ಹಳೆಯ ಒಡಂಬಡಿಕೆKNCL
1ಜುದೇಯ ನಾಡಿನಲ್ಲಿ ಉಜ್ಜೀಯ, ಯೋತಾಮ, ಆಹಾಜ ಮತ್ತು ಹಿಜ್ಕೀಯ ಇವರು ಅರಸರಾಗಿದ್ದಾಗ ಹಾಗೂ ಇಸ್ರಯೇಲ್ ನಾಡಿನಲ್ಲಿ ಯೋವಾಷನ ಮಗ ಯಾರೊಬ್ಬಾಮನು ಆಳುತ್ತಿದ್ದ ಕಾಲದಲ್ಲಿ, ಬೆಯೇರಿಯನ ಮಗನಾದ ಹೊಶೇಯನಿಗೆ ದೇವರು ದಯಪಾಲಿಸಿದ ಸಂದೇಶವಿದು:
2ಸರ್ವೇಶ್ವರಸ್ವಾಮಿ ಪ್ರಥಮವಾಗಿ ಹೊಶೇಯನ ಸಂಗಡ ಮಾತನಾಡುತ್ತಾ ಆತನಿಗೆ ಹೇಳಿದ್ದೇನೆಂದರೆ: “ನೀನು ಹೋಗಿ ವ್ಯಭಿಚಾರಿಣಿಯೊಬ್ಬಳನ್ನು ಮದುವೆ ಮಾಡಿಕೊ. ಆಕೆಗೆ ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೊ. ಏಕೆಂದರೆ, ನನ್ನ ಪ್ರಜೆ ನನ್ನನ್ನು ತೊರೆದುಬಿಟ್ಟು ವ್ಯಭಿಚಾರದಲ್ಲಿ ಮುಳುಗಿದೆ ಎಂಬುದಕ್ಕೆ ಇದು ನಿದರ್ಶನವಾಗಿರಲಿ.”
3ಅಂತೆಯೇ ಹೊಶೇಯನು ದಿಬ್ಲಯಿಮನ ಮಗಳಾದ ಗೋಮೆರಳನ್ನು ಮದುವೆಯಾದನು. ಅವಳು ಗರ್ಭಿಣಿಯಾಗಿ ಅವನಿಗೆ ಒಂದು ಗಂಡುಮಗುವನ್ನು ಹೆತ್ತಳು.
4ಆಗ ಸರ್ವೇಶ್ವರ, ಹೊಶೇಯನಿಗೆ, “ಈ ಮಗುವಿಗೆ ಜೆಸ್ರೀಲ್ [1] ಎಂದು ಹೆಸರಿಡು. ಏಕೆಂದರೆ, ಇಸ್ರಯೇಲ್ನಲ್ಲಿ ಹರಿಸಿದ ರಕ್ತಪಾತಕ್ಕೆ ಪ್ರತಿಯಾಗಿ ಸ್ವಲ್ಪಕಾಲದಲ್ಲೆ ಯೇಹುವಿನ ಮನೆತನವನ್ನು ದಂಡಿಸುವೆನು; ಇಸ್ರಯೇಲ್ ರಾಜ್ಯವನ್ನು ಅಂತ್ಯಗೊಳಿಸುವೆನು.
5ಅಷ್ಟೇ ಅಲ್ಲ, ಅಂದೇ ಜೆಸ್ರೀಲಿನ ಕಣಿವೆಯಲ್ಲಿ ಇಸ್ರಯೇಲಿನ ಬಿಲ್ಲುಶಕ್ತಿಯನ್ನು ಮುರಿದುಬಿಡುವೆನು,” ಎಂದರು.
6ಗೋಮೆರಳು ಪುನಃ ಗರ್ಭಿಣಿಯಾಗಿ ಒಂದು ಹೆಣ್ಣುಮಗುವನ್ನು ಹೆತ್ತಳು. ಆಗ ಸರ್ವೇಶ್ವರ, ಹೊಶೇಯನಿಗೆ: “ಇವಳನ್ನು ‘ಲೋರುಹಾಮ’ ಎಂದು ಕರೆ. ಏಕೆಂದರೆ, ನಾನು ಇನ್ನು ಇಸ್ರಯೇಲರನ್ನು ಪ್ರೀತಿಸೆನು; ಇನ್ನು ಅವರನ್ನು ಕ್ಷಮಿಸೆನು.
7ಆದರೆ ಯೆಹೂದ್ಯ ಮನೆತನವನ್ನು ಪ್ರೀತಿಸಿ ಉದ್ಧರಿಸುವೆನು. ಬಿಲ್ಲುಬಾಣ, ಕತ್ತಿಕಾಳಗ, ಕುದುರೆರಾಹುತರು ಇವುಗಳಿಂದಲ್ಲ, ದೇವರಾದ ಸರ್ವೇಶ್ವರನ ಶಕ್ತಿಯಿಂದಲೇ ಅವರನ್ನು ರಕ್ಷಿಸುವೆನು,” ಎಂದರು.
8ಮಗುವು ಮೊಲೆಬಿಟ್ಟನಂತರ ಗೋಮೆರಳು ಪುನಃ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು.
9ಆಗ ಸರ್ವೇಶ್ವರ: “ಈ ಮಗುವಿಗೆ ‘ಲೋ-ಅಮ್ಮಿ’ ಎಂದು ನಾಮಕರಣ ಮಾಡು. ಏಕೆಂದರೆ, ಇನ್ನು ನೀವು ನನ್ನ ಪ್ರಜೆಯಲ್ಲ; ನಾನು ನಿಮ್ಮ ದೇವರಲ್ಲ,” ಎಂದರು.
10ಆದರೂ ಇಸ್ರಯೇಲ್ ಜನಾಂಗ ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವುದು. ದೇವರು ಅವರಿಗೆ ಇಂದು, “ನೀವು ನನ್ನ ಪ್ರಜೆಯಲ್ಲ” ಎಂದಿದ್ದಾರೆ; ಆದರೂ, “ನೀವು ಜೀವಸ್ವರೂಪಿಯಾದ ದೇವರ ಮಕ್ಕಳು” ಎನಿಸಿಕೊಳ್ಳುವ ದಿನ ಬರುವುದು.
11ಯೆಹೂದ್ಯಜನರೂ ಇಸ್ರಯೇಲಿನ ಜನರೂ ಪುನಃ ಒಂದುಗೂಡುವರು. ಒಬ್ಬನೇ ಅಧಿಪತಿಯನ್ನು ಆರಿಸಿಕೊಳ್ಳುವರು. ಅವರೆಲ್ಲರೂ ನಾನಾ ದೇಶಗಳಿಂದ [2] ಹೊರಟುಬರುವರು. ಜೆಸ್ರೀಲಿನ ಆ ದಿನವು ಮಹತ್ತಾದುದು.