ಹಳೆಯ ಒಡಂಬಡಿಕೆKNCL
1ಆ ಕಾಲ ಬಂದಾಗ ಏಳುಮಂದಿ ಅವಿವಾಹಿತ ಮಹಿಳೆಯರು ಒಬ್ಬ ಪುರುಷನನ್ನು ಹಿಡಿದುಕೊಂಡು: “ನಾವು ಸ್ವಂತವಾಗಿ ದುಡಿದು ಊಟಮಾಡುತ್ತೇವೆ, ಸ್ವಂತವಾಗಿ ಸಂಪಾದನೆಮಾಡಿ ಬಟ್ಟೆ ಉಡುತ್ತೇವೆ. ನೀನು ನಮ್ಮ ಯಜಮಾನನೆನಿಸಿಕೊಂಡು ನಮ್ಮ ಮಾನವನ್ನು ಕಾಪಾಡಿದರೆ ಸಾಕು,” ಎಂದು ಕೋರುವರು.
2ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆದಿರುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು.
3ಸಿಯೋನಿನಲ್ಲಿ ಉಳಿದವರು, ಜೆರುಸಲೇಮಿನಲ್ಲಿ ಮಿಕ್ಕವರು - ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿರುವ ಜೆರುಸಲೇಮಿನ ನಿವಾಸಿಗಳೆಲ್ಲರು - ಪವಿತ್ರರೆನಿಸಿಕೊಳ್ಳುವರು.
4ಆಗ ಒಡೆಯರಾದ ಸ್ವಾಮಿ ನ್ಯಾಯನಿರ್ಣಯ ಮಾಡುವ ತಮ್ಮ ಚೈತನ್ಯದಿಂದಲೂ ಸುಟ್ಟು ಶುಚಿಮಾಡುವ ಚೈತನ್ಯದಿಂದಲೂ ಸಿಯೋನಿನ ಮಹಿಳೆಯರ ಕಲ್ಮಶವನ್ನು ತೊಡೆದುಹಾಕುವರು.
5ಸಿಯೋನ್ ಪರ್ವತದ ಮೇಲೆಲ್ಲ, ಅಲ್ಲಿನ ಸಭಾಕೂಟಗಳ ಮೇಲೆಲ್ಲ ಹಗಲಲ್ಲಿ ಧೂಮಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿಪ್ರಕಾಶವನ್ನು ಉಂಟುಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು.
6ಅದು ಹಗಲಿನ ಬಿಸಿಲಲ್ಲಿ ನೆರಳನ್ನೂ ಮಳೆಗಾಳಿ ಬಂದಾಗ ಆಶ್ರಯವನ್ನೂ ಕೊಡುವ ಮಂಟಪವಾಗಿರುವುದು.