ಹಳೆಯ ಒಡಂಬಡಿಕೆKNCL
1ಅಸ್ಸೀರಿಯಾದ ಅರಸನಾದ ಸರ್ಗೋನನು ಕಳುಹಿಸಿದ ದಳಪತಿ, ಫಿಲಿಷ್ಟಿಯರ ಪಟ್ಟಣವಾದ ಅಷ್ಡೋದಿಗೆ ಬಂದು ಅದನ್ನು ಮುತ್ತಿ ಆಕ್ರಮಿಸಿಕೊಂಡನು.
2ಅದಕ್ಕೆ ಮೂರು ವರ್ಷಗಳಿಗೆ ಮುಂಚೆಯೆ ಆಮೋಚನ ಮಗ ಯೆಶಾಯನಿಗೆ ಸರ್ವೇಶ್ವರ ಮುನ್ಸೂಚನೆಯಾಗಿ ಹೀಗೆಂದು ಹೇಳಿದ್ದರು : “ಎದ್ದೇಳು, ಸೊಂಟಕ್ಕೆ ಕಟ್ಟಿರುವ ಗೋಣಿತಟ್ಟನ್ನು ಬಿಚ್ಚು, ಕಾಲಿಗೆ ಹಾಕಿರುವ ಕೆರವನ್ನು ಕಳಚು.” ಅಂತೆಯೇ ಯೆಶಾಯನು ದಿಗಂಬರನಾಗಿ ಬರಿಗಾಲಿನಲ್ಲೇ ತಿರುಗಾಡುತ್ತಿದ್ದನು.
3ಆಗ ಸರ್ವೇಶ್ವರ : “ನನ್ನ ದಾಸ ಯೆಶಾಯನು ಈಜಿಪ್ಟಿನ ಮತ್ತು ಸುಡಾನಿನ [1] ವಿನಾಶಕ್ಕೆ ಸೋಜಿಗದ ಗುರುತಾಗಿ ಮೂರು ವರ್ಷ ಬಟ್ಟೆಯಿಲ್ಲದೆ ಬರಿಗಾಲಿನಲ್ಲಿ ತಿರುಗಾಡಿದನು.
4ಅದೇ ಪ್ರಕಾರ ಅಸ್ಸೀರಿಯದ ಅರಸನು ಈಜಿಪ್ಟಿನ ಸೆರೆಯಾಳುಗಳನ್ನೂ ಸುಡಾನಿನ ಕೈದಿಗಳನ್ನೂ - ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರನ್ನೂ ಬಟ್ಟೆಯಿಲ್ಲದೆ ಬೆತ್ತಲೆಯಾಗಿಸಿ, ಬರಿಗಾಲಿನಲ್ಲೇ ಸೆರೆಮನೆಗೆ ನಡೆಯುವಂತೆ ಮಾಡುವನು. ಹೀಗೆ ಈಜಿಪ್ಟಿನ ನಿವಾಸಿಗಳನ್ನು ಮಾನಭಂಗಕ್ಕೆ ಗುರಿಪಡಿಸುವನು.
5ಸುಡಾನನ್ನು ನೆಚ್ಚಿಕೊಂಡಿದ್ದವರು ಮತ್ತು ಈಜಿಪ್ಟನ್ನು ಕುರಿತು ಕೊಚ್ಚಿಕೊಳ್ಳುತ್ತಿದ್ದವರು ನಾಚಿಕೆಪಟ್ಟು ನಿರಾಶೆಗೊಳ್ಳುವರು.
6ಆ ದಿನದಂದು (ಫಿಲಿಷ್ಟಿಯದ) ಕರಾವಳಿಯಲ್ಲಿ ವಾಸಿಸುವರು. ‘ಅಯ್ಯೋ ಅಸ್ಸೀರಿಯರ ಅರಸನಿಂದ ನಾವು ಬಿಡುಗಡೆಯಾಗಬೇಕೆಂದು ಯಾರ ಆಶ್ರಯವನ್ನು ನಿರೀಕ್ಷಿಸಿಕೊಂಡಿದ್ದೇವೋ ಅವರಿಗೇ ಈ ಗತಿ ಬಂತಲ್ಲಾ; ಇನ್ನು ನಮ್ಮಂಥವರು ಉದ್ಧಾರವಾಗುವುದು ಹೇಗೆ?’ ಎಂದುಕೊಳ್ಳುವರು.”