ಹಳೆಯ ಒಡಂಬಡಿಕೆKNCL

ಪ್ರವಾದಿ ಹೋಶೇಯನ ಗ್ರಂಥ ಹನ್ನೆರಡು ಮಂದಿ ಕಿರಿಯ ಪ್ರವಾದಿಗಳು 5

1“ಯಾಜಕರೇ, ಕೇಳಿ: ಇಸ್ರಯೇಲ್ ಮನೆತನದವರೇ, ಗಮನಿಸಿ. ರಾಜವಂಶದವರೇ ಕಿವಿಗೊಡಿ.

2ನೀವು ಮಿಚ್ಪದಲ್ಲಿ ಉರುಲಾಗಿದ್ದೀರಿ. ತಾಬೋರಿನಲ್ಲಿ ಬಲೆಯಾಗಿದ್ದೀರಿ. ಶಿಟ್ಟಿಮಿನಲ್ಲಿ ಆಳವಾದ ಕಂದಕವನ್ನು ತೋಡಿದ್ದೀರಿ. ನಿಮ್ಮ ವಿರುದ್ಧ ತೀರ್ಪುಬಂದಿದೆ. ನಿಮ್ಮೆಲ್ಲರನ್ನು ಶಿಕ್ಷಿಸುವೆನು.

3ಎಫ್ರಯಿಮನ್ನು ಬಲ್ಲೆನು; ಇಸ್ರಯೇಲ್ ನನಗೆ ಕಣ್ಮರೆಯಾಗಿಲ್ಲ. ಎಫ್ರಯಿಮ್, ನೀನು ವ್ಯಭಿಚಾರಿಣಿಯಾಗಿರುವೆ. ಇಸ್ರಯೇಲ್, ನೀನು ಹೊಲಸಾಗಿರುವೆ.”

4ಅವರು ತಮ್ಮ ದೇವರ ಬಳಿಗೆ ಹಿಂದಿರುಗದಂತೆ ಅವರ ದುಷ್ಕೃತ್ಯಗಳು ಅವರಿಗೆ ಅಡ್ಡಿಯಾಗಿವೆ. ವ್ಯಭಿಚಾರ ಅವರಲ್ಲಿ ನೆಲೆಗೊಂಡಿದೆ. ಅವರು ಸರ್ವೇಶ್ವರನನ್ನು ಅರಿಯರು.

5ಇಸ್ರಯೇಲಿನ ಅಹಂಕಾರವೇ ಅದಕ್ಕೆ ವಿರುದ್ಧ ಸಾಕ್ಷಿ ನುಡಿಯುತ್ತದೆ. ಇಸ್ರಯೇಲ್ ಮತ್ತು ಎಫ್ರಯಿಮ್ ತಮ್ಮ ದುರ್ಮಾರ್ಗದಲ್ಲಿ ಮುಗ್ಗರಿಸಿ ಬೀಳುತ್ತವೆ. ಜುದೇಯವೂ ಅದರಂತೆಯೇ ಬೀಳಲಿದೆ.

6ಅವರು ತಮ್ಮ ದನಕುರಿಗಳೊಂದಿಗೆ ಸರ್ವೇಶ್ವರಸ್ವಾಮಿಯನ್ನು ಅರಸಿಹೋದರೂ, ಅವರನ್ನು ಕಾಣರು. ಸರ್ವೇಶ್ವರ ಅವರಿಂದ ಮರೆಯಾಗಿದ್ದಾರೆ.

7ಅವರು ವ್ಯಭಿಚಾರದಿಂದ ಸರ್ವೇಶ್ವರಸ್ವಾಮಿಗೆ ದ್ರೋಹವೆಸಗಿದ್ದಾರೆ. ಅವರ ಮಕ್ಕಳು ಆ ಸ್ವಾಮಿಯ ಮಕ್ಕಳಲ್ಲ; ಮುಂದಿನ ಅಮಾವಾಸ್ಯೆಯೊಳಗಾಗಿ ಅವರು ನಾಶವಾಗುವರು. ಅವರ ಸ್ವತ್ತೆಲ್ಲಾ ಅಳಿದುಹೋಗುವುದು.

8ಗಿಬ್ಯದಲ್ಲಿ ತುತೂರಿಯನ್ನು ಊದಿರಿ, ರಮಾದಲ್ಲಿ ಕೊಂಬನ್ನು ಮೊಳಗಿಸಿರಿ; ಬೇತಾವೆನಿನಲ್ಲಿ ಕಾಳಗದ ಕರೆನೀಡಿರಿ. ಬೆನ್ಯಾಮಿನೇ, ನಿನ್ನನ್ನು ಬೆನ್ನಟ್ಟಿಬರುತ್ತಿರುವವರನ್ನು ನೋಡು.

9ದಂಡನೆಯ ದಿನದಲ್ಲಿ ಎಫ್ರಯಿಮ್ ಹಾಳಾಗುವುದು. ಇಗೋ, ಇಸ್ರಯೇಲಿನ ಕುಲಗಳ ಭವಿಷ್ಯವನ್ನು ಖಚಿತವಾಗಿ ತಿಳಿಸಿದ್ದೇನೆ:

10“ಜುದೇಯದ ಮುಖಂಡರು, ಗಡಿದಾಟಿ ಆಕ್ರಮಣಮಾಡುವವರನ್ನು ಹೋಲುತ್ತಾರೆ. ಅವರ ಮೇಲೆ ನನ್ನ ಕೋಪಾಗ್ನಿಯನ್ನು ಸುರಿಸುತ್ತೇನೆ.

11ದುರಾಚಾರಗಳನ್ನು ಅನುಸರಿಸಲು ನಿರ್ಧರಿಸಿದ ಕಾರಣ, ಎಫ್ರಯಿಮ್ ನ್ಯಾಯತೀರ್ಪಿಗೆ ಗುರಿಯಾಗಿದೆ; ಹಿಂಸೆಗೀಡಾಗಿದೆ; ನುಚ್ಚುನೂರಾಗಿದೆ.

12ನಾನು ಎಫ್ರಯಿಮಿಗೆ ನುಸಿಯಾಗಿದ್ದೇನೆ; ಯೆಹೂದ ಕುಲಕ್ಕೆ ಕುಟ್ಟೆಯಾಗಿದ್ದೇನೆ.

13“ಎಫ್ರಯಿಮ್ ತನ್ನ ರೋಗವನ್ನು ಅರಿತುಕೊಂಡಿತು; ಜುದೇಯವು ತನ್ನ ಹುಣ್ಣನ್ನು ಕಂಡುಕೊಂಡಿತು. ಆಗ ಎಫ್ರಯಿಮ್ ಅಸ್ಸೀರಿಯಾದ ಕಡೆಗೆ ತಿರುಗಿಕೊಂಡು ಜಗಳಗಂಟಿಯಾದ ರಾಜನ ಬಳಿಗೆ ದೂತರನ್ನು ಕಳುಹಿಸಿತು. ಆದರೆ ಅವನು ನಿಮ್ಮ ರೋಗವನ್ನು ವಾಸಿಮಾಡಲಾರನು, ನಿಮ್ಮ ಹುಣ್ಣನ್ನು ಗುಣಪಡಿಸಲಾರನು.

14ಎಫ್ರಯಿಮಿಗೆ ನಾನು ಸಿಂಹ; ಯೆಹೂದ್ಯಕುಲಕ್ಕೆ ಪ್ರಾಯದ ಸಿಂಹ; ಅದನ್ನು ಸೀಳಿಬಿಡುವೆನು; ಎಳೆದುಕೊಂಡು ಹೋಗುವೆನು; ಯಾರೂ ಅದನ್ನು ನನ್ನಿಂದ ಬಿಡಿಸಿಕೊಳ್ಳಲಾರರು.

15“ನಾನು ನನ್ನ ನಿವಾಸಕ್ಕೆ ಹಿಂದಿರುಗುವೆನು. ನನ್ನ ಜನರು ತಮ್ಮ ದೋಷಫಲವನ್ನು ಅನುಭವಿಸಿ, ನನ್ನ ಸಾನಿಧ್ಯವನ್ನು ಹರಸುವ ತನಕ ಅಲ್ಲೇ ಇರುವೆನು. ಸಂಕಟದಲ್ಲಿ ಸಿಕ್ಕಿಕೊಂಡಾಗ, ಕೂಡಲೆ ಅವರು ನನ್ನನ್ನು ಆಶ್ರಯಿಸುವರು.”