ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಶಾಯನ ಗ್ರಂಥ 18

1ಎಥಿಯೋಪಿಯದ [1] ನದಿಗಳಾಚೆ ಇರುವ ಸೀಮೆಗೆ ಧಿಕ್ಕಾರ ! ರೆಕ್ಕೆಗಳನ್ನು ಪಟಪಟನೆ ಬಡಿಯುವ ಮಿಡತೆಗಳಿಂದ ಕೂಡಿರುವ ನಾಡಿಗೆ ಧಿಕ್ಕಾರ !

2ಜೊಂಡು ಮರದ ದೋಣಿಗಳಲ್ಲಿ ನೈಲುನದಿಯ ಮಾರ್ಗವಾಗಿ, ರಾಯಭಾರಿಗಳನ್ನು ಕಳುಹಿಸುವ ಆ ದೇಶಕ್ಕೆ ಧಿಕ್ಕಾರ ! ಶೀಘ್ರವಾಗಿ ಬರುತ್ತಿರುವ ದೂತರೇ, ಹಿಂದಕ್ಕೆ ಹೋಗಿ, ಎತ್ತರವಾದ ನುಣುಪಾದ ಮೈಕಟ್ಟುಳ್ಳ, ಸರ್ವರಿಗೂ ಭಯಪ್ರದರಾಗಿರುವ, ಪ್ರಬಲ ಆಕ್ರಮಣಕಾರಿಗಳೂ ಆದ, ನದಿಗಳಿಂದ ಸೀಳಿಹೋಗಿರುವ ರಾಷ್ಟ್ರದವರ ಬಳಿಗೆ ತೆರಳಿ.

3ಸಮಸ್ತ ಭೂನಿವಾಸಿಗಳೇ, ಜಗದ ಸಕಲ ಜನಾಂಗಗಳೇ, ಕೇಳಿ : ಬೆಟ್ಟಗಳ ಮೇಲೆ ಧ್ವಜಾರೋಹಣ ಮಾಡುವಾಗ ಕಣ್ಣಿಟ್ಟು ನೋಡಿ, ತುತೂರಿಯನ್ನು ಊದುವಾಗ ಕಿವಿಗೊಟ್ಟು ಕೇಳಿ,

4ಸರ್ವೇಶ್ವರ ನನಗೆ ಹೀಗೆಂದು ಹೇಳಿದ್ದಾರೆ : “ಬಿಸಿಹಗಲಿನ ಸೂರ್ಯನಂತೆ, ಕೊಯಿಲುಗಾಲದಲ್ಲಿರುವ ಮಂಜಿನಂತೆ, ನಾನು ನನ್ನ ನಿವಾಸಸ್ಥಾನದಿಂದ ಸುಮ್ಮನೆ ನೋಡುತ್ತಿರುವೆನು.”

5ಗಿಡದಲ್ಲಿ ಮೊಗ್ಗು ಕಚ್ಚಿ, ಹೂ ಅರಳಿ, ಹೀಚು ದೋರೆಗಾಯಿಯಾಗುತ್ತಿರುವಾಗ, ಕೊಯಿಲು ಕಾಲಕ್ಕೆ ಮುಂಚೆಯೇ ಅದರ ಕೊಂಬೆಗಳನ್ನೂ ಕವಲುಗಳನ್ನೂ ಶತ್ರುಗಳು ಕತ್ತರಿಸಿಹಾಕುವರು.

6ಹೀಗೆ ಕಡಿಯಲ್ಪಟ್ಟವರ ಶವಗಳೆಲ್ಲ ರಣಹದ್ದುಗಳ ಮತ್ತು ಕಾಡುಮೃಗಗಳ ಪಾಲಾಗುವುವು; ಪಕ್ಷಿಗಳಿಗೆ ಬೇಸಿಗೆಯ ಆಹಾರವಾಗುವುವು, ಪ್ರಾಣಿಗಳಿಗೆ ಚಳಿಗಾಲದ ಉಣಿಸಾಗುವುವು.

7ಆಗ ಎತ್ತರವಾದ, ನುಣುಪಾದ ಮೈಕಟ್ಟುಳ್ಳ, ಸರ್ವರಿಗೂ ಭಯಪ್ರದರಾದ, ಪ್ರಬಲ ಆಕ್ರಮಣಕಾರಿಗಳಾದ, ನದಿಗಳಿಂದ ಸೀಳಿಹೋಗಿರುವ ರಾಷ್ಟ್ರದವರು ಸರ್ವೇಶ್ವರ ಸ್ವಾಮಿಯ ಹೆಸರಾಂತ ಸಿಯೋನ್ ಪರ್ವತಕ್ಕೆ ಬರುವರು. ಸೇನಾಧೀಶ್ವರ ಸರ್ವೇಶ್ವರ ಅವರಿಂದ ಕಾಣಿಕೆಗಳನ್ನು ಸ್ವೀಕರಿಸುವರು.