ಹಳೆಯ ಒಡಂಬಡಿಕೆKNCL
1ಸರ್ವೇಶ್ವರ ಸ್ವಾಮಿ ನನಗೆ ಹೀಗೆ ಹೇಳಿದರು : “ಹೋಗು, ಕುಂಬಾರ ಮಾಡಿದ ಮಣ್ಣಿನ ಮಡಕೆಯೊಂದನ್ನು ಕೊಂಡುಕೊ. ಜನರ ಹಿರಿಯರಲ್ಲೂ ಯಾಜಕರ ಹಿರಿಯರಲ್ಲೂ ಕೆಲವರನ್ನು ಕರೆದುಕೊಂಡು
2ಬೋಕಿಯ ಬಾಗಿಲಿನ ಸಮೀಪದಲ್ಲಿರುವ ‘ಬೆನ್ಹಿನ್ನೋಮ್’ ಕಣಿವೆಗೆ ಹೋಗು. ನಾನು ನಿನಗೆ ತಿಳಿಸುವ ಈ ಸಂದೇಶವನ್ನು ಅಲ್ಲಿ ಸಾರು -
3‘ಜುದೇಯದ ಅರಸರೇ, ಜೆರುಸಲೇಮಿನ ನಿವಾಸಿಗಳೇ, ಸರ್ವೇಶ್ವರನ ಸಂದೇಶವನ್ನು ಕೇಳಿರಿ. ಇದು ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರನ ನುಡಿ: ಈ ಸ್ಥಳದ ಮೇಲೆ ನಾನು ಕೇಡನ್ನು ಬರಮಾಡುವೆನು. ಅದರ ಸುದ್ದಿಯನ್ನು ಕೇಳುವವರ ಕಿವಿಗಳೂ ನಿಮಿರುವುವು.
4ಈ ಜನರು ನನ್ನನ್ನು ತೊರೆದು ಬಿಟ್ಟು ತಮಗಾಗಲಿ, ತಮ್ಮ ಪೂರ್ವಜರಿಗಾಗಲಿ, ಜುದೇಯದ ಅರಸರಿಗಾಗಲಿ ತಿಳಿಯದ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿದ್ದಾರೆ. ಈ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ. ನಿರ್ದೋಷಿಗಳ ರಕ್ತದಿಂದ ತುಂಬಿಸಿದ್ದಾರೆ.
5ತಮ್ಮ ಮಕ್ಕಳನ್ನು ಬಾಳ್ದೇವತೆಗೆ ಆಹುತಿಕೊಡಲು ಆ ದೇವತೆಗೆ ಬಲಿಪೀಠಗಳನ್ನು ಕೂಡ ಏರ್ಪಡಿಸಿದ್ದಾರೆ. ನಾನು ಇಂಥ ಆಚಾರಗಳನ್ನು ವಿಧಿಸಲಿಲ್ಲ. ಅದರ ಮಾತನ್ನೇ ಎತ್ತಲಿಲ್ಲ. ಅಂಥದ್ದು ನನ್ನ ಮನಸ್ಸಿಗೂ ತೋಚಿದ್ದಿಲ್ಲ.
6ಆದಕಾರಣ ಈ ಸ್ಥಳಕ್ಕೆ ತೋಫೆತ್ ಮತ್ತು ಬೆನ್ಹಿನ್ನೋಮಿನ ಕಣಿವೆ ಎಂಬ ಹೆಸರುಗಳು ಹೋಗಿ, ‘ಕೊಲೆಯ ಕಣಿವೆ’ ಎಂದು ಹೆಸರಿಸಲಾಗುವ ಕಾಲ ಬರುವುದು.
7ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಜೆರುಸಲೇಮಿನವರ ಯೋಜನೆಗಳನ್ನು ಮಣ್ಣುಪಾಲಾಗಿಸುವೆನು. ಅವರ ಶತ್ರುಗಳ ಹಾಗು ಕೊಲೆಗಡುಕರ ಕತ್ತಿಗೆ ಅವರನ್ನು ತುತ್ತಾಗಿಸುವೆನು. ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗಿಸುವೆನು.
8ಈ ನಗರವನ್ನು ಭಯಾನಕ ಹಾಗೂ ಹಾಸ್ಯಾಸ್ಪದ ಸ್ಥಳವನ್ನಾಗಿಸುವೆನು. ಹಾದುಹೋಗುವವರೆಲ್ಲರು ಅದಕ್ಕೆ ಒದಗಿದ ವಿಪತ್ತನ್ನು ಕಂಡು ನಿಬ್ಬೆರಗಾಗಿ ಹೀಗಳೆಯುವರು.
9ಅವರ ಶತ್ರುಗಳು, ಕೊಲೆಗಡುಕರು ಅವರನ್ನು ಮುತ್ತಿ ನಸುಕುವಾಗ ಒಬ್ಬರು ಮತ್ತೊಬ್ಬರನ್ನು ತಿನ್ನುವುದು ಮಾತ್ರವಲ್ಲ, ತಮ್ಮ ಪುತ್ರಪುತ್ರಿಯರ ಮಾಂಸವನ್ನೇ ತಿನ್ನುವರು.’
10“ಆಗ ನೀನು, ನಿನ್ನ ಸಂಗಡ ಬಂದವರ ಕಣ್ಣೆದುರಿಗೇ ಆ ಮಣ್ಣಿನ ಮಡಕೆಯನ್ನು ಒಡೆದುಬಿಟ್ಟು ಅವರಿಗೆ ಹೀಗೆಂದು ನುಡಿ :
11ಸರ್ವಶಕ್ತ ಸರ್ವೇಶ್ವರನ ಸಂದೇಶವಿದು - ಕುಂಬಾರ ಮಾಡಿದ ಮಣ್ಣಿನ ಮಡಕೆಯನ್ನು ಒಡೆದುಹಾಕಿದ ಮೇಲೆ ಸರಿಪಡಿಸಲಾಗದು. ಅಂತೆಯೇ ನಾನು ಈ ಜನರನ್ನು ಹಾಗು ನಗರವನ್ನು ಒಡೆದುಹಾಕುವೆನು. ಹೂಣಲು ಇನ್ನೆಲ್ಲಿಯೂ ಸ್ಥಳವಿಲ್ಲವಾಗಿ ಹೆಣಗಳನ್ನು ಈ ತೋಫೆತಿನಲ್ಲೇ ಹೂಣುವರು.
12ನಾನು ಈ ಸ್ಥಳವನ್ನೂ ಇದರ ನಿವಾಸಿಗಳನ್ನೂ ಅಷ್ಟರಮಟ್ಟಿಗೆ ನಾಶಪಡಿಸಿ ಈ ನಗರವನ್ನು ತೋಫೆತಿನ ಪರಿಸ್ಥಿತಿಗೆ ಇಳಿಸುವೆನು.
13ಜೆರುಸಲೇಮಿನ ಮನೆಗಳೂ ಜುದೇಯದ ಅರಸರ ಮನೆಗಳೂ, ಅಂದರೆ ಯಾವ ಯಾವ ಮನೆಮಾಳಿಗೆಗಳ ಮೇಲೆ ಆಕಾಶದ ನಕ್ಷತ್ರಗಣಕ್ಕೆಲ್ಲ ಧೂಪಾರತಿ ಎತ್ತಿ ಅನ್ಯದೇವತೆಗಳಿಗೆ ಪಾನನೈವೇದ್ಯಗಳನ್ನು ಸುರಿದಿದ್ದಾರೋ ಆ ಮನೆಗಳೆಲ್ಲ ಹೊಲಸಾಗಿ ತೋಫೆತ್ ಸ್ಥಳಕ್ಕೆ ಸಮಾನವಾಗುವುವು.”
14ಯೆರೆಮೀಯನು ಸರ್ವೇಶ್ವರ ಸ್ವಾಮಿಯ ಅಪ್ಪಣೆಯಂತೆ ತೋಫೆತಿನಲ್ಲಿ ಪ್ರವಾದಿಸಿದ ಬಳಿಕ ಅಲ್ಲಿಂದ ಬಂದು ಸರ್ವೇಶ್ವರನ ಆಲಯದ ಪ್ರಾಕಾರದಲ್ಲಿ ನಿಂತುಕೊಂಡು:
15“ಇಸ್ರಯೇಲರ ದೇವರೂ ಸರ್ವಶಕ್ತರೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ - ಈ ನಗರದವರೂ ಇದರ ಸುತ್ತಮುತ್ತಿನ ಊರಿನವರೂ ನನ್ನ ಮಾತನ್ನು ಕೇಳದೆಹೋದರು. ತಮ್ಮ ಮನಸ್ಸನ್ನು ಕಲ್ಲಾಗಿಸಿಕೊಂಡರು. ಆದುದರಿಂದ ನಾನು ಈ ನಗರಕ್ಕೆ ಶಾಪ ಹಾಕಿದ ಕೇಡನ್ನೆಲ್ಲಾ ಅವರಿಗೆ ಬರಮಾಡುವೆನು,” ಎಂದು ಎಲ್ಲ ಜನರಿಗೆ ಸಾರಿದನು.