ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಶಾಯನ ಗ್ರಂಥ 64

1(ಸ್ವಾಮೀ) ಆಕಾಶವನ್ನು ಸೀಳಿ ಇಳಿದು ಬರಲಾರಿರಾ? ನಿಮ್ಮ ದರ್ಶನವನ್ನು ಕಂಡು ಬೆಟ್ಟಗುಡ್ಡಗಳು ಗಡಗಡನೆ ನಡುಗಬಾರದೆ?

2ಒಣಗಿಡಕ್ಕೆ ಹಚ್ಚುವ ಕಿಚ್ಚಿನಂತೆ, ನೀರನ್ನು ಕುದಿಸುವ ಬೆಂಕಿಯಂತೆ ನೀವು ಪ್ರತ್ಯಕ್ಷರಾಗಲಾರಿರಾ?

3ನಮ್ಮ ನಿರೀಕ್ಷೆಗೆ ಮೀರಿದ ಮಹತ್ಕಾರ್ಯಗಳನ್ನು ನಡೆಸಿ, ನಿಮ್ಮ ನಾಮಮಹಿಮೆಯನ್ನು ನಿಮ್ಮ ಶತ್ರುಗಳಿಗೆ ಪ್ರದರ್ಶಿಸಿ, ಅನ್ಯರಾಷ್ಟ್ರಗಳನ್ನು ನಡುಗಿಸಲಾರಿರಾ? ಹೌದು, ನೀವು ಇಳಿದುಬಂದು, ಬೆಟ್ಟಗುಡ್ಡಗಳು ನಡುಗಿದರೆ ಎಷ್ಟೋ ಲೇಸು.

4ತಮ್ಮನ್ನು ಕಾದು ಎದುರುನೋಡುವವರ ಪರವಾಗಿ ಕಾರ್ಯಗತರಾಗುವಂಥ ದೇವರು, ನಿಮ್ಮನ್ನು ಬಿಟ್ಟರೆ, ಯಾರಿದ್ದಾರೆ? ಅಂಥಾ ದೇವರನ್ನು ಲೋಕಾದಿಯಿಂದ ಯಾರೂ ಕಂಡಿಲ್ಲ, ಅಂಥವರು ಯಾರ ಕಿವಿಗೂ ಬೀಳಲಿಲ್ಲ, ಯಾವ ಕಣ್ಣಿಗೂ ಕಾಣಿಸಲಿಲ್ಲ.

5ಸದಾಚಾರದಲ್ಲೇ ಸಂತೋಷಪಡುತ್ತಾ, ನಿಮ್ಮ ಮಾರ್ಗದಲ್ಲಿ ನಡೆಯುತ್ತಾ, ನಿಮ್ಮನ್ನು ಸ್ಮರಿಸುತ್ತಾ ಬಂದವರಿಗೆ ಪ್ರತ್ಯಕ್ಷರಾಗುತ್ತೀರಿ. ನಮ್ಮ ಮೇಲಾದರೋ ಕೋಪಗೊಂಡಿರಿ. ಆದರೂ ನಾವು ಪಾಪದಲ್ಲೇ ಮುನ್ನಡೆದೆವು. ಬಹುಕಾಲದಿಂದ ಪಾಪದಲ್ಲಿ ಮುಳುಗಿಹೋದೆವು. ನಮ್ಮಂಥವರಿಗೆ ರಕ್ಷಣೆ ಇದೆಯೇ?

6ನಾವೆಲ್ಲರೂ ಅಶುದ್ಧರು, ನಮ್ಮ ಸತ್ಕಾರ್ಯಗಳೆಲ್ಲ ಕೊಳಕು, ತರಗೆಲೆಯಂತೆ ಒಣಗಿಹೋಗಿದ್ದೇವೆ. ಬಿರುಗಾಳಿಯಂತೆ ನಮ್ಮನ್ನು ತಳ್ಳಿಕೊಂಡು ಬಂದಿವೆ, ನಮ್ಮ ಅಪರಾಧಗಳು.

7ನಿಮ್ಮ ನಾಮಸ್ಮರಣೆ ಮಾಡುವವನು ಯಾರೂ ಇಲ್ಲ. ನಿಮ್ಮ ಆಶ್ರಯ ಕೋರುವ ಆಸಕ್ತನು ಎಲ್ಲಿಯೂ ಇಲ್ಲ. ಏಕೆಂದರೆ ನೀವು ನಮಗೆ ವಿಮುಖರಾಗಿದ್ದೀರಿ. ನಮ್ಮ ಪಾಪಗಳ ವಶಕ್ಕೆ ನಮ್ಮನ್ನು ಬಿಟ್ಟುಬಿಟ್ಟಿದ್ದೀರಿ.

8ಆದರೂ ಸ್ವಾಮಿ ಸರ್ವೇಶ್ವರಾ, ನೀವು ನಮ್ಮ ತಂದೇ. ನಾವು ಜೇಡಿಮಣ್ಣು, ನೀವೇ ಕುಂಬಾರ; ನಾವೆಲ್ಲರು ನಿಮ್ಮ ಕೈಯ ಕೃತಿಗಳು.

9ಸ್ವಾಮಿ, ನಮ್ಮ ಮೇಲೆ ಅತಿಕೋಪಗೊಳ್ಳದಿರಿ. ಸದಾ ನಮ್ಮ ಅಕ್ರಮಗಳನ್ನು ನೆನೆಸದಿರಿ, ಇಗೋ ನೋಡಿ, ಬೇಡುತ್ತಿದ್ದೇವೆ, ನಾವೆಲ್ಲರೂ ನಿಮ್ಮ ಜನರು.

10ನಿಮ್ಮ ಪವಿತ್ರ ಪಟ್ಟಣಗಳು ಕಾಡಾಗಿವೆ. ಸಿಯೋನ್ ಪಾಳುಬಿದ್ದಿದೆ. ಜೆರುಸಲೇಮ್ ಹಾಳಾಗಿಹೋಗಿದೆ.

11ನಮ್ಮ ಪಿತೃಗಳು ನಿಮ್ಮನ್ನು ಕೀರ್ತಿಸುತ್ತಿದ್ದ ಆ ಸ್ಥಳವೇ, ಆ ನಮ್ಮ ಚೆಲುವ ಪವಿತ್ರಾಲಯವೇ, ಬೆಂಕಿಯ ಪಾಲಾಗಿದೆ. ನಮ್ಮ ಅಮೂಲ್ಯ ವಸ್ತುಗಳೆಲ್ಲ ನಾಶವಾಗಿವೆ.

12ಸ್ವಾಮಿ ಸರ್ವೇಶ್ವರಾ, ಇವುಗಳನ್ನು ನೋಡಿಯೂ ಸುಮ್ಮನಿರುವಿರಾ? ನೆಮ್ಮದಿಯಿಂದಿರುವಿರಾ? ನಾವು ತಡೆದುಕೊಳ್ಳಲಾಗದಷ್ಟು ದಂಡಿಸುತ್ತಿರುವಿರಾ?