ಹಳೆಯ ಒಡಂಬಡಿಕೆKNCL
1ಇಸ್ರಯೇಲಿನವರೇ, ಸರ್ವೇಶ್ವರಸ್ವಾಮಿಯ ವಾಕ್ಯವನ್ನು ಆಲಿಸಿರಿ: “ಈ ದೇಶದಲ್ಲಿ ಸತ್ಯ, ಪ್ರೀತಿ, ಭಕ್ತಿ ಎಂಬುದೇ ಇಲ್ಲ. ಇಲ್ಲಿನ ನಿವಾಸಿಗಳ ಮೇಲೆ ಸರ್ವೇಶ್ವರ ಆಪಾದನೆ ಹೊರಿಸಿದ್ದಾರೆ.
2ಸುಳ್ಳುಸಾಕ್ಷಿ, ನರಹತ್ಯೆ, ಕಳ್ಳತನ, ವ್ಯಭಿಚಾರ ಇವೆಲ್ಲ ತುಂಬಿಕೊಂಡಿವೆ; ದೊಂಬಿದಾಂಧಲೆಗಳು ನಡೆಯುತ್ತಿವೆ, ನಾಡೆಲ್ಲ ರಕ್ತಮಯವಾಗಿದೆ.
3ಇದರಿಂದ ನಾಡು ಶೋಕಸಾಗರದಲ್ಲಿ ಮುಳುಗಿದೆ. ಅದರ ನಿವಾಸಿಗಳೆಲ್ಲ ನರಳುತ್ತಿದ್ದಾರೆ. ನೆಲದ ಮೇಲಿನ ಜಂತುಗಳು, ಆಕಾಶದ ಪಕ್ಷಿಗಳು ಬಳಲುತ್ತಿವೆ. ಜಲಜಂತುಗಳು ಸಹ ನಶಿಸಿಹೋಗುತ್ತಿವೆ.
4“ಯಾರೂ ಪ್ರತಿಭಟಿಸದಿರಲಿ, ಯಾರೂ ಜನರನ್ನು ಖಂಡಿಸದಿರಲಿ. ನನ್ನ ಆಪಾದನೆ ಇರುವುದು, ಎಲೈ ಯಾಜಕರೇ, ನಿಮ್ಮ ಮೇಲೆಯೇ.
5ಹಗಲಿನಲ್ಲೇ ನೀವು ಮುಗ್ಗರಿಸುತ್ತೀರಿ. ರಾತ್ರಿಯಲ್ಲಿ ಪ್ರವಾದಿಗಳು ಸಹ ನಿಮ್ಮೊಂದಿಗೆ ಮುಗ್ಗರಿಸುತ್ತಾರೆ. ನಿಮ್ಮ ವಂಶವೃಕ್ಷವನ್ನೇ ನಾನು ನಿರ್ಮೂಲಮಾಡುವೆನು.
6ಜನರು ಜ್ಞಾನಹೀನರಾಗಿ ಅಳಿದುಹೋಗುತ್ತಿದ್ದಾರೆ. “ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ; ನಾನು ಸಹ ಯಾಜಕವರ್ಗದಿಂದ ನಿಮ್ಮನ್ನು ವರ್ಜಿಸಿಬಿಡುತ್ತೇನೆ. ನೀವು ದೇವರ ಧರ್ಮೋಪದೇಶವನ್ನು ಮರೆತುಬಿಟ್ಟಿದ್ದೀರಿ; ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.
7“ಅವರ ಸಂತಾನ ಹೆಚ್ಚಿದ ಹಾಗೆಲ್ಲ ಅವರು ನನ್ನ ವಿರುದ್ಧ ಪಾಪಮಾಡುತ್ತಾ ಬಂದಿದ್ದಾರೆ. ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುತ್ತೇನೆ.
8ನನ್ನ ಜನರ ಪಾಪವೇ ಅವರಿಗೆ ಜೀವನಾಧಾರ. ಎಂತಲೇ ಅವರು ಪಾಪಕೃತ್ಯಗಳನ್ನೇ ಅಧಿಕವಾಗಿ ಬಯಸುತ್ತಾರೆ.
9ಪ್ರಜೆಗಳಂತೆಯೇ ಯಾಜಕ, ನಿಮ್ಮ ದುಷ್ಕೃತ್ಯಗಳಿಗೆ ತಕ್ಕ ದಂಡನೆಯನ್ನು ವಿಧಿಸುತ್ತೇನೆ. ಅವುಗಳ ಪ್ರತಿಫಲವನ್ನು ನೀವೇ ಅನುಭವಿಸುವಂತೆ ಮಾಡುತ್ತೇನೆ.
10ಎಷ್ಟು ತಿಂದರೂ ನಿಮಗೆ ತೃಪ್ತಿಯಾಗದು. ಎಷ್ಟು ವ್ಯಭಿಚಾರಗೈದರೂ ನಿಮಗೆ ಸಂತಾನ ಪ್ರಾಪ್ತಿಯಾಗದು. ಕಾರಣ, ನೀವು ವೇಶ್ಯಾಚಾರಕ್ಕಾಗಿ ಸರ್ವೇಶ್ವರನನ್ನೇ ತಿರಸ್ಕರಿಸಿದ್ದೀರಿ.
11“ಮದ್ಯಪಾನ, ದ್ರಾಕ್ಷಾರಸ - ಇವು ಜನರನ್ನು ಬುದ್ಧಿಹೀನರನ್ನಾಗಿ ಮಾಡುತ್ತವೆ.
12ನನ್ನ ಜನರು ಮರದ ತುಂಡನ್ನು ಹಿಡಿದು ಕಣಿ ಕೇಳುತ್ತಾರೆ; ಕೈಯಲ್ಲಿ ಹಿಡಿದ ದೊಣ್ಣೆಯಿಂದ ವಿವೇಕವಾಣಿಯನ್ನು ಪಡೆಯಲೆತ್ನಿಸುತ್ತಾರೆ. ವ್ಯಭಿಚಾರಗುಣ ಅವರನ್ನು ತಪ್ಪುದಾರಿಗೆ ಎಳೆದಿದೆ. ದೇವರ ಸದ್ಭಕ್ತಿಯನ್ನು ತೊರೆದು ಅವರು ಧರ್ಮಭ್ರಷ್ಠರಾಗಿದ್ದಾರೆ.
13ಅವರು ಗಿರಿಶಿಖರಗಳ ಮೇಲೆ ಬಲಿಯನರ್ಪಿಸುತ್ತಾರೆ. ಬೆಟ್ಟಗುಡ್ಡಗಳ ಮೇಲೆ ಧೂಪಹಾಕುತ್ತಾರೆ. ದಟ್ಟ ನೆರಳಿನ ಅಲ್ಲೋನ್, ಲಿಬ್ನೆ, ಏಲಾ ವೃಕ್ಷಗಳ ಅಡಿಯಲ್ಲಿ ಇಂತಹುದನ್ನೆಲ್ಲ ಮಾಡುತ್ತಾರೆ. ಹೀಗಿರಲು ನಿಮ್ಮ ಪುತ್ರಿಯರು ಸೂಳೆಯರಾಗುವರು. ನಿಮ್ಮ ಸೊಸೆಗಳು ವ್ಯಭಿಚಾರಿಣಿಗಳಾಗುವರು. ಇದರಲ್ಲಿ ಆಶ್ಚರ್ಯವೇನಿಲ್ಲ.
14ಸೂಳೆಯರಾಗಿ ನಡೆಯುವ ಪುತ್ರಿಯರನ್ನು ನಾನು ದಂಡಿಸುವುದಿಲ್ಲ, ವ್ಯಭಿಚಾರ ಮಾಡುವ ಸೊಸೆಗಳನ್ನು ನಾನು ಶಿಕ್ಷಿಸುವುದಿಲ್ಲ. ಕಾರಣ, ನೀವೇ [1] ಸೂಳೆಯರನ್ನು ಸೇರಿಕೊಂಡು ಅಡ್ಡದಾರಿ ಹಿಡಿಯುತ್ತೀರಿ. ದೇವದಾಸಿಯರೊಂದಿಗೆ ಸೇರಿ ಬಲಿಯನ್ನು ಅರ್ಪಿಸುತ್ತೀರಿ. ‘ಮತಿಹೀನರು ಗತಿಸಿಹೋಗುವರು’ ಎಂಬ ಹೇಳಿಕೆ ಖಂಡಿತವಾಗಿ ನಿಮಗೆ ಅನ್ವಯಿಸುತ್ತದೆ.
15“ಓ ಇಸ್ರಯೇಲ್ ನೀನು ವೇಶ್ಯೆಯಾಗಿ ನಡೆದರೂ ಜುದೇಯ ನಾಡು ಆ ದೋಷಕ್ಕೆ ಒಳಗಾಗದಿರಲಿ. ಯೆಹೂದ್ಯರೇ, ಗಿಲ್ಗಾಲಿಗೆ ಬರಬೇಡಿ. ಬೇತಾವೆನಿಗೆ ಯಾತ್ರೆ ಹೋಗಬೇಡಿ. ‘ಜೀವಸ್ವರೂಪನಾದ ಸರ್ವೇಶ್ವರನಾಣೆ’ ಎಂದು ಪ್ರಮಾಣಮಾಡಬೇಡಿ.
16ಇಸ್ರಯೇಲಿನವರು ಹತೋಟಿಗೆ ಬಾರದ ಹೋರಿಯಂತೆ ಮೊಂಡಾಗಿದ್ದಾರೆ. ಸರ್ವೇಶ್ವರ ಅವರನ್ನು ಈಗ ವಿಶಾಲವಾದ ಹುಲ್ಲುಗಾವಲುಗಳಲ್ಲಿ ಕುರಿಗಳಂತೆ ಮೇಯಿಸಲು ಸಾಧ್ಯವೇ?
17ಎಫ್ರಯಿಮ್ ವಿಗ್ರಹಗಳ ಪ್ರಭಾವಕ್ಕೆ ಒಳಗಾಗಿದೆ. ಅದನ್ನು ಅದರಷ್ಟಕ್ಕೆ ಬಿಟ್ಟುಬಿಡಿ.
18ಅವರು ಮದ್ಯಪಾನವನ್ನು ಮಾಡಿದ ನಂತರ ವ್ಯಭಿಚಾರಕ್ಕೆ ಇಳಿಯುತ್ತಾರೆ. ಮಾನಕ್ಕಿಂತ ಅವಮಾನವೇ ಅವರಿಗೆ ಅತಿ ಪ್ರಿಯ.
19ಬಿರುಗಾಳಿ ಅವರನ್ನು ಬಡಿದೆತ್ತಿಕೊಂಡು ಹೋಗುವುದು. ಅವರು ವಿಗ್ರಹಗಳಿಗೆ ಅರ್ಪಿಸುತ್ತಿದ್ದ ಬಲಿಗಳಿಗಾಗಿ ನಾಚಿಕೆಪಡುವರು.