ಹಳೆಯ ಒಡಂಬಡಿಕೆKNCL

ಪ್ರವಾದಿ ಹೋಶೇಯನ ಗ್ರಂಥ ಹನ್ನೆರಡು ಮಂದಿ ಕಿರಿಯ ಪ್ರವಾದಿಗಳು 8

1“ತುತೂರಿಯನ್ನು ಎತ್ತಿಕೊಂಡು ಊದು. ಶತ್ರುಗಳು ಹದ್ದಿನಂತೆ ದೇವರ ಆಲಯದ ಮೇಲೆ ಎರಗಿಬರುತ್ತಿದ್ದಾರೆ. ಕಾರಣ - ಜನರು ನನ್ನ ಒಡಂಬಡಿಕೆಯನ್ನು ಮೀರಿದ್ದಾರೆ, ನನ್ನ ವಿಧಿನಿಯಮಗಳನ್ನು ಉಲ್ಲಂಘಿಸಿದ್ದಾರೆ.

2ನನ್ನನ್ನು ತಮ್ಮ ದೇವರೆಂದೂ ತಾವು ದೇವಜನರೆಂದೂ ನನ್ನನ್ನು ಅರಿತವರೆಂದೂ ಕೂಗಿಕೊಳ್ಳುತ್ತಾರೆ.

3ಆದರೆ ಈ ಇಸ್ರಯೇಲರು ಸತ್ಯವನ್ನು ತೊರೆದುಬಿಟ್ಟಿದ್ದಾರೆ. ಎಂತಲೇ ಶತ್ರುಗಳು ಅವರನ್ನು ಬೆನ್ನಟ್ಟಿಹೋಗುವರು.

4“ಅವರು ನನ್ನ ಅನುಮತಿ ಇಲ್ಲದೆ ಅರಸರನ್ನು ನೇಮಿಸಿಕೊಂಡಿದ್ದಾರೆ. ನನಗೆ ತಿಳಿಯದಂತೆ ಅಧಿಪತಿಗಳನ್ನು ಮಾಡಿಕೊಂಡಿದ್ದಾರೆ. ಬೆಳ್ಳಿಬಂಗಾರದ ವಿಗ್ರಹಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಮಾಡಿರುವುದೆಲ್ಲ ಅವರ ನಾಶಕ್ಕಾಗಿಯೇ.

5ಸಮಾರಿಯವೇ, ನೀನು ನಿರ್ಮಿಸಿಕೊಂಡಿರುವ ಬಸವನನ್ನು ಧಿಕ್ಕರಿಸಿದ್ದೇನೆ. ನನ್ನ ಕೋಪಾಗ್ನಿ ನಿನ್ನ ಮೇಲೆ ಉರಿದುಬರುತ್ತಿದೆ. ಈ ಜನರು ನಿರ್ಮಲರಾಗುವುದಕ್ಕೆ ಇನ್ನೆಷ್ಟುಕಾಲ ಹಿಡಿಯುವುದೋ?

6ಆ ಬಸವ ಇಸ್ರಯೇಲಿನ ಕೈಕೆಲಸವೇ. ಶಿಲ್ಪಿ ಕೊಟ್ಟ ರೂಪವದು; ಅದು ದೇವರಲ್ಲ. ಸಮಾರ್ಯದ ಬಸವನು ನುಚ್ಚುನೂರಾಗುವನು.

7ಇವರು ಗಾಳಿಯನ್ನು ಬಿತ್ತುತ್ತಾರೆ; ಬಿರುಗಾಳಿಯನ್ನು ಕೊಯ್ಯುತ್ತಾರೆ. ಅವರ ಪೈರು ತೆನೆಗೆ ಬಾರದು. ಕಾಳು ಮೊಳೆತರೂ ಕೂಳು ದೊರಕದು. ಒಂದು ವೇಳೆ ದೊರಕಿದರೂ ಅನ್ಯಜನರು ಅದನ್ನು ಕಬಳಿಸಿಬಿಡುವರು.

8ಇಸ್ರಯೇಲನ್ನು ಕಬಳಿಸಲಾಗಿದೆ. ಈಗದು ಅನ್ಯಜನಾಂಗಗಳ ಮಧ್ಯೆ ಯಾರಿಗೂ ಬೇಡವಾದ ಮಡಕೆಯಂತಿದೆ.

9ಅದು ಒಂಟಿಯಾಗಿ ಅಲೆಯುವ ಕಾಡುಕತ್ತೆಯಂತೆ ಅಸ್ಸೀರಿಯಕ್ಕೆ ಹೋಗಿದೆ; ಎಫ್ರಯಿಮ್ ಕಾಮುಕರಿಗೆ ತನ್ನನ್ನೇ ಮಾರಿಕೊಂಡಿದೆ.

10ಹಣ ತೆತ್ತು ಅನ್ಯರಾಷ್ಟ್ರಗಳೊಡನೆ ಮೈತ್ರಿಬೆಳೆಸಿಕೊಂಡಿದ್ದರೂ ನಾನು ಶೀಘ್ರದಲ್ಲಿ ಅದನ್ನು ಸೆರೆಗೂಡಿಸಲಿರುವೆನು. ಅಸ್ಸೀರಿಯದ ರಾಜಾಧಿರಾಜನು ಹೊರಿಸುವ ಹೊರೆಯಿಂದ ಅದು ಕುಗ್ಗಿಹೋಗಲಿದೆ.

11“ಎಫ್ರಯಿಮ್ ಪಾಪಪರಿಹಾರಕ್ಕಾಗಿ ಬಲಿಪೀಠಗಳನ್ನು ಕಟ್ಟಿದೆ. ಆ ಬಲಿಪೀಠಗಳೇ ಅದರ ಪಾಪಕ್ಕೆ ಕಾರಣವಾಗಿ ಪರಿಣಮಿಸಿವೆ.

12ನಾನು ನನ್ನ ಧರ್ಮವನ್ನು ಲಕ್ಷಾಂತರ ವಿಧಿಗಳ ರೂಪದಲ್ಲಿ ಬರೆದುಕೊಟ್ಟರೂ ಅವುಗಳು ತನಗೆ ಪರಕೀಯವೆಂದು ಭಾವಿಸುತ್ತದೆ.

13ಎಫ್ರಯಿಮಿನವರು ಬಲಿಪಶುಗಳನ್ನು ನನಗೆ ನೈವೇದ್ಯವಾಗಿ ವಧಿಸುತ್ತಾರೆ, ವಧಿಸಿದ್ದನ್ನು ಭುಜಿಸುತ್ತಾರೆ. ಆದರೆ ಆ ಬಲಿಗಳನ್ನು ನಾನು ಮೆಚ್ಚುವುದಿಲ್ಲ. ಅವರ ಅಧರ್ಮವನ್ನು ನೆನಪಿಗೆ ತಂದುಕೊಂಡು ಅವರ ಪಾಪಕ್ಕೆ ತಕ್ಕ ದಂಡನೆಯನ್ನು ವಿಧಿಸುವೆನು. ಆ ಜನರು ಈಜಿಪ್ಟಿಗೆ ಹಿಂದಿರುಗಬೇಕಾಗುವುದು.

14“ಇಸ್ರಯೇಲ್ ತನ್ನ ಸೃಷ್ಟಿಕರ್ತನನ್ನು ಮರೆತು ಅರಮನೆಗಳನ್ನು ಕಟ್ಟಿಕೊಂಡಿದೆ. ಜುದೇಯವು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ನಿರ್ಮಿಸಿಕೊಂಡಿದೆ. ಆದರೆ ನಾನು ಆ ಪಟ್ಟಣಗಳ ಮೇಲೆ ಬೆಂಕಿಯನ್ನು ಕಾರುವೆನು. ಅದು ಆ ಸೌಧಗಳನ್ನು ನುಂಗಿಬಿಡುವುದು.”