ಹಳೆಯ ಒಡಂಬಡಿಕೆKNCL
1ಆ ದಿನದಂದು ಹಾಡುವುದು ಜನತೆ ಹೀಗೆಂದು : “ಹೇ ಸರ್ವೇಶ್ವರಾ, ನಿನಗೆನ್ನ ವಂದನ; ನಿನಗಿತ್ತು ಎನ್ನ ಮೇಲೆ ಕೋಪ ಮನ. ಆದರೆ ಅದೀಗ ಆಗಿದೆ ಶಮನ, ಬಂದಿತೆನ್ನ ಮನಕೆ ಸಾಂತ್ವನ.
2ದೇವರೇ ಉದ್ಧಾರಕನೆನಗೆ ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ. ದೇವಾದಿದೇವನೇ ಎನಗೆ ಶಕ್ತಿ ಆತನೆನ್ನ ಕೀರ್ತನೆಯ ವ್ಯಕ್ತಿ ತಂದಿಹನಾತ ಎನಗೆ ಮುಕ್ತಿ.”
3ಉದ್ಧರಿಸುವಾ ಒರತೆಗಳಿಂದ ಸೇದುವಿರಿ ನೀರನು ಹರುಷದಿಂದ.
4ಹೇಳುವಿರಿ ನೀವು ಆ ದಿನದಂದು ಈ ಪರಿ - “ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು ಸ್ಮರಿಸಿರಿ ಆತನ ಶ್ರೀನಾಮವನು ಸಾರಿರಿ ಜನತೆಗೆ ಆತನ ಕಾರ್ಯಗಳನು ಘೋಷಿಸಿರಿ ಆತನ ನಾಮಘನತೆಯನು.
5ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು ಎಸಗಿಹನಾತ ಮಹಿಮಾಕಾರ್ಯಗಳನು ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು.
6ಸಿಯೋನಿನ ನಿವಾಸಿಗಳೇ, ಹಾಡಿರಿ, ಮಾಡಿರಿ ಭಜನ ನಿಮ್ಮ ಮಧ್ಯೆಯಿರುವ ಆ ಘನವಂತನ ಇಸ್ರಯೇಲಿನಾ ಸ್ವಾಮಿ ಪರಮಪಾವನ.”