ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಜೆಕಿಯೇಲನ ಗ್ರಂಥ 8

1ಅದು ಆರನೆಯ ವರ್ಷದ ಆರನೆಯ ತಿಂಗಳಿನ ಐದನೆಯ ದಿನ. [1] ನಾನೂ ಯೆಹೂದದ ಹಿರಿಯರೂ ನನ್ನ ಮನೆಯೊಳಗೆ ಎದುರುಬದುರಾಗಿ ಕುಳಿತಿದ್ದೆವು. ಸರ್ವೇಶ್ವರನಾದ ದೇವರ ಹಸ್ತಸ್ಪರ್ಶದಿಂದ ನಾನು ಪರವಶನಾದೆ.

2ಇಗೋ, ನಾನು ನೋಡುತ್ತಿದ್ದಂತೆ ಬೆಂಕಿ ಉರಿಯುತ್ತದೋ ಎಂಬಂತೆ ಮನುಷ್ಯಾಕೃತಿಯೊಂದು [2] ನನಗೆ ಕಾಣಿಸಿತು; ಸೊಂಟದ ಹಾಗೆ ತೋರುವ ಅದರ ಮಧ್ಯಭಾಗದಿಂದ ಕೆಳಗಡೆ ಬೆಂಕಿ ಉರಿಯುತ್ತಿತ್ತು; ಅದರ ಮಧ್ಯಭಾಗದಿಂದ ಮೇಲ್ಗಡೆ ಸುವರ್ಣವು ಥಳಥಳಿಸುತ್ತದೋ ಎಂಬಂತೆ ಅದ್ಭುತ ಕಾಂತಿಯೊಂದು ಹೊಳೆಯಿತು.

3ಆಗ ಆ ಮನುಷ್ಯಾಕೃತಿ ಮಾನವನ ಹಸ್ತದಂಥ ಹಸ್ತವನ್ನು ಚಾಚಿ ನನ್ನ ಚಂಡಿಕೆಯನ್ನು ಹಿಡಿಯಿತು. ದೇವರಾತ್ಮ ನನ್ನನ್ನು ಎತ್ತಿಕೊಂಡು ಭೂಮ್ಯಾಕಾಶಗಳ ನಡುವೆ ಜೆರುಸಲೇಮಿನವರೆಗೆ ಒಯ್ದಿತು. ಅಲ್ಲಿನ ದೇವಾಲಯದ ಒಳಗಣ ಪ್ರಾಕಾರದ ಉತ್ತರ ಬಾಗಿಲ ಮುಂದೆ, ದೇವರನ್ನು ರೋಷಗೊಳಿಸುವ ವಿಗ್ರಹವು ಮೊದಲಿದ್ದ ಸ್ಥಳದಲ್ಲಿ ನಿಲ್ಲಿಸಿದ ಹಾಗೆ ಆ ದೇವದರ್ಶನದಲ್ಲಿ ನನಗೆ ಕಂಡುಬಂದಿತು.

4ಆಗ ಇಗೋ, ಇಸ್ರಯೇಲಿನ ದೇವರ ಮಹಿಮಾದ್ಭುತ ದರ್ಶನವು ಬಯಲುಸೀಮೆಯಲ್ಲಿ ಆದಂತೆ ಇಲ್ಲಿಯೂ ನನಗಾಯಿತು.

5ಆಗ ಅವರು ನನಗೆ, “ನರಪುತ್ರನೇ, ಉತ್ತರಕ್ಕೆ ಕಣ್ಣೆತ್ತಿ ನೋಡು,” ಎಂದು ಹೇಳಿದರು; ಅಂತೆಯೇ ನಾನು ಉತ್ತರಕ್ಕೆ ಕಣ್ಣೆತ್ತಿ ನೋಡಿದೆ. ಇಗೋ ದೇವರನ್ನು ರೋಷಗೊಳಿಸುವ ಅದೇ ವಿಗ್ರಹವು ಬಲಿಪೀಠದ ಬಾಗಿಲ ಉತ್ತರದಲ್ಲಿ ಪ್ರವೇಶದ್ವಾರದ ಮುಂದೆ ನಿಂತಿತ್ತು.

6ಆಗ ಅವರು ನನಗೆ, “ನರಪುತ್ರನೇ, ಇವರು ಮಾಡುವುದನ್ನು ನೋಡಿದೆಯಾ? ಇಸ್ರಯೇಲ್ ವಂಶದವರು ಇಲ್ಲಿ ನಡೆಸುವ ಅಧಿಕ ದುರಾಚಾರಗಳನ್ನೆಲ್ಲ ಕಂಡೆಯಾ? ಇದರಿಂದ ನಾನು ನನ್ನ ಪವಿತ್ರಾಲಯವನ್ನು ಬಿಟ್ಟು ದೂರಹೋಗಬೇಕಾಯಿತು. ಬಾ, ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿದರು.

7ಆಮೇಲೆ ದೇವರು ನನ್ನನ್ನು ಪ್ರಾಕಾರದ ಬಾಗಿಲಿಗೆ ಬರಮಾಡಿದರು; ಇಗೋ, ಆ ಗೋಡೆಯಲ್ಲಿ ಒಂದು ರಂಧ್ರವು ನನಗೆ ಕಾಣಿಸಿತು.

8ಆಗ ಅವರು ನನಗೆ, “ನರಪುತ್ರನೇ, ಗೋಡೆಯನ್ನು ತೋಡು,” ಎಂದು ಹೇಳಿದರು. ನಾನು ಗೋಡೆಯನ್ನು ತೋಡಿದೆ. ಆಗ ಇಗೋ, ಒಂದು ಬಾಗಿಲು ಕಾಣಿಸಿತು.

9ದೇವರು ನನಗೆ, “ನೀನು ಒಳಹೊಕ್ಕು ಜನರು ಇಲ್ಲಿ ನಡೆಸುವ ಅಸಹ್ಯ ದುಷ್ಕಾರ್ಯಗಳನ್ನು ನೋಡು,” ಎಂದು ಹೇಳಿದರು. ನಾನು ಹೊಕ್ಕು ನೋಡಿದೆ;

10ಅಕಟಾ, ಎಲ್ಲಾ ಜಾತಿಯ ಕ್ರಿಮಿಕೀಟಗಳು, ಅಸಹ್ಯ ಮೃಗಗಳು ಹಾಗು ಇಸ್ರಯೇಲ್ ವಂಶದವರು ಪೂಜಿಸುವ ಸಕಲ ಮೂರ್ತಿಗಳು ಆ ಗೋಡೆಯ ಸುತ್ತಲೂ ಚಿತ್ರಿತವಾಗಿದ್ದವು.

11ಇಸ್ರಯೇಲ್ ವಂಶದ ಎಪ್ಪತ್ತು ಮಂದಿ ಹಿರಿಯರೂ ಅವರ ಮಧ್ಯದಲ್ಲಿ ಶಾಫಾನನ ಮಗ ಯಾಜನ್ಯನೂ ತಮ್ಮ ತಮ್ಮ ಕೈಗಳಲ್ಲಿ ಧೂಪಾರತಿಗಳನ್ನು ಹಿಡಿದುಕೊಂಡು ಆ ಚಿತ್ರಗಳ ಮುಂದೆ ನಿಂತಿದ್ದರು: ಧೂಪದ ಸುವಾಸನೆಯ ಧೂಮವು ಮೇಘವಾಗಿ ಏರುತ್ತಿತ್ತು.

12ಆಗ ದೇವರು ನನಗೆ, “ನರಪುತ್ರನೇ, ಇಸ್ರಯೇಲ್ ವಂಶದ ಹಿರಿಯರೆಲ್ಲರು ನಾನಾ ರೂಪಗಳಿಂದ ಚಿತ್ರಿತವಾದ ತಮ್ಮ ತಮ್ಮ ಕೊಠಡಿಗಳೊಳಗೆ, ಕತ್ತಲೆಯಲ್ಲಿ ನಡೆಸುವ ಕೆಲಸವನ್ನು ನೋಡಿದೆಯಾ? ‘ಸರ್ವೇಶ್ವರ ನಮ್ಮನ್ನು ನೋಡನು, ಸರ್ವೇಶ್ವರ ನಾಡನ್ನು ತೊರೆದುಬಿಟ್ಟಿದ್ದಾನೆ,’ ಎಂದು ಮಾತಾಡಿಕೊಳ್ಳುತ್ತಾರಷ್ಟೆ,” ಎಂಬುದಾಗಿ ಹೇಳಿದರು.

13ಆಮೇಲೆ ದೇವರು ನನಗೆ, “ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿ

14ನನ್ನನ್ನು ಸರ್ವೇಶ್ವರನ ಆಲಯದ ಉತ್ತರ ಬಾಗಿಲ ಮುಂದಕ್ಕೆ ಕರೆತಂದರು; ಇಗೋ, ಅಲ್ಲಿ ಹೆಂಗಸರು ‘ತಮ್ಮೂಜ್’ ದೇವತೆಗಾಗಿ ಅಳುತ್ತಾ ಕುಳಿತಿದ್ದರು.

15ಇದಾದ ಮೇಲೆ ದೇವರು ನನಗೆ, “ನರಪುತ್ರನೇ, ಇದನ್ನು ನೋಡಿದೆಯಾ? ಇವುಗಳಿಗಿಂತ ಮತ್ತೂ ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿ

16ಸರ್ವೇಶ್ವರನ ಆಲಯದ ಒಳಗಣ ಪ್ರಾಕಾರದೊಳಕ್ಕೆ ನನ್ನನ್ನು ಕರೆದುತಂದರು; ಇಗೋ, ಆ ಆಲಯದ ಬಾಗಿಲ ಮುಂದೆ, ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಸುಮಾರು ಇಪ್ಪತ್ತೈದು ಜನರು ಸರ್ವೇಶ್ವರನ ಆಲಯಕ್ಕೆ ಬೆನ್ನುಮಾಡಿ ಪೂರ್ವದ ಕಡೆಗೆ ಮುಖಮಾಡಿ ಉದಯಕಾಲದ ಸೂರ್ಯನನ್ನು ಪೂಜಿಸುತ್ತಿದ್ದರು.

17ಆಗ ದೇವರು ನನಗೆ, “ನರಪುತ್ರನೇ, ನೋಡಿದೆಯಾ? ಯೆಹೂದವಂಶದವರು ತಾವು ಇಲ್ಲಿ ನಡೆಸುವ ಅಸಹ್ಯಕಾರ್ಯಗಳು ಅಲ್ಪವೆಂದು ಭಾವಿಸಿದ್ದಾರೋ? ನಾಡನ್ನು ಹಿಂಸಾಕೃತ್ಯಗಳಿಂದ ತುಂಬಿಸಿದ್ದಲ್ಲದೆ ನನ್ನನ್ನು ಕೆಣಕಬೇಕೆಂದೇ ಮತ್ತೆ ಯತ್ನಿಸುತ್ತಿದ್ದಾರೆ; ನೋಡು, ಪತ್ರೆಯನ್ನು ಮೂಗಿಗೆ ಒತ್ತಿಕೊಳ್ಳುತ್ತಾರೆ.

18ಆದಕಾರಣ ನಾನೂ ಕೋಪೋದ್ರೇಕದಿಂದ ವರ್ತಿಸುವೆನು. ಅವರನ್ನು ಕಟಾಕ್ಷಿಸೆನು, ಉಳಿಸೆನು; ಅವರು ನನ್ನ ಕಿವಿಯಲ್ಲಿ ಎಷ್ಟು ಗಟ್ಟಿಯಾಗಿ ಕೂಗಿಕೊಂಡರೂ ನಾನು ಆಲಿಸೆನು.”