕೊಳ್ಳಲಿಕ್ಕೆ ಅವಕಾಶ ನೀಡುತ್ತೇನೆ. ಇದು ಸರ್ವೇಶ್ವರನಾದ ನನ್ನ ನುಡಿ.”