ಹಳೆಯ ಒಡಂಬಡಿಕೆKNCL

ಪ್ರವಾದಿ ಯೆಜೆಕಿಯೇಲನ ಗ್ರಂಥ 2

1ಸರ್ವೇಶ್ವರ ನನಗೆ, “ನರಪುತ್ರನೇ, ಎದ್ದು ನಿಲ್ಲು; ನಿನ್ನ ಸಂಗಡ ಮಾತಾಡಬೇಕು,” ಎಂದು ಹೇಳಿದರು.

2ಅವರು ಈ ಮಾತನ್ನು ಹೇಳಿದ ಕೂಡಲೆ ದೇವರಾತ್ಮ ನನ್ನೊಳಗೆ ಸೇರಿ ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತಾಡಿದಾತನ ನುಡಿಯನ್ನು ಚೆನ್ನಾಗಿ ಕೇಳಿದೆ.

3ಅವರು ನನಗೆ ಹೀಗೆ ಹೇಳಿದರು, “ನರಪುತ್ರನೇ, ನನಗೆ ವಿಮುಖರಾಗಿ ದ್ರೋಹಮಾಡಿದ ಜನಾಂಗದವರಾದ ಇಸ್ರಯೇಲರ ಬಳಿಗೆ ನಿನ್ನನ್ನು ಕಳುಹಿಸುವೆನು; ಈ ದಿನದವರೆಗೆ ಅವರೂ ಅವರ ಪಿತೃಗಳೂ ನನ್ನನ್ನು ಪ್ರತಿಭಟಿಸುತ್ತಲೇ ಬಂದಿದ್ದಾರೆ.

4ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ ಹಟಗಾರರೂ ಆಗಿದ್ದಾರೆ; ನೀನು ಅವರಿಗೆ, ‘ಸರ್ವೇಶ್ವರನಾದ ದೇವರೇ ಇಂತೆನ್ನುತ್ತಾರೆ,’ ಎಂದು ನುಡಿ.

5ಅವರು ದ್ರೋಹಿ ವಂಶದವರು, ಒಂದು ವೇಳೆ ಕೇಳದೆ ಹೋಗಬಹುದು; ಕೇಳಿದರೂ ಕೇಳದೆ ಹೋದರೂ ಒಬ್ಬ ಪ್ರವಾದಿ ತಮ್ಮ ಮಧ್ಯೆ ಕಾಣಿಸಿಕೊಂಡಿದ್ದಾನೆಂದು ತಿಳಿದುಕೊಳ್ಳುವರು.

6“ನರಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯೆ ಇದ್ದರೂ ಅವರಿಗೆ ಭಯಪಡಬೇಡ. ಅವರ ಗದರಿಕೆಗೆ ಹೆದರದಿರು; ಅವರು ದ್ರೋಹಿ ವಂಶದವರು; ಅವರ ಬಿರುನುಡಿಗೆ ದಿಗಿಲು ಪಡಬೇಡ, ಅವರ ಬಿರುನೋಟಕ್ಕೆ ಬೆಚ್ಚದಿರು.

7ಅವರು ಕೇಳಲಿ ಅಥವಾ ಬಿಡಲಿ ನೀನು ನನ್ನ ವಾಕ್ಯವನ್ನು ಅವರಿಗೆ ನುಡಿಯಲೇಬೇಕು. ಅವರು ದ್ರೋಹಿಗಳೇ ಸರಿ.

8“ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು: ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿತೆರೆದು ತಿಂದುಬಿಡು,” ಎಂದರು.

9ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು; ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು.

10ಆ ಸುರುಳಿಯನ್ನು ನನ್ನೆದುರಿನಲ್ಲೆ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಬರೆದಿತ್ತು: ಅದು ಪ್ರಲಾಪ, ಶೋಕ, ಶಾಪ ಇವುಗಳ ಬರಹದಿಂದ ಕೂಡಿತ್ತು.