ಹಳೆಯ ಒಡಂಬಡಿಕೆKNCL
1ಇಗೋ, ರಾಜನೊಬ್ಬನು ನೀತಿಗನುಸಾರ ರಾಜ್ಯವಾಳುವನು. ದೇಶಾಧಿಪತಿಗಳು ನ್ಯಾಯದಿಂದ ದೊರೆತನಮಾಡುವರು.
2ಪ್ರತಿಯೊಬ್ಬನೂ ಬಿರುಗಾಳಿಗೆ ತಡೆಯಂತೆ, ಬಿರುಮಳೆಗೆ ಬಿಡಾರದಂತೆ, ಮರುಭೂಮಿಯಲ್ಲಿ ಜಲಧಾರೆಯಂತೆ, ಬೆಂಗಾಡಿನಲ್ಲಿ ಭಾರಿಬಂಡೆಯ ನೆರಳಿನಂತೆ ಇರುವನು.
3ಆಗ ನೋಡುವವರ ಕಣ್ಣು ಮಬ್ಬಾಗದು, ಕೇಳುವವರ ಕಿವಿ ಮಂದವಾಗದು.
4ಆತುರಗಾರರ ಬುದ್ಧಿ ಸಾವಧಾನದಿಂದ ಗ್ರಹಿಸುವುದು. ತೊದಲುಮಾತಿನವರ ನಾಲಿಗೆ ಸ್ವಚ್ಛವಾಗಿಯೂ ತ್ವರಿತವಾಗಿಯೂ ನುಡಿಯುವುದು.
5ಇನ್ನು ಮೇಲೆ ಮೂರ್ಖನು ಮಹಾತ್ಮನೆನಿಸಿಕೊಳ್ಳನು. ಕಳ್ಳನು ಒಳ್ಳೆಯವನೆನಿಸಿಕೊಳ್ಳನು.
6ಮೂರ್ಖನು ಆಡುವುದು ಕೆಡುಕನ್ನೇ, ಅವನು ಮಾಡುವುದು ಅಧರ್ಮವನ್ನೇ, ನುಡಿಯುವುದು ಸರ್ವೇಶ್ವರ ಸ್ವಾಮಿಗೆ ವಿರುದ್ಧವಾದ ಅಸತ್ಯವನ್ನೇ. ಆತ ಹಸಿದವರಿಗೆ ಆಹಾರವನ್ನು ಕೊಡುವುದಿಲ್ಲ. ಬಾಯಾರಿದವರಿಗೆ ನೀರನ್ನು ಕೊಡಿಸುವುದಿಲ್ಲ.
7ಕಳ್ಳನ ಸಾಧನಗಳು ಕೆಟ್ಟವುಗಳೇ. ಅವನ ಯೋಜನೆಗಳು ಅಬದ್ಧವಾದುವೇ. ದೀನದಲಿತರ ಕೋರಿಕೆಗಳು ನ್ಯಾಯಬದ್ಧವಾಗಿದ್ದರೂ ಸುಳ್ಳುಮಾತುಗಳಿಂದ ಅವರನ್ನು ಹಾಳುಮಾಡುತ್ತಾನೆ.
8ಆದರೆ ಧರ್ಮವಂತನು ಮಹತ್ಕಾರ್ಯಗಳಲ್ಲಿಯೇ ನಿರತನಾಗಿರುತ್ತಾನೆ.
9ಸುಖಜೀವಿಗಳಾದ ಮಹಿಳೆಯರೇ, ಏಳಿ ನನ್ನ ಮಾತನ್ನು ಕೇಳಿ. ನಿಶ್ಚಿಂತೆಯಿಂದಿರುವ ಯುವತಿಯರೇ, ನನ್ನ ಧ್ವನಿಗೆ ಕಿವಿಗೊಡಿ.
10ಈಗ ಸುಖವಾಗಿ ಕುಳಿತಿದ್ದೀರಿ, ನಿಶ್ಚಿಂತೆಯಿಂದಿದ್ದೀರಿ. ಇನ್ನು ಒಂದು ವರ್ಷದ ಮೇಲೆ ಕೆಲವು ದಿನಗಳಲ್ಲಿ ಕಳವಳಗೊಳ್ಳುವಿರಿ. ಏಕೆಂದರೆ, ಆಗ ದ್ರಾಕ್ಷೆಯ ಕೊಯಿಲು ನಿಂತುಹೋಗುವುದು. ಯಾವ ಬೆಳೆಯೂ ನಿಮಗೆ ದಕ್ಕದು.
11ಸುಖವಾಗಿರುವವರೇ, ಗಡಗಡನೆ ನಡುಗಿರಿ. ನಿಶ್ಚಿಂತರಾಗಿರುವವರೇ, ಕಳವಳಗೊಳ್ಳಿರಿ. ನಿಮ್ಮ ಬಟ್ಟೆಗಳನ್ನು ಕಿತ್ತುಹಾಕಿ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಳ್ಳಿರಿ.
12ಎದೆ ಬಡಿದುಕೊಂಡು ಗೋಳಾಡಿರಿ. ಏಕೆಂದರೆ ಹುಲುಸಾದ ಹೊಲಗಳು ಫಲವತ್ತಾದ ದ್ರಾಕ್ಷಾತೋಟಗಳು ನಾಶವಾಗಿವೆ.
13ನನ್ನ ಜನರ ಹೊಲಗದ್ದೆಗಳಲ್ಲಿ ಮುಳ್ಳುಪೊದರುಗಳು ಹುಟ್ಟಿಕೊಂಡಿವೆ. ಉಲ್ಲಾಸದಿಂದ ಕೂಡಿದ್ದ ಮನೆಗಳೂ ಲವಲವಿಕೆಯಿಂದ ತುಂಬಿದ್ದ ನಗರಗಳೂ ಶೂನ್ಯವಾಗಿವೆ, ಅರಮನೆ ಪಾಳುಬಿದ್ದಿದೆ.
14ಗಿಜಿಗುಟ್ಟುವ ಪಟ್ಟಣವು ನಿರ್ಜನವಾಗುವುದು; ಓಫೆಲ್ ಗುಡ್ಡವು, ಕೀಸ್ ಕೋವರವು ಶಾಶ್ವತವಾಗಿ ಗುಹೆಗಳಾಗುವುವು. ಕಾಡುಕತ್ತೆಗಳಿಗೆ ಬಯಲಾಗಿಯೂ ದನಕರುಗಳಿಗೆ ಹುಲ್ಲುಗಾವಲುಗಳಾಗಿಯೂ ಇರುವುವು.
15ಆದರೆ ದೇವರು ಉನ್ನತಲೋಕದಿಂದ ತಮ್ಮ ಪವಿತ್ರಾತ್ಮ ಧಾರೆಯನ್ನು ನಮ್ಮ ಮೇಲೆ ಸುರಿಯುವರು; ಆಗ ಪಾಳುಭೂಮಿ ಫಲಭರಿತ ಭೂಮಿಯಾಗುವುದು; ಫಲಭರಿತ ಭೂಮಿ ಸಮೃದ್ಧ ಅರಣ್ಯವಾಗಿ ಮಾರ್ಪಡುವುದು.
16ಸತ್ಯಸಂಧತೆ ಕಾಡುಮೇಡೆನ್ನದೆ ಎಲ್ಲೆಡೆ ನೆಲೆಗೊಳ್ಳುವುದು. ಸರ್ವರೂ ಸತ್ಯಸಂಧರಾಗಿರುವುದರಿಂದ ಸಮಾಧಾನ ನೆಲೆಗೊಳ್ಳುವುದು.
17ಆ ಸತ್ಯಸಂಧತೆಯಿಂದ ಚಿರಶಾಂತಿ ಮತ್ತು ಸುಭದ್ರತೆ ಪರಿಣಮಿಸುವುದು.
18ನನ್ನ ಜನರು ಶಾಂತಿಸದನಗಳಲ್ಲಿಯೂ ನಿರ್ಭಯವಾದ ನಿಲಯಗಳಲ್ಲಿಯೂ ನೆಮ್ಮದಿಯಾಗಿರುವ ಆಶ್ರಯಗಳಲ್ಲಿಯೂ ನೆಲೆಗೊಳ್ಳುವರು.
19ಕಲ್ಮಳೆ ಸುರಿದು ಕಾಡು ಹಾಳಾದರೂ ಶತ್ರುಗಳ ಪಟ್ಟಣವು ನೆಲಸಮವಾದರೂ ನೀವು ಸಂತೋಷದಿಂದ ಬಾಳುವಿರಿ.
20ನೀರಿರುವ ಕಡೆಗಳಲ್ಲೆಲ್ಲಾ ಬಿತ್ತನೆಮಾಡುವಿರಿ. ದನಕತ್ತೆಗಳನ್ನು ಇಷ್ಟಬಂದ ಹಾಗೆ ಮೇಯಲು ಬಿಡುವಿರಿ.