ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಶಾಯನ ಗ್ರಂಥ 27

1ಆ ದಿನದಂದು ಸರ್ವೇಶ್ವರ ಸ್ವಾಮಿ ತಮ್ಮ ಘೋರವಾದ, ಕ್ರೂರವಾದ, ಮಾರಕವಾದ ಖಡ್ಗದಿಂದ ವೇಗವಾಗಿ ಧಾವಿಸುವ ಹಾಗೂ ಡೊಂಕಾಗಿ ಹರಿಯುವ ಸರ್ಪವನ್ನು ಹೊಡೆಯುವರು. ಮಹಾನದಿಯಲ್ಲಿನ ಘಟಸರ್ಪವನ್ನು ಸಹ ಕೊಂದುಹಾಕುವರು.

2ಆ ದಿನದಲ್ಲಿ ಪೇಳ್ವರು ಸರ್ವೇಶ್ವರ : “ಇಗೋ, ನನ್ನ ವಿಹಾರದ ದ್ರಾಕ್ಷಾವನ, ಇದ ಕುರಿತು ಹಾಡಿರಿ ಒಂದು ಗಾನ.

3ಸರ್ವೇಶ್ವರನಾದ ನಾನೇ ಇದರ ತೋಟಗಾರ, ಕ್ಷಣಕ್ಷಣಕ್ಕೂ ಇದಕೆ ಹೊಯ್ಯುವೆ ನೀರ, ಇದನ್ನಾದರೂ ಮುಟ್ಟದಂತೆ ಕಾಯುವೆ ನಿರಂತರ.

4ಇದರ ಬಗ್ಗೆ ನನಗೆ ಇನ್ನಿಲ್ಲ ರೌದ್ರ, ಇದರೊಳಗಿಲ್ಲ ಮುಳ್ಳುಕಳ್ಳಿಗಳ ಗಹ್ವರ, ಇದ್ದಿದ್ದರೆ ಸುಟ್ಟು ಭಸ್ಮ ಮಾಡುತ್ತಿದ್ದೆ ಹೂಡಿ ಸಮರ.

5ಬೇಡವಾದರೆ ಆ ವೈರಿಗಳು ಶರಣಾಗತರಾಗಲಿ, ಬರಲಿ ನನ್ನ ಸಂಗಡ ಸಂಧಾನಕೆ, ಹೌದು, ಬರಲಿ ನನ್ನೊಡನೆ ಸಂಧಾನಕೆ.

6ಮುಂಬರುವ ಕಾಲದಲಿ ಬೇರೂರುವುದು ಯಕೋಬ ಸಂತಾನ. ಚಿಗುರಿ ಹೂ ಬಿಡುವುದು ಇಸ್ರಯೇಲ್ ಮನೆತನ, ಆ ವೃಕ್ಷಫಲದಿಂದ ತುಂಬಿರುವುದು ಜಗದೆಲ್ಲ ಜನ.

7ಸರ್ವೇಶ್ವರ ತಮ್ಮ ಪ್ರಜೆಯ ಘಾತುಕರನ್ನು ದಂಡಿಸಿದಷ್ಟು ತಮ್ಮ ಪ್ರಜೆಯನ್ನು ದಂಡಿಸಲಿಲ್ಲ. ಘಾತುಕರಿಗಾದ ಪ್ರಾಣನಷ್ಟ ತಮ್ಮ ಪ್ರಜೆಗೆ ಆಗಲಿಲ್ಲ.

8ಆದರೂ ಸರ್ವೇಶ್ವರ ತಮ್ಮ ಪ್ರಜೆಗೆ ಗಡೀಪಾರು ಶಿಕ್ಷೆಯನ್ನು ವಿಧಿಸಿದರು. ದೂರದ ಮೂಡಣ ಬಿರುಗಾಳಿಯ ಬಡಿತಕ್ಕೆ ಗುರಿಮಾಡಿ ಅವರನ್ನು ತೊಲಗಿಸಿದರು.

9ಇಂತಿರಲು ಯಕೋಬ್ಯರ ಅಧರ್ಮಕ್ಕೆ ಪ್ರಾಯಶ್ಚಿತ್ತವಾಗಬೇಕಾದರೆ, ಅವರ ಪಾಪಪರಿಹಾರವನ್ನು ಸೂಚಿಸುವ ಪೂರ್ಣಫಲ ದೊರಕಬೇಕಾದರೆ, ಅವರ ವಿಗ್ರಹಾರಾಧಕ ಬಲಿಪೀಠದ ಕಲ್ಲುಗಳೆಲ್ಲ ಸುಣ್ಣದಂತೆ ಪುಡಿಪುಡಿ ಆಗಬೇಕು; ಆಶೇರಾ ಎಂಬ ವಿಗ್ರಹಸ್ತಂಭಗಳನ್ನೂ ಸೂರ್ಯಸ್ತಂಭಗಳನ್ನೂ ಪ್ರತಿಷ್ಠಾಪಿಸುವುದು ಇನ್ನು ನಿಲ್ಲಬೇಕು.

10ಕೋಟೆಕೊತ್ತಲಗಳಿಂದ ಕೂಡಿದ ಪಟ್ಟಣ ಪಾಳುಬಿದ್ದಿದೆ; ಕಾಡಿನಂತೆ ನಿರ್ಜನಪ್ರದೇಶವಾಗಿದೆ. ದನಕರುಗಳು ಮೇದು ಮಲಗುವ ಗೋಮಾಳವಾಗಿದೆ.

11ಮರಗಳ ರೆಂಬೆಕೊಂಬೆಗಳು ಒಣಗಿ ಮುರಿದುಹೋಗಿವೆ. ಹೆಂಗಸರ ಕೈಗೆ ಒಲೆಪಾಲಾಗುವ ಸೌದೆಯಾಗಿವೆ. ಈ ಪ್ರಜೆಗಳು ಮಂದಮತಿಗಳೇ ಸರಿ. ಈ ಕಾರಣ, ಸೃಷ್ಟಿಕರ್ತನು ಇವರನ್ನು ಕರುಣಿಸನು. ನಿರ್ಮಿಸಿದಾತನು ಇವರಿಗೆ ದಯೆ ತೋರಿಸನು.

12ಇಸ್ರಯೇಲಿನ ಜನರೇ, ದಿನವು ಬರಲಿದೆ. ಆಗ ಯೂಫ್ರೆಟಿಸ್ ನದಿಯಿಂದ ಈಜಿಪ್ಟ್ ದೇಶದ ನದಿಯವರೆಗೆ, ಸರ್ವೇಶ್ವರ ತೆನೆಗಳನ್ನು ಒಕ್ಕಣೆಮಾಡುವರು. ಆಗ ನಿಮ್ಮನ್ನು ಒಬ್ಬೊಬ್ಬರನ್ನಾಗಿ ಬೇರ್ಪಡಿಸಿ ಆಯ್ಕೆಮಾಡುವರು.

13ಆ ದಿನ ಬಂದಾಗ, ಮಹಾ ತುತೂರಿಯೊಂದನ್ನು ಊದಲಾಗುವುದು. ಗಡೀಪಾರಾಗಿ ಚದುರಿಹೋಗಿರುವ ಇಸ್ರಯೇಲರನ್ನು ಅಸ್ಸೀರಿಯದಿಂದಲೂ ಈಜಿಪ್ಟಿನಿಂದಲೂ ಕರೆಯಲಾಗುವುದು. ಅವರೆಲ್ಲರೂ ಜೆರುಸಲೇಮಿಗೆ ಬಂದು ಪವಿತ್ರಪರ್ವತದ ಮೇಲೆ ಸರ್ವೇಶ್ವರ ಸ್ವಾಮಿಗೆ ಅಡ್ಡಬೀಳುವರು, ಆರಾಧನೆಮಾಡುವರು.