ಹಳೆಯ ಒಡಂಬಡಿಕೆKNCL
1ಆನಂದಿಸಲಿ ಅರಣ್ಯವೂ ಮರುಭೂಮಿಯೂ ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು.
2ಉಲ್ಲಾಸಿಸಲಿ ಅದು ಹುಲುಸಾಗಿ ಹೂಬಿಟ್ಟು ಹೌದು, ಸಂತಸ ಸಂಗೀತ ಹಾಡುವಷ್ಟು, ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು ಕರ್ಮೆಲಿನ ಮತ್ತು ಶಾರೋನಿನ ವೈಭವವು. ಕಾಣುವುವು ಸರ್ವೇಶ್ವರನ ಮಹಿಮೆಯನು ನೋಡುವುವು ಇವೆಲ್ಲ ನಮ್ಮ ದೇವರ ವೈಭವವನು.
3ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ ನಡುಗುವ ಕಾಲುಗಳನ್ನು ದೃಢಗೊಳಿಸಿರಿ.
4ಚಂಚಲ ಹೃದಯರಿಗೆ ಹೀಗೆಂದು ಹೇಳಿ : “ಭಯಪಡಬೇಡಿ; ಎದೆಗುಂದಬೇಡಿ; ಬರುವನು ಆ ದೇವನು ಮುಯ್ಯಿತೀರಿಸಲು ಬರುವನು ಆ ದೇವನು ಪ್ರತೀಕಾರವೆಸಗಲು ತಾನೇ ಬರುವನು ನಿಮ್ಮನ್ನು ರಕ್ಷಿಸಲು.”
5ಕುರುಡರ ಕಣ್ಣು ಕಾಣುವುದಾಗ ಕಿವುಡರ ಕಿವಿ ತೆರೆಯುವುದಾಗ.
6ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ. ಒರತೆಗಳು ಒಡೆಯುವುವು ಅರಣ್ಯದಲಿ ನದಿಗಳು ಹುಟ್ಟಿಹರಿಯುವುವು ಒಣನೆಲದಲಿ.
7ಸರೋವರವಾಗುವುದಾ ಉರಿಗಾಡು ಬುಗ್ಗೆಯಾಗುವುದಾ ಬುವಿ ಬರಡು. ನರಿಗಳು ನಿವಾಸಿಸುವ ಗುಹೆಗಳು ಆಗುವುವು ಹುಲುಸಾದ ಹುಲ್ಲುಗಾವಲುಗಳು.
8ಅಲ್ಲಿರುವುದೊಂದು ರಾಜಮಾರ್ಗ ಅದೆನಿಸಿಕೊಳ್ಳುವುದು ಪವಿತ್ರಮಾರ್ಗ ನಡೆಯನು ಅದರೊಳು ಪಾಪಾತ್ಮನು; ಅದಾಗುವುದು ಜನರಿಗೆ ಮೀಸಲು ದಾರಿತಪ್ಪನು ಅಲ್ಲಿ ನಡೆಯುವ ಮೂಢನು.
9ಅಲ್ಲಿರದು ಸಿಂಹ ಸಿಂಹಿಣಿ, ಅಲ್ಲಿ ಸೇರದು ಕ್ರೂರ ಪ್ರಾಣಿ. ಕಾಣಸಿಗದಲ್ಲಿ ಇದಾವ ಹಾನಿ, ಪಾಪವಿಮುಕ್ತರೇ ನಡೆವರಲ್ಲಿ.
10ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖದುಗುಡದ ಕಹಿ.