ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಶಾಯನ ಗ್ರಂಥ 31

1ಇಸ್ರಯೇಲರ ಪರಮಪಾವನ ಸ್ವಾಮಿಯನ್ನು ಆಶ್ರಯಿಸದೆ, ಸಹಾಯಕ್ಕಾಗಿ ಈಜಿಪ್ಟಿಗೆ ತೆರಳುವವರಿಗೆ ಧಿಕ್ಕಾರ ! ಅವರಿಗೆ ಬೇಕು ಆ ನಾಡಿನ ಅಶ್ವಬಲ, ರಥಗಳ ಸಂಖ್ಯಾಬಲ, ಸವಾರರ ಶೌರ್ಯ.

2ಆದರೆ ಸರ್ವೇಶ್ವರ ಸ್ವಾಮಿ ಬುದ್ಧಿವಂತರು, ಆಡಿದ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳದವರು, ಕೇಡನ್ನು ಬರಮಾಡಬಲ್ಲವರು. ಕೆಡುಕರ ಕೊಂಪೆಗೂ ದುರುಳರ ಸಹಾಯಕರಿಗೂ ವಿರುದ್ಧವಾಗಿ ನಿಲ್ಲಬಲ್ಲವರು.

3ಈಜಿಪ್ಟಿನವರು ಕೇವಲ ಮನುಷ್ಯರೇ ಹೊರತು ದೇವರಲ್ಲ. ಅವರ ಅಶ್ವಗಳು ಮೂಳೆಮಾಂಸವೇ ಹೊರತು ಆಧ್ಯಾತ್ಮಿಕ ದಿವ್ಯಶಕ್ತಿಯಲ್ಲ. ಸರ್ವೇಶ್ವರ ಕೈಯೆತ್ತುವಾಗ ಅದಕ್ಕೆ ವಿರುದ್ಧ ಸಹಾಯ ಮಾಡಿದ ಅವನು ಮುಗ್ಗರಿಸುವನು. ಆ ಸಹಾಯ ಪಡೆದ ಅವನು ಬಿದ್ದುಹೋಗುವನು. ಎಲ್ಲರೂ ಒಟ್ಟಿಗೆ ಅಳಿದುಹೋಗುವರು.

4ಸರ್ವೇಶ್ವರ ನನಗೆ ಹೀಗೆಂದು ಹೇಳಿದ್ದಾರೆ : “ಸಿಂಹವೋ ಪ್ರಾಯದ ಸಿಂಹವೋ ಬೇಟೆಯ ಮೇಲೆ ಬಿದ್ದು ಗುರುಗುಟ್ಟುತ್ತಿರುವಾಗ, ಆ ಕೂಗನ್ನು ಕೇಳಿ ಕುರುಬರನೇಕರು ಕೂಡಿಬಂದರೂ ಅದು ಅವರ ಕೂಗಾಟಕ್ಕೆ ಹೆದರದು, ಅವರ ಗದ್ದಲಕ್ಕೆ ಎದೆಗುಂದದು. ಅಂತೆಯೇ ಸೇನಾಧೀಶ್ವರ ಸರ್ವೇಶ್ವರ ಸ್ವಾಮಿ ಆದ ನಾನು ಯುದ್ಧಮಾಡಲು ಸಿಯೋನ್ ಶಿಖರದ ಮೇಲೆ ಇಳಿದು ಬರುವಾಗ ನನ್ನನ್ನು ಯಾರೂ ಹೆದರಿಸುವುದಿಲ್ಲ, ಎದೆಗುಂದಿಸುವಂತಿಲ್ಲ.

5ಹಕ್ಕಿಗಳು ಹಾರಾಡುತ್ತಾ ತನ್ನ ಮರಿಗಳನ್ನು ಕಾಪಾಡುವಂತೆ, ಸೇನಾಧೀಶ್ವರ ಸರ್ವೇಶ್ವರನಾದ ನಾನು ಜೆರುಸಲೇಮನ್ನು ಕಾಪಾಡುವೆನು. ಅದನ್ನು ಸಂರಕ್ಷಿಸಿ ಕಾಯುವೆನು, ಅಪಾಯದಿಂದ ತಪ್ಪಿಸುವೆನು.”

6ಸರ್ವೇಶ್ವರ ಇಂತೆಂದರು : “ಇಸ್ರಯೇಲಿನ ಜನರೇ, ನೀವು ನನಗೆ ದೊಡ್ಡ ದ್ರೋಹಮಾಡಿದಿರಿ. ಈಗಲಾದರೂ ನನ್ನ ಕಡೆಗೆ ತಿರುಗಿಕೊಳ್ಳಿರಿ.

7ನೀವು ಪಾಪಕಳಂಕಿತವಾದ ನಿಮ್ಮ ಕೈಯಿಂದ ನಿರ್ಮಿಸಿರುವ ಬೆಳ್ಳಿಬಂಗಾರದ ವಿಗ್ರಹಗಳನ್ನು ಎತ್ತಿ ಬಿಸಾಡುವ ದಿನ ಬರಲಿದೆ.

8ಆ ಅಸ್ಸೀರಿಯಾದವರು ಕತ್ತಿಯಿಂದ ಹತರಾಗುವರು, ಮನುಷ್ಯರ ಕತ್ತಿಯಿಂದಲ್ಲ; ಖಡ್ಗವು ಅವರನ್ನು ಕಬಳಿಸುವುದು, ಅದು ಮಾನವ ಖಡ್ಗವಲ್ಲ. ಅವರು ಕತ್ತಿಗೆ ಹೆದರಿ ಓಡುವರು. ಅವರ ಯುವಕರು ಗುಲಾಮರಾಗುವರು.

9ಅವರಿಗೆ ಆಶ್ರಯ ನೀಡಿದವನು, ಭಯದಿಂದ ಪಲಾಯನ ಮಾಡಿಬಿಡುವನು, ಅವರ ದಳಪತಿಗಳು ಧ್ವಜವನ್ನೇ ಬಿಟ್ಟು ದಿಕ್ಕುಪಾಲಾಗುವರು.” ಇದು ಸರ್ವೇಶ್ವರ ಸ್ವಾಮಿಯ ನುಡಿ. ಪ್ರಭುವಿನ ಅಗ್ನಿ ಇರುವುದು ಸಿಯೋನಿನಲ್ಲಿ, ಅವರ ಅಗ್ನಿಕುಂಡ ಜೆರುಸಲೇಮಿನಲ್ಲಿ.