ಹಳೆಯ ಒಡಂಬಡಿಕೆKNCL
1ಸರ್ವೇಶ್ವರ ಸ್ವಾಮಿ ಹೇಳುವುದು ಏನೆಂದರೆ : ನ್ಯಾಯವನ್ನು ಅನುಸರಿಸಿರಿ. ನೀತಿಯನ್ನು ಆಚರಿಸಿರಿ. ಏಕೆಂದರೆ ನಾನೀಡುವ ಮುಕ್ತಿಯು ಬೇಗನೆ ಬರುವುದು; ನಾನು ತರುವ ಸತ್ಸಂಬಂಧವು ಕೂಡಲೆ ಬೆಳಗುವುದು.
2ಅದನ್ನು ಕೈಗೊಳ್ಳುವವನು ಧನ್ಯನು! ಅದನ್ನು ಸುಭದ್ರವಾಗಿ ಕಾದಿರಿಸಿಕೊಂಡು ಸಬ್ಬತ್ ದಿನವನ್ನು ಹೊಲೆಮಾಡದೆ ಆಚರಿಸುತ್ತಾ ಬರುವವನು ಹಾಗೂ ಯಾವ ಕೇಡಿಗೂ ಕೈಹಾಕದವನು ಭಾಗ್ಯವಂತನು!
3ಸರ್ವೇಶ್ವರನನ್ನು ಅವಲಂಬಿಸುವ ವಿದೇಶಿಯನು, ‘ಸರ್ವೇಶ್ವರ ತನ್ನ ಜನರಿಂದ ನನ್ನನ್ನು ಖಂಡಿತವಾಗಿ ಬಹಿಷ್ಕರಿಸುವನು’ ಎಂದು ಹೇಳದಿರಲಿ.
4ಅಂಥವನಿಗೆ ಸರ್ವೇಶ್ವರ ಸ್ವಾಮಿ ಹೇಳುವುದನ್ನು ಕೇಳು : “ಸಬ್ಬತ್ದಿನಗಳನ್ನು ನನ್ನ ದಿನಗಳೆಂದು ಆಚರಿಸಿ, ನನಗೆ ಮೆಚ್ಚುಗೆಯಾದುವನ್ನು ಕೈಗೊಂಡು, ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸಿಕೊಂಡು ಬರುವ ನಪುಂಸಕರಿಗೆ,
5ನನ್ನ ಆಲಯದಲ್ಲೆ, ಅದರ ಪ್ರಾಕಾರಗಳಲ್ಲೆ, ಅವರ ಸ್ಮಾರಕ ಶಿಲೆಗಳನ್ನು ಇಡುವೆನು. ಮಕ್ಕಳನ್ನು ಪಡೆದವರಿಗಿಂತಲು ಶ್ರೇಷ್ಠವಾದ ಹೆಸರನ್ನು ಅವರಿಗೆ ದಯಪಾಲಿಸುವೆನು. ಹೌದು, ಎಂದಿಗೂ ಅಳಿಯದ, ಶಾಶ್ವತವಾಗಿ ಉಳಿಯುವ, ಹೆಸರನ್ನು ಅವರಿಗೆ ದಯಪಾಲಿಸುವೆನು.
6ಅನ್ಯದೇಶೀಯರಲ್ಲಿ ಯಾರು ಯಾರು ‘ಸರ್ವೇಶ್ವರ’ ಎಂದು ನನ್ನನ್ನು ಅವಲಂಭಿಸಿ, ಪೂಜಿಸಿ, ನನ್ನ ನಾಮವನ್ನು ಪ್ರೀತಿಸಿ, ನನಗೆ ದಾಸನಾಗಿ, ಸಬ್ಬತ್ದಿನವನ್ನು ಹೊಲೆಮಾಡದೆ ನನ್ನ ದಿನವೆಂದು ಆಚರಿಸಿ, ಜೊತೆಗೆ ನನ್ನ ಒಡಂಬಡಿಕೆಯನ್ನು ಸುಭದ್ರವಾಗಿ ಪಾಲಿಸುತ್ತಾರೋ,
7ಅವರೆಲ್ಲರನ್ನು ನನ್ನ ಪವಿತ್ರಪರ್ವತಕ್ಕೆ ಬರಮಾಡುವೆನು; ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಆನಂದಗೊಳಿಸುವೆನು; ನನ್ನ ಬಲಿಪೀಠದ ಮೇಲೆ ಅವರು ನೀಡುವ ದಹನಬಲಿಗಳನ್ನೂ ಅರ್ಪಣೆಗಳನ್ನೂ ಸಂತೋಷದಿಂದ ಸ್ವೀಕರಿಸುವೆನು. ನನ್ನ ಆಲಯ ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯ ಎನಿಸಿಕೊಳ್ಳುವುದು.”
8ಇಸ್ರಯೇಲಿನ ಸೆರೆಹೋದ ಜನರನ್ನು ಬರಮಾಡಿಕೊಳ್ಳುವ ದೇವರಾದ ಸರ್ವೇಶ್ವರ, “ನಾನು ಕೂಡಿಸಿಕೊಂಡ ಇಸ್ರಯೇಲ ಜನರೊಂದಿಗೆ ಇನ್ನೂ ಹಲವರನ್ನು ಕೂಡಿಸುವೆನು” ಎಂದಿದ್ದಾರೆ.
9“ಕಾಡಿನ ಮೃಗಗಳೇ ಬನ್ನಿ, ಬಂದು ನುಂಗಿಬಿಡಿ!
10ಈ ಕಾವಲುಗಾರರು ಕುರುಡರು, ಇವರಿಗೆ ತಿಳುವಳಿಕೆಯಿಲ್ಲ. ಇವರೆಲ್ಲರೂ ಬೊಗಳಲಾರದ ಮೂಕನಾಯಿಗಳು, ಮಲಗಿಕೊಂಡು ಕನವರಿಸುವ ನಿದ್ದೆಕೋರ ನಾಯಿಗಳು.
11ಹೊಟ್ಟೆಬಾಕ ಕುನ್ನಿಗಳು; ಎಂದಿಗೂ ತೃಪ್ತಿ ಪಡೆಯದ ಶುನಕಗಳು. ಇಂಥವರು ಕುರಿಗಳನ್ನು ಕಾಯಲು ಯೋಗ್ಯರೋ? ಇವರು ಬುದ್ಧಿಹೀನರು. ಇವರಲ್ಲಿ ಪ್ರತಿಯೊಬ್ಬನು ಕೊಳ್ಳೆಹೊಡೆಯಬೇಕೆಂದು ತನ್ನದೇ ಆದ ಮಾರ್ಗವನ್ನು ಹಿಡಿದಿದ್ದಾನೆ.
12ಅಲ್ಲದೆ, ‘ಬನ್ನಿ, ಮಧುಪಾನವನ್ನು ತರಿಸುತ್ತೇನೆ. ಅಮಲೇರಿಸುವ ಮದ್ಯವನ್ನು ಬೇಕಾದಷ್ಟು ಕುಡಿಯೋಣ; ಆಗ ಇನ್ನೂ ಸಂಭ್ರಮವಾಗಿರುವುದು!’ ಎಂದು ಹರಟಿಕೊಳ್ಳುವರು.”