ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಶಾಯನ ಗ್ರಂಥ 39

1ಅದೇ ಕಾಲದಲ್ಲಿ ಬಲದಾನನ ಮಗನು ಹಾಗೂ ಬಾಬಿಲೋನಿಯದ ಅರಸನು ಆದ ಮೆರೋದಕಬಲದಾನ ಎಂಬವನು, ರಾಜ ಹಿಜ್ಕೀಯನು ರೋಗದಿಂದ ಗುಣಹೊಂದಿದನು ಎಂದು ಕೇಳಿ ಅವನಿಗೆ ಉಡುಗೊರೆಯೊಂದಿಗೆ ಒಂದು ಪತ್ರವನ್ನು ಕಳುಹಿಸಿದನು.

2ಹಿಜ್ಕೀಯನು ಆ ದೂತರನ್ನು ಸಂತೋಷದಿಂದ ಬರಮಾಡಿಕೊಂಡು ಅವರಿಗೆ ಬೆಳ್ಳಿಬಂಗಾರ, ಸುಗಂಧದ್ರವ್ಯ, ಪರಿಮಳತೈಲ ಮೊದಲಾದ ಪದಾರ್ಥಗಳಿಂದ ಕೂಡಿದ ಕರಂಡಗಳನ್ನು, ಆಯುಧ ಶಾಲೆಯನ್ನು ಮತ್ತು ತನ್ನ ಭಂಡಾರದಲ್ಲಿದ್ದ ಒಡವೆವಸ್ತುಗಳನ್ನು ತೋರಿಸಿದನು. ಅವನ ಅರಮನೆಯಲ್ಲೂ ರಾಜ್ಯದಲ್ಲೂ ಇದ್ದ ಸಮಸ್ತವನ್ನು ತೋರಿಸಿದನು.

3ಆಗ ಪ್ರವಾದಿ ಯೆಶಾಯನು ಹಿಜ್ಕೀಯನ ಬಳಿಗೆ ಬಂದು, “ಆ ದೂತರು ಎಲ್ಲಿಯವರು? ಏನು ಕೇಳಿದರು?” ಎಂದನು. ಅದಕ್ಕೆ ಹಿಜ್ಕೀಯನು, “ಅವರು ಬಹುದೂರದ ನಾಡಾದ ಬಾಬಿಲೋನಿಯದಿಂದ ಬಂದವರು,” ಎಂದು ಉತ್ತರಕೊಟ್ಟನು.

4ಯೆಶಾಯನು ಮತ್ತೆ ಅವನನ್ನು, “ಅವರು ನಿನ್ನ ಅರಮನೆಯಲ್ಲಿ ಏನೇನನ್ನು ನೋಡಿದರು?” ಎಂದು ಕೇಳಲು ಹಿಜ್ಕೀಯನು, “ಅರಮನೆಯಲ್ಲಿ ಇರುವುದೆಲ್ಲವನ್ನು ನೋಡಿದರು. ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದ ಒಡವೆ ವಸ್ತು ಒಂದೂ ಇಲ್ಲ,” ಎಂದನು.

5ಆಗ ಯೆಶಾಯನು ಅವನಿಗೆ, “ಸೇನಾಧೀಶ್ವರ ಸರ್ವೇಶ್ವರ ಸ್ವಾಮಿಯ ಈ ಮಾತನ್ನು ಕೇಳು :

6ನಿನ್ನ ಪೂರ್ವಜರ ಕಾಲದಿಂದ ಇಂದಿನವರೆಗೆ ಅರಮನೆಯಲ್ಲಿ ಕೂಡಿಸಿಟ್ಟ ಎಲ್ಲವನ್ನು ಬಾಬಿಲೋನಿಯಾಗೆ ಕೊಂಡೊಯ್ಯುವ ದಿನ ಬರುವುದು; ಇಲ್ಲಿ ಏನೂ ಉಳಿಯುವುದಿಲ್ಲ.

7ನೀನು ಪಡೆದ ಮಕ್ಕಳಲ್ಲಿ ಕೆಲವರನ್ನು, ನಿನ್ನ ಸ್ವಂತ ಪುತ್ರರನ್ನು ತೆಗೆದುಕೊಂಡು ಹೋಗಿ ಬಾಬಿಲೋನಿಯರ ಅರಸರ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು,” ಎಂದು ಹೇಳಿದನು.

8ಆಗ ರಾಜ ಹಿಜ್ಕೀಯನು ಹೇಗೂ ತನ್ನ ಜೀವಮಾನದಲ್ಲಿ ಶಾಂತಿ ಸೌಭಾಗ್ಯ ಇರುವುದೆಂದು ತಿಳಿದುಕೊಂಡು ಯೆಶಾಯನಿಗೆ, “ನೀನು ತಿಳಿಸಿದ ಸರ್ವೇಶ್ವರ ಸ್ವಾಮಿಯ ಮಾತು ಹಿತಕರವಾದುದು,” ಎಂದು ಉತ್ತರಕೊಟ್ಟನು.